Advertisement

ಪ್ರಥಮ ಸೆಮಿಸ್ಟರ್‌ ಪರೀಕ್ಷೆ ತೊಳಲಾಟ!

02:19 PM Apr 28, 2022 | Team Udayavani |

ದಾವಣಗೆರೆ: ರಾಜ್ಯ ಸರ್ಕಾರ, ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವಲ್ಲಿ ತೋರಿದ ಉತ್ಸುಕತೆ ಪಠ್ಯಕ್ರಮ, ಪುಸ್ತಕಗಳ ಲಭ್ಯತೆ, ಯೋಜನಾಬದ್ಧ ವಾಗಿ ನೀತಿ ಅನುಷ್ಠಾನ, ಸಕಾಲದಲ್ಲಿ ಪರೀಕ್ಷೆ ನಡೆಸುವಲ್ಲಿ ತೋರದ ಕಾಳಜಿಯ ಪರಿಣಾಮ ಪದವಿಯ ಪ್ರಥಮ ಸೆಮಿಸ್ಟರ್‌ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ!

Advertisement

ದಾವಣಗೆರೆ ವಿಶ್ವವಿದ್ಯಾಲಯದ ಪದವಿಯ ಬಹುತೇಕ ಎಲ್ಲ ಪರೀಕ್ಷೆಗಳು ಮುಗಿದಿವೆ. ಆದರೆ ಪ್ರಥಮ ಸೆಮಿಸ್ಟರ್‌ನ ಪರೀಕ್ಷಾ ವೇಳಾಪಟ್ಟಿ ಈ ಕ್ಷಣದವರೆಗೂ ನಿಗದಿಯಾಗಿಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂಬುದು ಅಕ್ಷರಶಃ ಗೊಂದಲದ ಗೂಡಾಗಿದೆ.

‘ಮೂಗಿಗಿಂತಲೂ ಮೂಗುತಿ ಭಾರ’ ಎನ್ನುವಂತೆ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಜ್ಜಾಗುವುದಕ್ಕಿಂತಲೂ ಪರೀಕ್ಷೆ ನಿರ್ದಿಷ್ಟವಾಗಿ ನಡೆಯುವುದು ಯಾವಾಗ ಎಂಬುದೇ ಗೊತ್ತಾಗದೆ ಅಯೋಮಯ ಸ್ಥಿತಿಯಲ್ಲಿದ್ದಾರೆ. ಪರೀಕ್ಷಾ ದಿನಾಂಕ ನಿಗದಿಯಾಗದೆ ಓದುವತ್ತ ಗಮನ ಹರಿಸದಂತಾಗಿದೆ.

ದೇಶದಲ್ಲೇ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ ಕೀರ್ತಿ ನಮ್ಮದು ಎಂದು ಬೆನ್ನು ಚಪ್ಪರಿಸಿಕೊಳ್ಳುವ ರಾಜ್ಯ ಸರ್ಕಾರ ಅನುಸರಿಸುತ್ತಿರುವ ನೀತಿಯ ಪರಿಣಾಮವಾಗಿಯೇ ಈವರೆಗೆ ಪ್ರಥಮ ಸೆಮಿಸ್ಟರ್‌ ಪರೀಕ್ಷೆ ನಡೆಯುವುದಿರಲಿ, ಯಾವಾಗಿನಿಂದ ಖಚಿತವಾಗಿ ಪ್ರಾರಂಭ ಆಗಲಿವೆ ಎಂಬುದಕ್ಕೆ ಯಾರಲ್ಲೂ ಉತ್ತರವೇ ಇಲ್ಲ.

ಜಾಲತಾಣ ನಂಬಿ ಬೇಸ್ತು ಬಿದ್ದರು

Advertisement

ಕೆಲ ದಿನಗಳ ಹಿಂದಷ್ಟೇ ಪ್ರಥಮ ಸೆಮಿಸ್ಟರ್‌ ಪರೀಕ್ಷೆ ಏ. 27ರಿಂದ ಆರಂಭವಾಗಲಿದೆ ಎಂಬ ವೇಳಾಪಟ್ಟಿ ಜಾಲತಾಣಗಳಲ್ಲಿ ಹರಿದಾಡಿದ್ದನ್ನು ನಂಬಿದ ವಿದ್ಯಾರ್ಥಿಗಳು ಅದೇ ನಿಜವಾದ ವೇಳಾಪಟ್ಟಿ ಎಂದು ಭಾವಿಸಿ ಪರೀಕ್ಷೆಗೆ ಸಿದ್ಧರಾದರು. ಮದುವೆ, ನಿಶ್ಚಿತಾರ್ಥ, ಪ್ರವಾಸ ಮುಂತಾದವುಗಳನ್ನೆಲ್ಲ ರದ್ದುಪಡಿಸಿ ಇಲ್ಲವೇ ಮುಂದೂಡಿ ಪರೀಕ್ಷೆಗೆ ಸಜ್ಜಾದರು. ನಂತರ ಅದು ಅ ಧಿಕೃತ ವೇಳಾಪಟ್ಟಿಯೇ ಅಲ್ಲ ಎಂಬುದು ತಿಳಿದು ಬಂತು.

ಮತ್ತೆ ಕೆಲವೇ ದಿನಗಳಲ್ಲಿ ಮತ್ತೂಂದು ವೇಳಾಪಟ್ಟಿಯೂ ಜಾಲತಾಣಗಳಲ್ಲಿ ಹರಿದಾಡ ತೊಡಗಿತು. ವಿದ್ಯಾರ್ಥಿಗಳು ಆಗಲೂ ಪರೀಕ್ಷಾ ತಯಾರಿ ಮಾಡಿಕೊಂಡರು. ಅಂತಿಮವಾಗಿ ಅದು ಸಹ ನಿಜವಾದ ವೇಳಾಪಟ್ಟಿಯೇ ಅಲ್ಲ ಎಂಬುದು ಗೊತ್ತಾಯಿತು. ಪದವಿ ಹಂತದ ವೇಳಾಪಟ್ಟಿಯೇ ಜಾಲತಾಣದಲ್ಲಿ ಹಲವಾರು ಹರಿದಾಡಿದರೂ ಸಂಬಂಧಿತರು ಈವರೆಗೆ ಅದರ ಬಗ್ಗೆ ಗಮನ ಹರಿಸಿಲ್ಲ ಎನ್ನುವುದು ಪರಮಾಶ್ಚರ್ಯ.

ವಾಸ್ತವವಾಗಿ ಪ್ರಥಮ ಸೆಮಿಸ್ಟರ್‌ ಪರೀಕ್ಷೆ ಮುಗಿದು ಎರಡನೇ ಸೆಮಿಸ್ಟರ್‌ ಪ್ರಾರಂಭ ಅಗಬೇಕಿತ್ತು. ಎರಡೂವರೆ ತಿಂಗಳಷ್ಟು ವಿಳಂಬವಾದರೂ ಸರ್ಕಾರವಾಗಲೀ, ಉನ್ನತ ಶಿಕ್ಷಣ ಇಲಾಖೆಯಾಗಲೀ ಪರೀಕ್ಷೆ ನಡೆಸುವತ್ತ ಗಮನ ಹರಿಸದಿರುವುದು ಸೋಜಿಗ ಮೂಡಿಸಿದೆ. ಸರ್ಕಾರದ ವಿಳಂಬ ನೀತಿಯಿಂದ ಪ್ರಥಮ ಸೆಮಿಸ್ಟರ್‌ ವಿದ್ಯಾರ್ಥಿಗಳು ಪರೀಕ್ಷಾ ತೊಳಲಾಟದಲ್ಲಿದ್ದಾರೆ.

ಸರ್ಕಾರಕ್ಕೆ ಸರಿಯಾದ ಪಾಲಿಸಿಯೇ ಇಲ್ಲ. ಫಸ್ಟ್‌ ಸೆಮಿಸ್ಟರ್‌ ಎಕ್ಸಾಂ ಯಾವಾಗ ಎನ್ನುವುದೇ ಗೊತ್ತಿಲ್ಲ. ಮಕ್ಕಳು ಓದುವುದಕ್ಕೆ ಬಹಳ ತೊಂದರೆ ಆಗುತ್ತಿದೆ. ಈಗಲಾದರೂ ಎಕ್ಸಾಂ ಡೇಟ್‌ ಫಿಕ್ಸ್‌ ಮಾಡಲಿ. -ನೊಂದ ಪೋಷಕಿ

Advertisement

Udayavani is now on Telegram. Click here to join our channel and stay updated with the latest news.

Next