ಕೋಟ: ಮೀನುಗಾರಿಕೆ ಸಾಲ ಮನ್ನಾಕ್ಕೆ ಸರಕಾರದಿಂದ ಹಣ ಬಿಡುಗಡೆಯಾದ ಮೇಲೂ ಕೆಲವೊಂದು ಬ್ಯಾಂಕ್‌ಗಳು ಸಾಲ ಮರುಪಾವತಿಗೆ ಒತ್ತಾಯ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಯಾವುದೇ ಬ್ಯಾಂಕ್‌ಗಳು ಈ ರೀತಿ ಪೀಡಿಸುವಂತಿಲ್ಲ ಮತ್ತು ಮೀನುಗಾರರು ಇದಕ್ಕೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಕೋಟ ಗ್ರಾ.ಪಂ. ಸಭಾಂಗಣದಲ್ಲಿ ಮೇ 29ರಂದು ನಡೆದ ಗ್ರಾ.ಪಂ. ವ್ಯಾಪ್ತಿಯ ಕುಂದು ಕೊರತೆಗಳ ಸಭೆಯಲ್ಲಿ ಅವರು ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದರು. ಗ್ರಾ.ಪಂ. ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ವಾರಾಹಿ ಕಾಲುವೆಯ ನೀರು ಗಿಳಿಯಾರು ಭಾಗಕ್ಕೆ ಸರಿಯಾಗಿ ತಲುಪಿಲ್ಲ, ಪ್ರಸ್ತುತ ಬರುತ್ತಿರುವ ನೀರು ಚೆಕ್ ಡ್ಯಾಮ್‌ಗಳಲ್ಲಿ ಸಂಗ್ರಹವಾದುದಾಗಿದ್ದು, ಜಲಮಟ್ಟದ ಏರಿಕೆಗೆ ಇದು ಸಾಕಾಗು ವುದಿಲ್ಲ. ಆದ್ದರಿಂದ ವಾರಾಹಿ ನೀರನ್ನು ಬಿಡುಗಡೆ ಮಾಡಬೇಕು ಎಂದು ಗ್ರಾ.ಪಂ. ಸದಸ್ಯೆ ಜ್ಯೋತಿ ಭರತ್ ಕುಮಾರ್ ಮನವಿ ಮಾಡಿದರು. ಈ ಕುರಿತು ಕ್ರಮಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವುದಾಗಿ ಸಚಿವರು ತಿಳಿಸಿದರು.
ಸಂಬಳವಾಗಿಲ್ಲ
ಮೂರು ತಿಂಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾಗಿ ಸಂಬಳವಾಗಿಲ್ಲ. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ತಿಳಿಸಿದರು.
ಕೋವಿಡ್-19 ಸಮಸ್ಯೆ ಎದುರಿಸಲು ಗ್ರಾ.ಪಂ. ಹಾಗೂ ಆರೋಗ್ಯ ಕಾರ್ಯ ಕರ್ತರು ಕೈಗೊಂಡ ಕ್ರಮಗಳ ಕುರಿತು ಸಚಿವರು ವಿಚಾರಿಸಿದರು. ಪಿಡಿಒ ಸುರೇಶ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿಶ್ವನಾಥ, ಗ್ರಾ.ಪಂ. ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿ, ಕೋಟ ಪೊಲೀಸ್ ಠಾಣಾಧಿಕಾರಿ ರಾಜಶೇಖರ್ ಉಪಸ್ಥಿತರಿದ್ದರು.
ಪಿಡಿಒಗಳ ಭಡ್ತಿಗೆ ಮನವಿ
ನೂತನವಾಗಿ ಅಸ್ತಿತ್ವಕ್ಕೆ ಬಂದ ತಾ.ಪಂ.ಗಳಿಗೆ ಯೋಜನಾಧಿಕಾರಿ, ಸಹಾಯಕ ನಿರ್ದೇಶಕರನ್ನು ನೇಮಕ ಮಾಡುವ ಸಂದರ್ಭ ಉತ್ತಮ ಸಾಧನೆ ಹಾಗೂ ಕಾರ್ಯದಕ್ಷತೆ ತೋರಿದ ಪಿಡಿಒಗಳನ್ನು ಪರಿಗಣಿಸಿ ಭಡ್ತಿ ನೀಡಬೇಕು. ಇದಕ್ಕೆ ಸಹಾಯವಾಗುವಂತೆ ಕಾನೂನಿನಲ್ಲಿ ತಿದ್ದುಪಡಿ ತರಬೇಕು ಎಂದು ಕೋಟ ಗ್ರಾ.ಪಂ. ಪಿಡಿಒ ಸುರೇಶ್ ಅವರು ಸಚಿವರಿಗೆ ಮನವಿ ಸಲ್ಲಿಸಿದರು.