Advertisement

ಮೀನುಗಾರರ ಪತ್ತೆ ವಿಳಂಬ ಸರಕಾರ ವಿರುದ್ಧ ಹೋರಾಟ

04:54 AM Jan 03, 2019 | |

ಮಲ್ಪೆ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ 7 ಮಂದಿ ಮೀನುಗಾರರು ಸಹಿತ ಬೋಟ್‌ ನಾಪತ್ತೆಯಾಗಿ 19 ದಿನ ಕಳೆದರೂ ಅವರ ಪತ್ತೆಗೆ ಗಂಭೀರ ಕ್ರಮ ಕೈಗೊಳ್ಳದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಜ. 6ರಂದು ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಿದ್ದಾರೆ.

Advertisement

ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ಮಲ್ಪೆ ಬಂದರಿನಲ್ಲಿ ಬುಧವಾರ ನಡೆದ ಕಾರವಾರದಿಂದ ಮಂಗಳೂರು ವರೆಗಿನ ಮೀನುಗಾರ ಸಂಘಟನೆಗಳ ಬೃಹತ್‌ ಸಮಾಲೋಚನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಮಲ್ಪೆ ಮೀನುಗಾರರ ಸಂಘ ಅಧ್ಯಕ್ಷ ಸತೀಶ್‌ ಕುಂದರ್‌ ಮತ್ತು ಮಲ್ಪೆ ಡೀಪ್‌ ಸೀ ಟ್ರಾಲ್‌ ಬೋಟ್‌ ಅಸೋಸಿಯೇಶನಿನ ಅಧ್ಯಕ್ಷ ಕಿಶೋರ್‌ ಡಿ. ಸುವರ್ಣ ಮಾತನಾಡಿ, ಮೀನುಗಾರರು ನಾಪತ್ತೆಯಾಗಿ 19 ದಿನ ಕಳೆದಿವೆ. ಮೀನುಗಾರಿಕೆ ಸಚಿವ ರಾಗಲಿ, ಉಸ್ತುವಾರಿ ಸಚಿವರಾಗಲಿ ಸಭೆಕರೆದು ಚರ್ಚೆ ಕೂಡ ನಡೆಸಿಲ್ಲ. ಮೀನುಗಾರರೆಲ್ಲರೂ ಒಗ್ಗಟ್ಟಿನಿಂದ ಸರಕಾರಕ್ಕೆ ಬಿಸಿ ಮುಟ್ಟಿಸಬೇಕಾಗಿದೆ; ಇದಕ್ಕಾಗಿ  ಜೈಲ್‌ ಭರೋಗೂ ಸಿದ್ಧರಾಗಿ ರಬೇಕು ಎಂದರು.

ತಂತ್ರಜ್ಞಾನ ಎಲ್ಲಿ ಹೋಯ್ತು?
ನಮ್ಮಲ್ಲಿ ಸಾಕಷ್ಟು ತಂತ್ರಜ್ಞಾನಗಳಿದ್ದೂ ಸರಕಾರಕ್ಕೆ ಇನ್ನೂ ಮೀನುಗಾರರ ಪತ್ತೆ ಅಸಾಧ್ಯವಾಗಿರುವುದು ಹೇಗೆ ಎಂದು ಮಂಗಳೂರು ಮೀನುಗಾರ ಸಂಘಟನೆ ವಾಸುದೇವ ಬೋಳಾರ ಪ್ರಶ್ನಿಸಿದರು. ಆನಂದ ಖಾರ್ವಿ ಮಾತನಾಡಿ, ಲೋಕಸಭಾ ಚುನಾವಣೆ ವೇಳೆ 15 ದಿನ ಬೈಂದೂರಿನಲ್ಲೇ ಠಿಕಾಣಿ ಹೂಡಿದ್ದ ಮೀನುಗಾರಿಕೆ ಸಚಿವರಿಗೆ ಮೀನುಗಾರರು ನಾಪತ್ತೆಯಾದಾಗ ಸಾಂತ್ವನ ಹೇಳುವ ಸೌಜನ್ಯವೂ ಇಲ್ಲ ತೋರಿಲ್ಲ ಎಂದರು.

ಗುಂಡು ಬಿ. ಅಮೀನ್‌ ಮಾತನಾಡಿ, ನಮಗೆ 7 ಮಂದಿ ಮೀನುಗಾರರ ಜೀವ ಮುಖ್ಯವಾಗಿದ್ದು, ಯೋಜನಾಬದ್ಧವಾಗಿ ಹೆಜ್ಜೆ ಇಡಬೇಕು ಎಂದರು. ಬೋಟ್‌ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್‌ ಸುವರ್ಣ ಮಾತನಾಡಿ, ಕಡಲಲ್ಲಿ ಮೀನುಗಾರರಿಗೆ ಭದ್ರತೆ ಇಲ್ಲವಾಗಿದ್ದು, ಕಡಲಿಗಿಳಿಯಲು ಭಯವಾಗುತ್ತಿದೆ ಎಂದರು.

30 ಸಾವಿರ ಮಂದಿ ನಿರೀಕ್ಷೆ
ಜ. 6ರಂದು ಬೆಳಗ್ಗೆ 10ಕ್ಕೆ ಉಡುಪಿಯ ಕರಾವಳಿ ಬೈಪಾಸ್‌ನಲ್ಲಿ ನಡೆಯುವ ರಾ.ಹೆ. ತಡೆಯಲ್ಲಿ ಉಪ್ಪಳದಿಂದ ಕಾರವಾರದವರೆಗೆ ಮೂರು ಜಿಲ್ಲೆಯಿಂದ ಸುಮಾರು 30 ಸಾವಿರಕ್ಕೂ ಮಿಕ್ಕಿ ಮೀನುಗಾರರು ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ 8.30ಕ್ಕೆ ಮಲ್ಪೆ ಮೀನುಗಾರಿಕೆ ಬಂದರಿನಿಂದ ಬೈಪಾಸ್‌ವರೆಗೆ ಪಾದಯಾತ್ರೆ ನಡೆಯಲಿದೆ.
 ಸತೀಶ್‌ ಕುಂದರ್‌, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

Advertisement
Advertisement

Udayavani is now on Telegram. Click here to join our channel and stay updated with the latest news.

Next