ಬೆಂಗಳೂರು: ಬೀದರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನುಗಾರಿಕಾ ವಿಶ್ವವಿದ್ಯಾನಿಲಯವನ್ನು ಮಂಗಳೂರಿಗೆ ಸ್ಥಳಾಂತರಿಸುವ ಕುರಿತು ಮುಖ್ಯಮಂತ್ರಿಯವರ ಜತೆ ಚರ್ಚಿಸಲಾಗುವುದು ಎಂದು ಮೀನುಗಾರಿಕೆ ಸಚಿವ ಅಂಗಾರ ಅವರು ತಿಳಿಸಿದರು.
ಬಿಜೆಪಿಯ ಡಿ. ವೇದವ್ಯಾಸ ಕಾಮತ್ ಅವರ ಗಮನ ಸೆಳೆಯುವ ಪ್ರಸ್ತಾವಕ್ಕೆ ಉತ್ತರಿಸಿದ ಅವರು, ಮೀನುಗಾರಿಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಸ್ಥಾಪನೆ, ವಿಶ್ವವಿದ್ಯಾನಿಲಯ ಸ್ಥಾಪನೆ ಬಗ್ಗೆ ಪ್ರಸ್ತಾವನೆ ಇದ್ದು ಮುಖ್ಯಮಂತ್ರಿಯವರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ್, ಬೀದರ್‌ನಲ್ಲಿರುವ ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಳಾಂತರ ಮಾಡಬಾರದು. ಬೇಕಾದರೆ ಮಂಗಳೂರಿನಲ್ಲಿಯೂ ಹೊಸದಾಗಿ ವಿಶ್ವವಿದ್ಯಾಲಯ ಸ್ಥಾಪಿಸಲಿ ಎಂದು ಹೇಳಿದರು.
ಸಮುದ್ರ, ಮೀನು ಇರುವ ಕಡೆ ಮೀನುಗಾರಿಕೆ ವಿಶ್ವವಿದ್ಯಾನಿಲಯ ಇದ್ದರೆ ಸೂಕ್ತ. ಬೀದರ್‌ಗೆ ಯಾಕೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಚಟಾಕಿ ಹಾರಿಸಿದರು.
ಕರಾವಳಿ ಭಾಗದಲ್ಲಿ ಮೀನುಗಾರಿಕೆ ನಂಬಿ 5 ಲಕ್ಷ ಕುಟುಂಬಗಳಿವೆ. ಅಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸಿ 25 ಕೋಟಿ ರೂ. ಅನುದಾನ ನೀಡಿದರೆ ಅನುಕೂಲವಾಗುತ್ತದೆ ಎಂದು ವೇದವ್ಯಾಸ ಕಾಮತ್ ತಿಳಿಸಿದರು.