ದೊಡ್ಡಬಳ್ಳಾಪುರ: ತಾಲೂಕಿನ ಕೈಗಾರಿಕಾ ಪ್ರದೇಶದ ಬಾಶೆಟ್ಟಿಹಳ್ಳಿ ಪಪಂ, ನಗರಸಭೆ ವ್ಯಾಪ್ತಿಯಿಂದ ತಾಲೂಕಿನ ಕೆರೆಗಳಿಗೆ ಹರಿಯುತ್ತಿರುವ ಕಲುಷಿತ ನೀರಿನ ಶುದ್ಧೀ ಕರಣ ಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಬೆಳಗಾವಿಯ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಈ ನಡುವೆ ಶುಕ್ರವಾರವೇ ತಾಲೂಕಿನ ದೊಡ್ಡತುಮಕೂರು ಗ್ರಾಮದ ಕೆರೆಯಲ್ಲಿ ಕಲುಷಿತ ನೀರಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ಮೀನುಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದ್ದು, ಈ ಚರ್ಚೆಗೆ ಪುಷ್ಟಿ ನೀಡಿದಂತಾಗಿದೆ. ದೊಡ್ಡತುಮಕೂರು ಗ್ರಾಮದ ಕೆರೆಯಲ್ಲಿ ಮೃತ ಮೀನುಗಳು ಕೆರೆಯ ಅಂಚಿಗೆ ತೇಲಿ ಬಂದಿರುವುದರಿಂದ ಆತಂಕಕ್ಕೆ ಒಳಗಾದ ಸ್ಥಳೀಯರು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಗೆ ಮಾಹಿತಿ ನೀಡಿದ್ದರು.
ಮಧ್ಯಾಹ್ನದ ವೇಳೆಗೆ ಕೆರೆಗೆ ಭೇಟಿ ನೀಡಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಹಿರಿಯ ಪರಿಸರ ಅಧಿಕಾರಿ ರಾಜಶೇಖರ್, ಹೆಚ್ಚುವರಿ ಅಧಿಕಾರಿ ವಿಜಯ ಅವರು ಕೆರೆಯಲ್ಲಿನ ನೀರು ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ಕೊಂಡೊಯ್ದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಯುವ ಸಂಚಲನ ಅಧ್ಯಕ್ಷ ಚಿದಾನಂದ್, ಕೆರೆಯ ನೀರಿಗೆ ಬಾಶೆಟ್ಟಿಹಳ್ಳಿ ಕೈಗಾರಿಕೆಗಳು, ಪಪಂ, ನಗರಸಭೆಯಿಂದ ಒಳಚರಂಡಿ ನೀರು ಸೂಕ್ತ ಶುದ್ಧೀಕರಣ ಇಲ್ಲದೆ ಕೆರೆಗೆ ಹರಿಯುತ್ತಿರುವುದನ್ನು ತಡೆಯುವಂತೆ ಈ ಭಾಗದ ಗ್ರಾಮಗಳ ಜನರು ಹೆದ್ದಾರಿ ತಡೆ ಸೇರಿದಂತೆ ಹಲವಾರು ರೀತಿಯ ಹೋರಾಟಗಳನ್ನು ನಡೆಸಿ ಪಂಚಾಯಿತಿ ಹಂತ ದಿಂದ ಜಿಲ್ಲಾಧಿಕಾರಿಗಳ ಹಂತದವರೆಗೂ ಮನವಿಗಳನ್ನು ನೀಡಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ನೀರು ಕುಡಿಯಲು ಯೋಗ್ಯ ಇಲ್ಲ: ಈಗ ಮೀನುಗಳು ಮೃತಪಟ್ಟಿದ್ದರಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜನರ ಒತ್ತಾಯಕ್ಕೆ ಮಣಿದು ನೀರು ಸಂಗ್ರಹ ಮಾಡಿಕೊಂಡು ಹೋಗಿದ್ದಾರೆ. ಈ ಹಿಂದೆಯೂ ಹಲವಾರು ಬಾರಿ ಸ್ಥಳೀಯ ಪಂಚಾಯಿತಿ ಹಾಗೂ ಹೋರಾಟಗಾರರು ಕೆರೆಯ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲಿನೆ ನಡೆಸಿದ್ದಾರೆ. ಎಲ್ಲಾ ವರದಿಗಳು ಕೆರೆಯಲ್ಲಿನ ನೀರು ಸೇರಿದಂತೆ ಕೆರೆ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ಬರುವ ನೀರು ಕುಡಿಯಲು ಯೋಗ್ಯ ಇಲ್ಲ ಎನ್ನುವ ವರದಿಯನ್ನು ನೀಡಿವೆ. ಇಷ್ಟಾದರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಯವರು ಯಾವುದೇ ಕೈಗಾರಿಕೆ, ನಗರಸಭೆ, ಪಪಂ ವಿರುದ್ಧ ಕ್ರಮಕ್ಕೆ ಮುಂದಾಗದೇ ಸ್ಥಳೀಯ ಜನರನ್ನು ಸಮಾಧಾನಪಡಿಸಲು ಕೆರೆಗೆ ಭೇಟಿ ನೀಡಿ ನೀರು ಸಂಗ್ರಹ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ದೂರಿದ್ದಾರೆ.