Advertisement

ಅಮ್ವೂರಿನ ಯುವಕನ ಕೈಹಿಡಿದ ಮತ್ಸ್ಯ ಕೃಷಿ

07:52 AM Apr 14, 2021 | Team Udayavani |

ಬಂಟ್ವಾಳ: ವಿದೇಶದಲ್ಲಿ ಉತ್ತಮ ಸಂಪಾದನೆಯ ಉದ್ಯೋಗ ತೊರೆದು 2 ವರ್ಷಗಳ ಹಿಂದೆ ಸ್ವದೇಶಕ್ಕೆ ಮರಳಿದ ಬಂಟ್ವಾಳದ ಅಮ್ವೂರಿನ ಪ್ರಜ್ವಲ್‌ ಪ್ರತೀಕ್‌ ಪಿಂಟೊ ಬಯೋಫ್ಲಾಕ್‌ ವಿಧಾನದಲ್ಲಿ ಮೀನು ಸಾಕಣೆ ಮಾಡಿ ಯಶಸ್ಸು ಸಾಧಿಸಿದ್ದಾರೆ.

Advertisement

ಕೊಚ್ಚಿಯಲ್ಲಿ ಫಯರ್‌ ಆ್ಯಂಡ್‌ ಸೇಫ್ಟಿಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದ ಪ್ರಜ್ವಲ್‌ ದುಬಾೖಯ ಕಂಪೆನಿಯೊಂದರ ಎಚ್‌ಆರ್‌ ವಿಭಾಗದಲ್ಲಿ ಕೆಲಸಕ್ಕೆ ಸೇರಿದ್ದರು. ಆದರೆ ಮೀನು ಸಾಕಣೆಯ ಆಸಕ್ತಿಯ ಕಾರಣ ತವರಿಗೆ ಮರಳಿದ್ದರು.

ಮನೆ ಆವರಣದಲ್ಲಿ ಘಟಕ :

ಮೀನು ಕೃಷಿಗಾಗಿ ಮನೆ ಆವರಣದಲ್ಲಿಯೇ 1,500 ಮೀನುಗಳ ಸಾಮರ್ಥ್ಯದ 13 ಸಾವಿರ ಲೀ.ನ ಘಟಕವನ್ನು 3.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದಾರೆ. 5 ತಿಂಗಳಲ್ಲಿ ಮೀನುಗಳು 500-600 ಗ್ರಾಂ ತೂಗುತ್ತವೆ. ಪ್ರಸ್ತುತ ಪ್ರತೀ ಕೆ.ಜಿ.ಗೆ 350 ರೂ. ಇದ್ದು, ಸ್ಥಳೀಯರು ಹಾಗೂ ಬೆಂಗಳೂರು ಮೊದಲಾದ ಭಾಗ ಗಳಿಂದಲೂ ಖರೀದಿಗೆ ಬರುತ್ತಾರೆ. ಮೀನು ಮಾರಾಟಗಾರರಿಂದಲೂ  ಬೇಡಿಕೆ ಇದೆ.

ವಿದೇಶಿ ಸ್ನೇಹಿತರಿಂದ ಮಾಹಿತಿ :

Advertisement

ಪ್ರಜ್ವಲ್‌ ವಿದೇಶದಲ್ಲಿದ್ದಾಗ ಸ್ನೇಹಿತರ ಮೂಲಕ ಈ ವಿಧಾನದ ಮಾಹಿತಿ ಪಡೆದಿದ್ದರು. ಬಳಿಕ ಅಂತರ್ಜಾಲದ ಮೂಲಕ ಅಧ್ಯಯನ ಮಾಡಿ ಅನುಷ್ಠಾನಗೊಳಿಸಿದ್ದಾರೆ. ಮೀನುಗಳಿಗೆ ಕಾಯಿಲೆ ಬಂದಾಗ ಮೀನುಗಾರಿಕೆ ಕಾಲೇಜು, ಕೃಷಿ ವಿಜ್ಞಾನ ಕೇಂದ್ರದಿಂದ ಮಾಹಿತಿ ಪಡೆದು ಕೊಳ್ಳುತ್ತಿದ್ದಾರೆ.

ಕಲ್ಲಡ್ಕ ಬಳಿ ಬೃಹತ್‌ ಘಟಕ :

ಪ್ರಸ್ತುತ 500 ಕೆ.ಜಿ. ಮೀನು ಸಾಮರ್ಥ್ಯದ ಒಂದು ಟ್ಯಾಂಕನ್ನು ಹೊಂದಿದ್ದು, ಮತ್ತೂಂದು ಟ್ಯಾಂಕ್‌ ನಿರ್ಮಿಸುತ್ತಿದ್ದಾರೆ. ಕಲ್ಲಡ್ಕದ ವ್ಯಕ್ತಿಯೊಬ್ಬರ ನಿವೇಶನದಲ್ಲಿ 2,000 ಕೆ.ಜಿ. ಸಾಮರ್ಥ್ಯದ 4 ಟ್ಯಾಂಕ್‌ಗಳ ನಿರ್ಮಾಣ ನಡೆಯುತ್ತಿದೆ.

ಏನಿದು ಬಯೋಫ್ಲಾಕ್‌ ವಿಧಾನ :

ಮನೆಯ ಉಳಿದಿರುವ ಆಹಾರವನ್ನು ನೈಟ್ರೋಜನ್‌ ಸೈಕಲಲ್ಲಿ ಬ್ಯಾಕ್ಟೀರಿಯಾವನ್ನಾಗಿ ಪರಿವರ್ತಿಸಿಕೊಂಡು ಮೀನು ಗಳಿಗೆ ಆಹಾರವಾಗಿ ಬಳಸುವುದೇ ಬಯೋಫ್ಲಾಕ್‌ ವಿಧಾನ. ಇಂತಹ ಮೀನು ಸಾಕಣೆ ಬಹಳ ಅಪರೂಪ. ಇದು ಸಾವಯವವಾಗಿದ್ದು, ಯಾವುದೇ ರಾಸಾಯನಿಕ ಬಳಕೆ ಇರುವುದಿಲ್ಲ. ಜತೆಗೆ ಮಾರುಕಟ್ಟೆಯಿಂದ ತರುವ ಪೆಲೆಟ್ಸ್‌ ಫೀಡ್‌ ಕೂಡ ಆಹಾರವಾಗಿ ನೀಡಲಾಗುತ್ತದೆ. ದುರ್ವಾಸನೆ ರಹಿತ ಈ ಮೀನುಗಳು ಸಮುದ್ರದ ಮೀನಿನಷ್ಟೇ ರುಚಿಯಾಗಿರುತ್ತವೆ.

ಚಿತ್ರಲಾಡಾ ತಳಿ :

ಪ್ರಸ್ತುತ ಚಿತ್ರಲಾಡಾ ಎಂಬ ತಳಿಯನ್ನು ಸಾಕುತ್ತಿದ್ದಾರೆ. ವರ್ಷಕ್ಕೆ 2 ಹಂತ ಗಳಲ್ಲಿ ಸಾಕಬಹುದಾಗಿದೆ. ಮರಿಗಳನ್ನು ಕೊಚ್ಚಿಯಿಂದ ತರಿಸುತ್ತಿದ್ದು, ಒಂದು ಮರಿಗೆ 7 ರೂ. ವೆಚ್ಚವಾಗುತ್ತದೆ. ಈಮೊದಲು ತಿಲಾಪಿಯಾ ತಳಿಯನ್ನು ಸಾಕಿದ್ದರು. 1,500 ಮೀನುಗಳನ್ನು ಸಾಕಲು 30 ಸಾವಿರ ರೂ. ವೆಚ್ಚ ತಗಲುತ್ತಿದ್ದು, ಕನಿಷ್ಠ ಧಾರಣೆಗೆ ಮಾರಾಟವಾದರೂ 75 ಸಾವಿರ ರೂ. ಕೈಸೇರುತ್ತದೆ. ಅಂದರೆ 4 ತಿಂಗಳಲ್ಲಿ ಸುಮಾರು 45 ಸಾವಿರ ಆದಾಯ ಗಳಿಸಿದಂತಾಗುತ್ತದೆ.

ಮೀನು ಸಾಕಣೆ ಜತೆ ಅದರ ಬಗ್ಗೆ ಸಂಶೋಧನೆಯ ಆಸಕ್ತಿಯಿಂದ ವಿದೇಶಿ ಉದ್ಯೋಗ ಬಿಟ್ಟು ಬಂದಿದ್ದೇನೆ. ಪ್ರಸ್ತುತ ಬೇಡಿಕೆಗೆ ತಕ್ಕಷ್ಟು ಪೂರೈಕೆ ಸಾಧ್ಯವಾಗುತ್ತಿಲ್ಲ. ಶ್ರಮ ಪಟ್ಟರೆ ಯಶಸ್ಸು ಖಂಡಿತ.ಪ್ರಜ್ವಲ್‌ ಪ್ರತೀಕ್‌ ಪಿಂಟೊ

ಹೊಂಡಗಳಲ್ಲಿ ಮೀನು ಸಾಕಾಣಿಕೆಗಿಂತ ಬಯೋಫ್ಲಾಕ್‌ ವಿಧಾನಕ್ಕೆ ಹೆಚ್ಚಿನ ಶ್ರಮ ಅಗತ್ಯ. ನೀರಿನ ಗುಣಮಟ್ಟ, ಮೀನಿನ ಬೆಳವಣಿಗೆ, ಆಹಾರ ಪದ್ಧತಿ ಇತ್ಯಾದಿ ವಿಚಾರಗಳ ಕುರಿತು ಹೆಚ್ಚಿನ ಗಮನವಿರಬೇಕಾಗುತ್ತದೆ. ದೊಡ್ಡ ಪ್ರಮಾಣದ ಮೀನುಕೃಷಿಯಿಂದ ಹೆಚ್ಚು ಲಾಭ ಸಾಧ್ಯ. -ಡಾ| ಚೇತನ್‌, ಮೀನುಗಾರಿಕಾ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು

 

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next