Advertisement

ಕಾಲ್ಪನಿಕ ವೇತನ: ಬಜೆಟ್‌ನಲ್ಲಿ 360 ಕೋಟಿ ಒದಗಿಸಲು ಒತ್ತಾಯ

12:30 AM Jan 29, 2019 | |

ಹುಬ್ಬಳ್ಳಿ: ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗೆ ಕಾಲ್ಪನಿಕ ವೇತನ ನಿಗದಿಪಡಿಸಬೇಕು ಹಾಗೂ 2019-20ನೇ ಸಾಲಿನ ಆಯವ್ಯಯದಲ್ಲಿ 360 ಕೋಟಿ ರೂ. ಅನುದಾನವನ್ನು ಒದಗಿಸುವುದರೊಂದಿಗೆ ವಿಶೇಷ ಸದನ ಸಮಿತಿಯ ವರದಿಯ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.

Advertisement

ಈ ಕುರಿತು ಸಿಎಂಗೆ ಪತ್ರದ ಮೂಲಕ ಆಗ್ರಹಿಸಿರುವ ಅವರು, ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ (ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ) ವಿಧೇಯಕ 2014ಅನ್ನು ಬೆಳಗಾವಿ ವಿಧಾನ ಪರಿಷತ್ತಿನಲ್ಲಿ ಅನುಮೋದನೆಗಾಗಿ ಮಂಡಿಸಿದಾಗ, ಆಗಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಆರ್‌.ವಿ. ದೇಶಪಾಂಡೆ ಕಾಲ್ಪನಿಕ ವೇತನ ಸಮಸ್ಯೆ ಪರಿಹಾರಕ್ಕೆ ಸರ್ಕಾರವು 285ರಿಂದ 300 ಕೋಟಿ ರೂ. ಅನುದಾನ ನೀಡಲು ಸಿದ್ಧವಿದೆ. ವಿಧೇಯಕಕ್ಕೆ ಒಪ್ಪಿಗೆ ನೀಡಲು ಕೋರಿದ್ದರಿಂದ ಸದನವು ಒಪ್ಪಿಗೆ ನೀಡಿತ್ತು. ಅದರಂತೆ ಈ ಕುರಿತು ಅಧ್ಯಯನ ನಡೆಸಿ ವಿಧಾನ ಪರಿಷತ್ತಿನ ವಿಶೇಷ ಸದನ ಸಮಿತಿಯನ್ನು ನನ್ನ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ಸಮಿತಿ ಸತತ ಅಧ್ಯಯನ ನಡೆಸಿ 2015ರ ಮಾ. 17ರಂದು 351.80 ಕೋಟಿ ರೂ. ಅನುದಾನ ಬೇಕಾಗಬಹುದೆಂದು ಸಮಿತಿಯು ಸಚಿವ ದೇಶಪಾಂಡೆ ಅವರಿಗೆ ವರದಿ ನೀಡಿತು.್ತ

ನಂತರ ಇದೇ ಅಧಿಕಾರಿಗಳು ಹಿಂದಿನ ಬಾಕಿ ಸೇರಿಸಿ ಸುಮಾರು 5000 ಕೋಟಿ ರೂ. ಬೇಕಾಗಬಹುದೆಂದು ವ್ಯತಿರಿಕ್ತ ಅಭಿಪ್ರಾಯವನ್ನು ಸರ್ಕಾರಕ್ಕೆ ನೀಡಲಾಯಿತು. ನಂತರ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಪುನರ್‌ ಪರಿಶೀಲಿಸಲು ವಿಶೇಷ ಸದನ ಸಮಿತಿಗೆ ತಿಳಿಸಿತ್ತು.

ಅಂತಿಮವಾಗಿ 359.87 ಕೋಟಿ ರೂ. ಅನುದಾನ ಬೇಕಾಗುವುದೆಂದು 2018ರ ಫೆ. 6ರಂದು ಪೂರಕ ವರದಿಯನ್ನು ವಿಧಾನ ಪರಿಷತ್ತಿನ ಸಭಾಪತಿಗಳಾಗಿದ್ದ ಡಿ.ಎಚ್. ಶಂಕರಮೂರ್ತಿ ಅವರಿಗೆ ನೀಡಿತ್ತು. ಈ ವರದಿಗೂ ಮೂಲ ಅಂಕಿ-ಸಂಖ್ಯೆ ಹಾಗೂ ಮಾಹಿತಿಗಳನ್ನು ಒದಗಿಸಿದ ಅಧಿಕಾರಿಗಳು ಮತ್ತೆ ಸರ್ಕಾರಕ್ಕೆ ತಪ್ಪು ಮಾಹಿತಿ ಕೊಡುತ್ತಿರುವುದು ವಿಪರ್ಯಾಸ ಎಂದಿದ್ದಾರೆ.

ವಿಧಾನ ಪರಿಷತ್‌ನ ಎಲ್ಲ ಸದಸ್ಯರು ಹಾಗೂ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ತಮಗೆ ಮನವರಿಕೆ ಮಾಡಿಕೊಟ್ಟಾಗ, ಸಮಸ್ಯೆ ಪರಿಹಾರಕ್ಕೆ ಸಮ್ಮತಿಸಿದ್ದೀರಿ. ಬರುವ ಆಯವ್ಯಯದಲ್ಲಿ ಅನುದಾನ ಒದಗಿಸಲು ಕ್ರಮ ಕೈಗೊಳ್ಳಬೇಕೆಂಬುದು ಶಿಕ್ಷಕರ ವರ್ಗದ ಆಶಯ-ಒತ್ತಾಸೆಯಾಗಿದೆ. ಸದನ ಸಮಿತಿ 2018ರ ಫೆ. 6ರಂದು ನೀಡಿದ ವರದಿಯ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಹೊರಟ್ಟಿ ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next