Advertisement

ಸಂಪಾದನೆಯಿಲ್ಲದೆ ಜೀವನ ದುಸ್ತರ; ಅವಧಿ ವಿಸ್ತರಣೆಗೆ ಬೇಡಿಕೆ

10:14 PM May 06, 2021 | Team Udayavani |

ಮಲ್ಪೆ:  ಪ್ರಾಕೃತಿಕ ವಿಕೋಪ, ಮೀನಿನ ಕ್ಷಾಮ ಮತ್ತು ಡೀಸೆಲ್‌ ಬೆಲೆ ಏರಿಕೆಯಿಂದಾಗಿ ನಲುಗಿದ ಮತ್ಸೋದ್ಯಮ ಕೊರೊನಾಘಾತದಿಂದ ತತ್ತರಿಸಿದೆ.

Advertisement

ಕಳೆದ ವರ್ಷ ಐದಾರು ತಿಂಗಳು ಕೋವಿಡ್  ಭಯದಿಂದ ಮೀನುಗಾರಿಕೆ ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಎರಡನೇ ಅಲೆಯಿಂದಾಗಿ ಮೀನುಗಾರರು ಸಂಕಷ್ಟ ಎದುರಿಸುವಂತಾಗಿದೆ.

ಮೀನು ಮಾರಾಟಕ್ಕೆ ಸಮಸ್ಯೆ :

ಕೋವಿಡ್ ನಿಯಂತ್ರಣಕ್ಕೆ ಸರಕಾರದ  ಕರ್ಫ್ಯೂ ನಿಯಮದಿಂದಾಗಿ ಸಮುದ್ರ ದಲ್ಲಿ ಮೀನು ಹಿಡಿಯುವುದಕ್ಕೆ ಸಮಸ್ಯೆ ಆಗದಿದ್ದರೂ, ತಂದ ಮೀನನ್ನು ಖರೀದಿಸಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಆಹಾರ ಪದಾರ್ಥಗಳ ಮಾರಾಟಕ್ಕೆ ಸರಕಾರ ಆವಕಾಶ ಕಲ್ಪಿಸಿದೆ. ಆದರಂತೆ ಮೀನು ಮಾರಾಟಕ್ಕೂ ಅವಕಾಶ ನೀಡಿದೆ. ಆದರೆ ಈ ಅವಧಿ ಮಾರುಕಟ್ಟೆಗೆ ತಂದು ಮೀನು ಮಾರಾಟ ಮಾಡುವವರಿಗೆ ಸಾಕಾಗುತ್ತಿಲ್ಲ. ಮೀನು ಮಾರಾಟಗಾರರು ಬಂದರಿಗೆ ತೆರಳಿ ಹರಾಜಿನಲ್ಲಿ ಮೀನು ಖರೀದಿಸಿ ಅದನ್ನು ಮೀನು ಮಾರುಕಟ್ಟೆಗೆ ತರುವಷ್ಟರಲ್ಲಿ 10 ಗಂಟೆ ಕಳೆದಿರುತ್ತದೆ. ಇದರಿಂದ ನಷ್ಟವಾಗುತ್ತಿದೆ.  ದಿನನಿತ್ಯ ಮೀನು ಮಾರಿ ಜೀವನ ಸಾಗಿಸುವ ಸಾವಿರಾರು ಮೀನುಗಾರರಿಗೆ ನಿತ್ಯ ಸಂಪಾದನೆಗೆ ದಾರಿ ಇಲ್ಲವಾಗಿದೆ.

ಮೀನಿನ ಪ್ರಮಾಣ ಕಡಿಮೆ :

Advertisement

ಕಡಲಿನಲ್ಲಿ ಮೀನಿನ ಪ್ರಮಾಣ ಕಡಿಮೆಯಾಗಿದ್ದು, ಮಲ್ಪೆ ಬಂದರಿನಲ್ಲಿ ಶೇ. 60ರಷ್ಟು ಬೋಟುಗಳು ಮೀನುಗಾರಿಕೆಗೆ ತೆರಳುತ್ತಿಲ್ಲ. ಮೀನಿನ ಕ್ಷಾಮದಿಂದಾಗಿ ಶೇ.100ರಷ್ಟು ಪರ್ಸೀನ್ ಬೋಟುಗಳು ಫೆಬ್ರವರಿಯಲ್ಲಿಯೇ ಮೀನುಗಾರಿಕೆ ಯನ್ನು ಮೊಟಕುಗೊಳಿಸಿ ದಡ ಸೇರಿವೆ. ಶೇ. 70ರಷ್ಟು ತ್ರಿಸೆವೆಂಟಿ ಬೋಟುಗಳು, ಶೇ. 90 ಸಣ್ಣಟ್ರಾಲ್‌ ಬೋಟುಗಳು ನಿಂತಿವೆ. ಡೀಸೆಲ್‌ ದರ ಏರಿಕೆಯಿಂದಾಗಿ ನಷ್ಟವನ್ನು ಅನುಭವಿಸುತ್ತಿದ್ದ ಬಹುತೇಕ ಆಳ ಸಮುದ್ರ ಬೋಟುಗಳು ದಡ ಸೇರಿವೆ. ಇತ್ತ ಕಡಲ ತೀರದಲ್ಲಿ ನಡೆಸುವ ನಾಡದೋಣಿಗಳಿಗೂ ಮೀನು ಸಿಗುತ್ತಿಲ್ಲ ಎನ್ನುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್‌. ಸುವರ್ಣ ಅವರು.

ಕ‌ರ್ಫ್ಯೂನಿಂದಾಗಿ ದಿನನಿತ್ಯ ಮೀನು ಮಾರಾಟ ಮಾಡಿ ಜೀವನ ಸಾಗಿಸುವ ಮಹಿಳೆಯರಿಗೆ ತೊಂದರೆಯಾಗಿದೆ. ಮಧ್ಯಾಹ್ನ 12ಗಂಟೆಯವರೆಗಾದರೂ ವ್ಯಾಪಾರ ನಡೆಸಲು ಅನುಮತಿ ನೀಡಿದರೆ  ಉತ್ತಮ. -ಬೇಬಿ  ಎಚ್‌. ಸಾಲ್ಯಾನ್‌,ಅಧ್ಯಕ್ಷರು, ಉಡುಪಿ ತಾ| ಮಹಿಳಾ ಹಸಿಮೀನು ಮಾರಾಟಗಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next