Advertisement

ನಾಪತ್ತೆಯಾಗಿ ದಿನ 28; ಸಿಗದ ಮಹತ್ವದ ಸುಳಿವು

05:13 AM Jan 11, 2019 | |

ಮಲ್ಪೆ: ಸುವರ್ಣ ತ್ರಿಭುಜ ಬೋಟ್‌ ಮತ್ತು ಅದರಲ್ಲಿದ್ದ 7 ಮಂದಿ ನಾಪತ್ತೆ ಪ್ರಕರಣ ದಿನೇ ದಿನೇ ಜಟಿಲಗೊಳ್ಳುತ್ತಿದೆ. ಮೀನುಗಾರರನ್ನು ಸುರಕ್ಷಿತವಾಗಿ ಮರಳಿ ಕರೆತರುವುದಕ್ಕಾಗಿ ಎಲ್ಲ ಆಯಾಮಗಳಲ್ಲಿ ಉನ್ನತ ಮಟ್ಟದ ಪ್ರಯತ್ನ, ಶೋಧ ನಡೆಸಿದರೂ ಇನ್ನೂ ಫ‌ಲ ಲಭಿಸಿಲ್ಲ. ಯಾವುದೇ ಸುಳಿವು ಲಭ್ಯವಾಗದೆ ಕಾರ್ಯಾಚರಣೆಗೆ ಹಿನ್ನೆಡೆಯಾಗುತ್ತಿದ್ದು, ಮನೆಮಂದಿಯ ಆತಂಕ ಹೆಚ್ಚುತ್ತಿದೆ.

Advertisement

ಬುಧವಾರ ರಾತ್ರಿ ಜಿಲ್ಲೆಯ 10 ಮಂದಿ ಪೊಲೀಸರ 2 ತಂಡಗಳು ಕೇರಳಕ್ಕೆ ತೆರಳಿ ದಿಯು ಕಡಲ ತೀರದ ಪ್ರಾಂತ್ಯದಲ್ಲಿ ಶೋಧ ನಡೆಸಿವೆ. ಇಲ್ಲಿಯ ವರೆಗೆ ಗೋವಾ, ಮಹಾರಾಷ್ಟ್ರ ಗಡಿಯಲ್ಲಿ ಮಾತ್ರ ಹುಡುಕಾಟ ನಡೆಸಲಾಗಿತ್ತು. ಕೇರಳದ ಸ್ಥಳೀಯ ಮೀನುಗಾರರು ಮತ್ತು ಪೊಲೀಸರ ನೆರವನ್ನು ಉಡುಪಿಯ ಪೊಲೀಸರು ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಎಲ್ಲ ನದಿಗಳಲ್ಲಿ ಶೋಧ
ಗೋವಾ ಮತ್ತು ಸಿಂದುಧುರ್ಗ, ಮಹಾರಾಷ್ಟ್ರ ಗಡಿಯ ಉದ್ದಗಲಕ್ಕೆ ನದಿಗಳು ಸಮುದ್ರವನ್ನು ಸಂಧಿಸುವಲ್ಲಿ ಶೋಧ ನಡೆಯುತ್ತಿದೆ. ದೊಡ್ಡ ಮತ್ತು ಸಣ್ಣ ನದಿ ಗಳಲ್ಲಿ ಕರಾವಳಿ ಕಾವಲು ಪಡೆ ಪೊಲೀಸರು ಹುಡುಕಾಟ ನಡೆಸುತ್ತಿ ದ್ದಾರೆ. ಬೋಟು ದೇಶೀಯ ಗಡಿ ಮೀರಿ ಅಂತಾರಾಷ್ಟ್ರೀಯ ಸರಹದ್ದು ಪ್ರವೇಶಿಸಿರಬಹುದೇ ಎಂಬ ಅನುಮಾನ ಇದ್ದು, ಈ ಬಗ್ಗೆಯೂ ಸಂಬಂಧಪಟ್ಟ ಪಡೆಗಳಿಂದ ಕಾರ್ಯಾಚರಣೆ ಮುಂದುವರಿದಿದೆ ಎನ್ನಲಾಗಿದೆ.

ಹಡಗುಗಳ ಮಾಹಿತಿ ಸಂಗ್ರಹ
ಸಿಂಧುದುರ್ಗ ಭಾಗದಲ್ಲಿ ನಾಪತ್ತೆಯಾದ ಬೋಟಿನಿಂದ ಕೊನೆಯ ಲೊಕೇಶನ್‌ ಪತ್ತೆಯಾಗಿತ್ತು. ಮಧ್ಯರಾತ್ರಿ 1 ಗಂಟೆಗೆ ಕೊನೆಯ ಸಿಗ್ನಲ್‌ ಟ್ರೇಸ್‌ ಆಗಿದೆ. ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿ 1ರಿಂದ ಬೆಳಗ್ಗೆ 6 ಗಂಟೆಯವರೆಗೆ ಆ ಜಲಮಾರ್ಗದಲ್ಲಿ ಸಾಗಿದ ಹಡಗುಗಳ ವಿವರವನ್ನು ಉಪಗ್ರಹ ಆಧರಿತ ತಂತ್ರಜ್ಞಾನದಿಂದ ಕಲೆ ಹಾಕಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೆಚ್ಚುವರಿ ಶೋಧಕ್ಕಾಗಿ ಗೂಗಲ್‌, ಉಪಗ್ರಹ ಮಾಹಿತಿ, ಜತೆಗೆ ಹೈದರಾಬಾದ್‌ನ ಇಂಡಿಯನ್‌ ನ್ಯಾಶನಲ್‌ ರಿಸರ್ಚ್‌ ಸೆಂಟರ್‌ ಫಾರ್‌ ಓಶನ್‌ ಇನ್‌ಫಾರ್ಮೇಶನ್‌ ಸಿಸ್ಟಂ ಮತ್ತು ಬೆಂಗಳೂರಿನ ಕರ್ನಾಟಕ ರಾಜ್ಯ ರಿಮೋಟ್‌ ಸೆನ್ಸಿಂಗ್‌ ಆ್ಯಪ್ಲಿಕೇಶನ್‌ ಸೆಂಟರ್‌ಗಳ ನೆರವನ್ನೂ ಕೋರಲಾಗಿದೆ.

Advertisement

ದೈವದ ಅಭಯದಿಂದ ನೆಮ್ಮದಿ
ಉತ್ತರ ಭಾಗದಲ್ಲಿ ಬಂಧನದಲ್ಲಿದ್ದಾರೆ ಎಂಬ ಬೊಬ್ಬರ್ಯ ದೈವದ ನುಡಿಯಿಂದಾಗಿ ನಾಪತ್ತೆಯಾದವರ ಕುಟುಂಬಕ್ಕೆ ಕೊಂಚ ಧೈರ್ಯ, ನೆಮ್ಮದಿ ದೊರಕಿದೆ. ವಾರದ ಹಿಂದೆ ಚಂದ್ರಶೇಖರ ಕೋಟ್ಯಾನ್‌ ಅವರ ಮನೆ ದೈವ ಪಂಜುರ್ಲಿಯ ದರ್ಶನದಲ್ಲೂ ಇದೇ ರೀತಿ ನುಡಿಯಾಗಿತ್ತು. ಹಾಗಾಗಿ ಎಲ್ಲರೂ ಸುರಕ್ಷಿತವಾಗಿ ಬರುತ್ತಾರೆ ಎಂಬ ಭರವಸೆ ಎಲ್ಲರಲ್ಲೂ ಮೂಡಿದೆ. 

ಪ್ರಧಾನಿಗೆ ಪೇಜಾವರಶ್ರೀ ಪತ್ರ 
ಬೋಟ್‌ ಪ್ರಕರಣಕ್ಕೆ ಸಂಬಂಧಿಸಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಮೀನುಗಾರರು ಮತ್ತು ನಾಪತ್ತೆಯಾದ ಮೀನುಗಾರರ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಶೋಧಕ್ಕೆ ಬಳಸಿಕೊಳ್ಳಬೇಕು ಎಂದು ಇದೇವೇಳೆ ಪೇಜಾವರ ಶ್ರೀಗಳು ಪ್ರಧಾನಿ, ಕೇಂದ್ರ ಗೃಹ ಸಚಿವರು, ಕೇಂದ್ರ ರಕ್ಷಣಾ ಸಚಿವರನ್ನು ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಪತ್ರ ಮೂಲಕ ಒತ್ತಾಯಿಸಿದ್ದಾರೆ.

ಇಂದಿನಿಂದ ಮೀನುಗಾರಿಕೆ ಆರಂಭ? 
ಮಲ್ಪೆ: ಇಲ್ಲಿಂದ ಆಳಸಮುದ್ರ ಬೋಟ್‌ಗಳು ಶುಕ್ರವಾರ ರಾತ್ರಿಯಿಂದ ಮೀನುಗಾರಿಕೆಗೆ ತೆರಳುವ ಸಾಧ್ಯತೆ ಇದೆ. ನಾಪತ್ತೆಯಾದ ಮೀನುಗಾರರ ಸುಳಿವು ಸಿಗದೆ ಮೀನುಗಾರಿಕೆಗೆ ಹೋಗುವುದಿಲ್ಲವೆಂದು ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಕಾರ್ಮಿಕರು (ಕಲಸಿಗಳು) ಹಿಂದೇಟು ಹಾಕಿದ್ದರು. ಈಗ ಸಭೆ ನಡೆಸಿ ತೆರಳುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಕಡಲ್ಗಳ್ಳರು ಅಥವಾ ಭಯೋತ್ಪಾದಕರು ಅಪಹರಿಸಿದ್ದಾರೆ ಎಂಬ ಮಾತು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕೇಂದ್ರ ಗೃಹ ಸಚಿವರಲ್ಲಿ ಮಾತನಾಡಿ ಹೆಚ್ಚಿನ ಶೋಧ ಕಾರ್ಯಕ್ಕೆ ವಿನಂತಿಸಿದ್ದಾರೆ. ಕರಾವಳಿ ರಕ್ಷಣಾ ಪಡೆ ಸಹಿತ ವಿವಿಧ ಭದ್ರತಾ ಪಡೆಗಳ ನೆರವನ್ನು ಶೋಧಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಡಾ| ಜಯಮಾಲಾ,  ಜಿಲ್ಲಾ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next