Advertisement

3 ತಿಂಗಳಿನಿಂದ ಸೀಮೆಎಣ್ಣೆ ಇಲ್ಲದೆ ನಾಡದೋಣಿ ಲಂಗರು: 60,500 ಮೀನುಗಾರ ಕುಟುಂಬಗಳು ಕಂಗಾಲು

11:21 AM Oct 30, 2022 | Team Udayavani |

ಮಲ್ಪೆ : ನಾಡದೋಣಿಗೆ ಪೂರೈಕೆಯಾಗುತ್ತಿರುವ ಸೀಮೆಎಣ್ಣೆ ಕಳೆದ ಮೂರು ತಿಂಗಳಿನಿಂದ ಲಭ್ಯವಾಗದ ಕಾರಣ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ನಾಡದೋಣಿ ಗಳು ಲಂಗರು ಹಾಕಿವೆ. ಮೀನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಸಾವಿರಾರು ಕುಟುಂಬಗಳು ದಾರಿ ಕಾಣದಾಗಿವೆ.

Advertisement

ರಾಜ್ಯ ಸರಕಾರದ ಆದೇಶದಂತೆ ನಾಡದೋಣಿ ಮೀನುಗಾರರಿಗೆ ಆಗಸ್ಟ್‌ನಿಂದ ಸೀಮೆಎಣ್ಣೆ ಬಿಡುಗಡೆ ಯಾಗಬೇಕಿತ್ತು. ಆದರೆ ಸರಕಾರ ಈವರೆಗೂ ಆಗಿಲ್ಲ. ಪ್ರಸ್ತುತ ಮತ್ಸéಸಂಪತ್ತು ಇದ್ದರೂ ಸೀಮೆಎಣ್ಣೆ ಸಿಗದ ಕಾರಣ ಮೀನುಗಾರಿಕೆ ಸಾಧ್ಯವಾ ಗುತ್ತಿಲ್ಲ. ಬೇರೆ ಆದಾಯ ಇಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಮೀನುಗಾರ ದಿನೇಶ್‌ ಪಡುಕರೆ ಬೇಸರ ವ್ಯಕ್ತಪಡಿಸಿದ್ದಾರೆ.

ವಾರ್ಷಿಕ 24,090 ಕೆಎಲ್‌ ಸೀಮೆಣ್ಣೆ ಅಗತ್ಯ
ದ.ಕ. 1,345, ಉಡುಪಿ 4,896, ಉ.ಕ.ದಲ್ಲಿ 1,789 ಸೇರಿದಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಒಟ್ಟು 8,030 ಸೀಮೆಎಣ್ಣೆ ಚಾಲಿತ ದೋಣಿಗಳಿದ್ದು ಮಾಸಿಕ 300 ಲೀಟರ್‌ನಂತೆ ವಾರ್ಷಿಕ 24,090 ಕೆ.ಎಲ್‌. ಸೀಮೆಎಣ್ಣೆಯ ಅಗತ್ಯವಿದೆ. ಒಂದು ದೋಣಿಯಲ್ಲಿ ಕನಿಷ್ಠ 6ರಂತೆ ಒಟ್ಟು 60,500 ನಾಡದೋಣಿ ಮೀನುಗಾರರಿದ್ದಾರೆ.

2013ರಿಂದ ಸರಕಾರದ ಆದೇಶದಂತೆ ನಾಡದೋಣಿಗಳಿಗೆ ಮಾಸಿಕ 300 ಲೀಟರ್‌ನಂತೆ ಸೀಮೆಎಣ್ಣೆ ನೀಡಲಾಗುತ್ತದೆ. ಆ ಅವಧಿಯಲ್ಲಿ ರಾಜ್ಯದಲ್ಲಿ 4,514 ನಾಡದೋಣಿಗಳಿದ್ದವು. ಆ ಪ್ರಕಾರವೇ ಪ್ರಸ್ತುತ ದಿನದಲ್ಲೂ ಸೀಮೆಎಣ್ಣೆ ಬಿಡುಗಡೆಯಾಗುತ್ತದೆ. ಪ್ರಸ್ತುತ 8,030 ನಾಡ ದೋಣಿಗಳಿದ್ದರೂ ಸರಕಾರ ಸೀಮೆ ಎಣ್ಣೆ ಪೂರೈಕೆ ಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಇದುವರೆಗೂ ನಾಡದೋಣಿ ಮೀನುಗಾರರು ರಾಜ್ಯಕ್ಕೆ ಪೂರೈಕೆಯಾಗುತ್ತಿದ್ದ 4,514 ದೋಣಿಗಳ ಎಣ್ಣೆ ಯನ್ನೇ ಎಲ್ಲ ದೋಣಿಗಳಿಗೆ ಹಂಚುತ್ತಿದ್ದಾರೆ. ಇದ ರಿಂದ ಅವರಿಗೆ ಮಾಸಿಕ 150 ಲೀ. ಮಾತ್ರ ಸಿಗುತ್ತಿದೆ. 2022-23ರ ಎಪ್ರಿಲ್‌ನಿಂದ 8,030 ದೋಣಿಗಳಿಗೆ ಸೀಮೆಎಣ್ಣೆ ನೀಡಬೇಕು ಎಂದು ಮೀನುಗಾರಿಕೆ ನಿರ್ದೇಶಕರು ಕೇಂದ್ರ ಸಚಿವಾಲಯಕ್ಕೆ ಆದೇಶ ಮಾಡಿದ್ದಾರೆ ಎನ್ನಲಾಗಿದೆ.

Advertisement

ನ. 7ರಂದು 3 ಜಿಲ್ಲೆಗಳಲ್ಲಿ ಹೋರಾಟ
ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ವತಿಯಿಂದ ಸೀಮೆಎಣ್ಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ನ. 7ರಂದು ರಾಜ್ಯ ಕರಾವಳಿಯ 3 ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳ ಎದುರು ಏಕಕಾಲದಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದೆ. ಉಡುಪಿಯಲ್ಲಿ 20 ಸಾವಿರ ಮೀನುಗಾರರು ಸೇರಲಿದ್ದು ಬೆಳಗ್ಗೆ 10ಕ್ಕೆ ಎಂಜಿಎಂ ಕಾಲೇಜು ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ಹಕ್ಕೊತ್ತಾಯ ನಡೆಸಲಿದ್ದಾರೆ.

ಪ್ರಸ್ತುತ ರಾಜ್ಯದ ಕರಾವಳಿಯಲ್ಲಿ 8,030 ದೋಣಿಗಳಿದ್ದು ಎಲ್ಲದಕ್ಕೂ 300 ಲೀಟರ್‌ಗಳಂತೆ ಸೀಮೆಎಣ್ಣೆ ಒದಗಿಸುವಂತೆ ಸರಕಾರಕ್ಕೆ ಮನವಿಯನ್ನು ಮಾಡಿದ್ದೇವೆ. ನಮ್ಮ ವಿವಿಧ ಬೇಡಿಕೆಗಳನ್ನು ಇಟ್ಟಿದ್ದು ವಾರದೊಳಗೆ ಈಡೇರಿಸಿದರೆ ಪ್ರತಿಭಟನೆಯನ್ನು ಕೈಬಿಡುತ್ತೇವೆ. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ.

– ಗೋಪಾಲ್‌ ಆರ್‌.ಕೆ., ಪ್ರಧಾನ ಕಾರ್ಯದರ್ಶಿ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ

3 ತಿಂಗಳಿನಿಂದ ಸರಕಾರ ಸೀಮೆಎಣ್ಣೆ ಬಿಡುಗಡೆ ಮಾಡಿಲ್ಲ. ಹಲವು ಬಾರಿ ಸಂಸದ, ಸಚಿವರ ಮೂಲಕ ಮನವಿ ಮಾಡಿದರೂ ಯಾವುದೇ ಸ್ಪಂದನೆ ಇಲ್ಲ. ನ. 7ರಂದು 3 ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರು ಏಕಕಾಲದಲ್ಲಿ ಪ್ರತಿಭಟನೆ ನಡೆಸುತ್ತೇವೆ.
– ಆನಂದ ಖಾರ್ವಿ ಉಪ್ಪುಂದ, ಅಧ್ಯಕ್ಷರು, ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ

ಇದನ್ನೂ ಓದಿ : ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದಲ್ಲಿ ಆಫ್ರಿಕನ್‌ ಹಂದಿಜ್ವರ ಪತ್ತೆ : ತಡೆಗೆ ಅಗತ್ಯ ಕ್ರಮ

Advertisement

Udayavani is now on Telegram. Click here to join our channel and stay updated with the latest news.

Next