Advertisement

ಕರಾವಳಿ ಯುವಕರ ಕೈಹಿಡಿದ ಮೀನು ಕೃಷಿ:  ಪಂಜರದಲ್ಲಿ ಮೀನು ಸಾಕಾಣಿಕೆ ಯಶಸ್ಸು

03:47 PM May 28, 2023 | Team Udayavani |

ಉಪ್ಪುಂದ: ಕರಾವಳಿಯ ಯುವಕರು ಪಂಜರ ಮೀನು ಕೃಷಿ ಮೂಲಕ ಸ್ವ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಿ ಯಶಸ್ಸು ಪಡೆಯುತ್ತಿದ್ದಾರೆ.

Advertisement

ಕರಾವಳಿಯಲ್ಲಿ ಮಂಗಳೂರು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನೆ ಸಂಸ್ಥೆ ಪಂಜರ ಮೀನು ಕೃಷಿ ಉತ್ಪಾದನೆಯ ತಂತ್ರಜ್ಞಾನ ಅಭಿವೃದ್ಧಿಪಡಿಸಿತ್ತು. 2008ರಲ್ಲಿ ಈ ವಿಧಾನವನ್ನು ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮಗಳಲ್ಲಿ ಆರಂಭಿಸಿತ್ತು. ಉಪ್ಪು ನೀರಿನ ಪ್ರದೇಶದಲ್ಲಿ ಪಂಜರ ಮೀನು ಕೃಷಿ ಮೀನುಗಾರರನ್ನು ಸೆಳೆಯುವಲ್ಲಿ ಸಫಲತೆ ಕಂಡಿದೆ. ಪ್ರಸ್ತುತ ಕೊಡೇರಿ, ಕರ್ಕಿಕಳಿ,  ತಾರಾಪತಿ ಭಾಗದಲ್ಲಿ 400ರಿಂದ 500 ಮಂದಿ ಪಂಜರ ಮೀನು ಕೃಷಿ ಸಾಕಣೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.

ಜಪಾನ್‌ ದೇಶದಲ್ಲಿ ಪ್ರಾರಂಭ
ಸಮುದ್ರದಲ್ಲಿ ಪಂಜರದ ಕೃಷಿಯನ್ನು 1950ರಲ್ಲಿ ಪ್ರಥಮವಾಗಿ ಜಪಾನ್‌ ದೇಶ ಆರಂಭಿಸಿತ್ತು. ಬಳಿಕ 1980ರಲ್ಲಿ ಉತ್ತರ ಯೂರೋಪ್‌, ಉತ್ತರ ಅಮೆರಿಕಾ ಪಂಜರದಲ್ಲಿ ಸಾಲ್ಮನ್‌ ಮೀನು ಕೃಷಿ ಪ್ರಾರಂಭಿಸಿತ್ತು. ಪ್ರಪಂಚದಾದ್ಯಂತ ಇದರಲ್ಲಿ ಶೇ.90ರಷ್ಟು ಕುರುಡಿ ಮತ್ತು ಸೀ ಬ್ರಿàಮ್‌ ತಳಿಯನ್ನು ಉಪಯೋಗಿಸಲಾಗುತ್ತಿದೆ.ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ 2007ರಲ್ಲಿ ವಿಶಾಖಪಟ್ಟದಲ್ಲಿ ಸಿಎಂಎಫ್‌ಆರ್‌ಐ ಅವರು ಪಂಜರದಲ್ಲಿ ಮೀನು ಕೃಷಿಯನ್ನು ಪ್ರಾಯೋಗಿಕವಾಗಿ ನಡೆಸಿದರು. ಪ್ರಸ್ತುತ ಗುಜರಾತ್‌, ಮಹಾರಾಷ್ಟ್ರ, ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ, ಒರಿಶಾಗಳಲ್ಲಿ ಯಶಸ್ವಿಯಾಗಿ ಮಾಡಲಾಗುತ್ತಿದೆ ಜಾಗ ಆಯ್ಕೆ ಪಂಜರಗಳನ್ನು ಸಿಹಿ ನೀರು, ಸಮುದ್ರ, ಹಿನ್ನೀರು, ಚೌಳು ನೀರು, ಅಳಿವೆಗಳಲ್ಲಿ ಅಳವಡಿಸಿ ಮೀನು ಸಾಕಾಣಿಕೆಗೆ ಸೂಕ್ತ. ನೀರಿನ ಆಳ 3-5 ಮೀಟರ್‌ ಇರಬೇಕು. ನೀರಿನ ಒಳ ಹರಿವು ನಿರಂತರವಾಗಿದ್ದಲ್ಲಿ ಕರಗಿದ ಆಮ್ಲಜನಕ ಯಥೇತ್ಛವಾಗಿ ದೊರಕುವುದಲ್ಲದೆ ಯಾವುದೇ ತ್ಯಾಜ್ಯ ಪಂಜರದಲ್ಲಿ ಉಳಿಯಲು ಬಿಡುವುದಿಲ್ಲ.

ಪಂಜರದ ನಿರ್ಮಾಣ
ಸಾಮಾನ್ಯವಾಗಿ ಆಯತಾಕಾರದ 6×2 ಮೀ. ಗಾತ್ರದ ಜಿ.ಐ. ಪೈಪ್‌ಗ್ಳಿಂದ ತಯಾರಿಸಲಾದ ಪಂಜರವನ್ನು ಉಯೋಗಿಸಲು ಯೋಗ್ಯವಾಗಿರುತ್ತದೆ. ಪಂಜರದ ಹೊರ ಪದರ ನಿರ್ಮಾಣಕ್ಕೆ ಎಚ್‌.ಡಿ.ಪಿ.ಇ. ಮೆಷ್‌ 48 ಎಂ.ಎಂ. ಬಳಸಲಾಗುತ್ತದೆ. ಒಳ ಪದರವನ್ನು ಮೆಷ್‌ 18 -20 ಎಂ.ಎಂ. ಗಾತ್ರದ ನೆಟ್‌ಅನ್ನು ಉಪಯೋಗಿಸಲಾಗುತ್ತದೆ.

ಮೀನುಗಳ ಪಾಲನೆ
ಸಣ್ಣ ಮೀನುಗಳನ್ನು ಪ್ರಥಮವಾಗಿ ನರ್ಸರಿ ಕೆರೆಗಳಲ್ಲಿ ಬಿತ್ತನೆ ಮಾಡಿ, ಸುಮಾರು 2 ತಿಂಗಳ ಕಾಲ ಪ್ರತೀ 15 ದಿನಗಳಿಗೊಮ್ಮೆ ಗ್ರೇಡಿಂಗ್‌ ಮಾಡಿ ಬೆಳೆಸಲಾಗುತ್ತದೆ. ಕುರುಡಿ ಮೀನುಗಳಲ್ಲಿ ಕ್ಯಾನಿಬಾಲಿಸಂ ಅಂದರೆ ದೊಡ್ಡ ಗಾತ್ರದ ಮೀನು ಚಿಕ್ಕ ಗಾತ್ರದ ಮೀನು ಮರಿಗಳನ್ನು ತಿನ್ನುವುದರಿಂದ ಗ್ರೇಡಿಂಗ್‌ ಮಾಡುವುದು ಅತೀ ಆವಶ್ಯಕ. ಇಲ್ಲಿ 18-20 ಗ್ರಾಂ ಗಾತ್ರದ ವರೆಗೆ ಬೆಳೆಸಲಾಗುತ್ತದೆ. ಬಳಿಕ ಹಿನೀ°ರಿನ ಪ್ರದೇಶದ ಒಂದು ಪಂಜರದಲ್ಲಿ 1,000 ಮೀನು ಮರಿಗಳನ್ನು ಬಿತ್ತನೆ ಮಾಡಿ 16 ತಿಂಗಳು ಬೆಳೆಸಲಾಗುತ್ತದೆ.

Advertisement

ಆಹಾರ ಕ್ರಮ
ಬೆಳಗ್ಗೆ, ಸಂಜೆ ಆಹಾರ ನೀಡಬೇಕು. ಮೊದಲೆರಡು ತಿಂಗಳು ಸಿಗಡಿ ಆಹಾರ ಸ್ಟಾರ್ಟರ್‌ 1 ಮತ್ತು 2 ಕೊಡಲಾಗುತ್ತದೆ. ಅನಂತರ ಎರಡು ತಿಂಗಳು ಬೂತಾಯಿ ಮೀನು ಅಥವಾ ಇತರ ಮೀನುಗಳನ್ನು ಸಣ್ಣದಾಗಿ ಕತ್ತರಿಸಿ ನೀಡಲಾಗುತ್ತದೆ. ಮೀನಿನ ಬೆಳವಣಿಗೆಗೆ ಅನುಸಾರವಾಗಿ ಶೇ. 2-3ರಷ್ಟು ಆಹಾರ ನೀಡಲಾಗುತ್ತದೆ. ನಾಲ್ಕು ತಿಂಗಳ ಅನಂತರ ಹದಿನೈದು ದಿನಕ್ಕೆ ಅಥವಾ ತಿಂಗಳಿಗೆ ಕೊಡುವ ಆಹಾರದ ಪ್ರಮಾಣ ಹೆಚ್ಚಿಸಬೇಕು. 6 ತಿಂಗಳ ಬಳಿಕ ದೇಹದ ತೂಕದ ಶೇ. 10ರಷ್ಟು ಪ್ರಮಾಣದ ಆಹಾರ ನೀಡಬೇಕು.

ಕುರುಡಿ ಮೀನು ಸಾಕಣೆಯಿಂದ ಬೇರೆ ಮೀನುಗಳ ಸಾಕಾಣಿಕೆಗೆ ಪ್ರಯತ್ನ ಮಾಡಬಹುದು. (ಕೊಕ್ಕರ್‌, ಕೆಂಬೇರಿ, ಕೋಬಿಯಾ) ಸ್ಥಳೀಯವಾಗಿ ದೊರಕುವ ಸಣ್ಣ ಮೀನುಗಳ ನರ್ಸರಿ ಪಾಲನೆ ಮೀನು ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದು.

ವಿವಿಧ ತಳಿಗಳು
ಕುರುಡಿ ಮೀನು, ಕೆಂಬೇರಿ ಮೀನು, ಕೋಬಿಯಾ ಪ್ರಮುಖ ತಳಿಗಳು. ಆದರೆ ಎಲ್ಲ ತಳಿಗಳ ಮರಿಗಳು ಸಿಗುವುದಿಲ್ಲ. ಕುರುಡಿ ಮೀನು ಮರಿಗಳನ್ನು ರಾಜೀವ್‌ ಗಾಂಧಿ ಸೆಂಟರ್‌ ಫಾರ್‌ ಅಕ್ವಾ ಕಲ್ಚರ್‌ (ಆರ್‌ಜೆಸಿಎ) ವಿಶಾಖ ಪಟ್ಟಣ/ ಚೆನ್ನೈನಲ್ಲಿ ಲಭ್ಯ. ಅಲ್ಲಿಂದ 2.5 ಸೆಂ.ಮೀ., 5.5 ಸೆಂ.ಮೀ. ಗಾತ್ರದ ಮರಿಗಳನ್ನು ಖರೀದಿಸಲಾಗುತ್ತದೆ. ಮೀನು ಮರಿಗಳ ಮೌಲ್ಯವು ಗಾತ್ರಕ್ಕೆ ತಕ್ಕಂತೆ ಇರುತ್ತದೆ. ಸ್ಥಳೀಯ ವಾತಾವರಣಕ್ಕೆ ಕುರುಡಿ ಮೀನು ಬೇಗ ಹೊಂದಿಕೊಳ್ಳುತ್ತದೆ, ಅತೀ ಬೇಡಿಕೆ, ಬೆಲೆಯುಳ್ಳ ತಳಿ, ಹೆಚ್ಚು ಇಳುವರಿ, ಶೀಘ್ರ ಬೆಳವಣಿಗೆ, ಸ್ಥಳೀಯ ಆಹಾರಕ್ಕೆ ಹೊಂದಿಕೊಳ್ಳುತ್ತದೆ. 0-40 ಪಿ.ಪಿ.ಟಿ. ವರೆಗೂ ಉಪ್ಪಿನಂಶ ತಡೆದುಕೊಳ್ಳಬಲ್ಲದು. ಸಿಹಿ ನೀರಿನಲ್ಲೂ ಸಾಕಬಹುದು.

ಮರಿ ಉತ್ಪನ್ನ ಕೇಂದ್ರ ನಿರ್ಮಿಸಿ
ಮೀನುಗಾರಿಕೆ ವೃತ್ತಿ ಜತೆಗೆ ಪಂಜರದ ಮೀನು ಸಾಕಾಣಿಕೆ ಮಾಡುತ್ತಿದ್ದು ಲಾಭದಾಯಕವಾಗಿದೆ. ಸರಕಾರ ಕರ್ನಾಟಕದಲ್ಲಿ ಮರಿ ಉತ್ಪನ್ನ ಕೇಂದ್ರ ನಿರ್ಮಾಣ ಮಾಡಿದರೆ ಇನ್ನಷ್ಟು ಅನುಕೂಲವಾಗುತ್ತದೆ.
-ಚಂದ್ರ ಖಾರ್ವಿ ಉಪ್ಪುಂದ

-ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next