Advertisement
ನಂಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ 17ನೇ ರ್‍ಯಾಂಕ್ ಬಂದಿದೆ ಅಂತ ಗೊತ್ತಾದಾಗ ಖುಷಿಯಲ್ಲಿ ಅದನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕ್ಕೊಳ್ಳಬೇಕು ಅಂತ ಅನ್ನಿಸಲಿಲ್ಲ. ಯಾಕೆ ಗೊತ್ತಾ? ರಿಸಲ್ಟ್ ಬಂದಾಗ ನನ್ಹತ್ರ ಸ್ಮಾರ್ಟ್‌ಫೋನೇ ಇದ್ದಿರಲಿಲ್ಲ. ಮೂರು ವರ್ಷದಿಂದ ನಾನು ಬಳಸುತ್ತಾ ಇದ್ದಿದ್ದು, ನೋಕಿಯಾದ ಮಾಮೂಲಿ ಸೆಟ್ಟನ್ನು. ಎಂಜಿನಿಯರ್ ಆದಾಗಲೇ ಮೊಬೈಲನ್ನು ಎತ್ತಿಟ್ಟಿದ್ದೆ. ಸ್ಮಾರ್ಟ್‌ಫೋನ್ ಕೈಯಲ್ಲಿದ್ರೆ ಓದೋಕೆ ಆಗಲ್ಲ ಅಂತ ಅದರಿಂದ ದೂರ ಉಳಿದಿದ್ದಲ್ಲ. ಮೊಬೈಲ್ ಯಾವತ್ತಿಗೂ ನಂಗೆ ಅತೀ ಅಗತ್ಯವಾದ ಸಾಧನ ಅಂತ ಅನ್ನಿಸಿಯೇ ಇಲ್ಲ. ಮೊಬೈಲ್‌ನಿಂದ ದೂರ ಉಳಿದರೆ ಸಾಕಷ್ಟು ಸಮಯ ಉಳಿಯುತ್ತೆ. ಇಲ್ಲಸಲ್ಲದ ವಿಚಾರಗಳು ತಲೇಲಿ ತುಂಬ್ಕೋಳಲ್ಲ. ಅದೇ ಒಂದು ನೆಮ್ಮದಿ.
ಐಎಎಸ್ ಮಾಡುವ ಮೊದಲ ಪ್ರೇರಣೆ ಸಿಕ್ಕಿದ್ದು ನನ್ನ ಅಜ್ಜಂದಿರಿಂದ. ಒಬ್ಬರು ಎಕ್ಸಿಕ್ಯುಟಿವ್ ಎಂಜಿನಿಯರ್ ಆಗಿದ್ದ ಎಸ್.ಎನ್. ಖೋತ, ಇನ್ನೊಬ್ರು ಜನರಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದ ವಿ.ಪಿ. ಸಂಕನೂರ. ಅವರ ಜನಸೇವೆಯನ್ನು ಹತ್ತಿರದಿಂದ ನೋಡುತ್ತಾ, ಬೆಳೆದೆ. ದೊಡ್ಡೋನಾದ ಮೇಲೆ ನಾನೂ ಇದೇ ರೀತಿ ಜನರ ಸೇವೆ ಮಾಡಬೇಕು, ಅವರ ಪ್ರೀತಿ ಗಳಿಸಬೇಕು ಅಂದುಕೊಳ್ಳುತ್ತಿದ್ದೆ. ಜನಸೇವೆಗೆ ಇರುವ ಮಾರ್ಗಗಳ ಕುರಿತು ಅರಿವಿರದ ವಯಸ್ಸದು. ಮುಂದೆ ಪದವಿ ಓದುವಾಗ ಸಿವಿಲ್ ಸರ್ವಿಸ್ ಪರೀಕ್ಷೆಗಳ ಮಾಹಿತಿ ಇದ್ದರೂ, ಆ ಬಗ್ಗೆ ಸೀರಿಯಸ್ಸಾಗಿ ಯೋಚಿಸಿರಲಿಲ್ಲ. ಆ ಕುರಿತು ಸ್ಪಷ್ಟತೆ ಹೆಚ್ಚುತ್ತಾ ಹೋದಂತೆ, ಅಜ್ಜಂದಿರಿಂದ ಪ್ರೇರಣೆ ಪಡೆದ ಕಾರ್ಯವನ್ನು ಐಎಎಸ್ ಅಧಿಕಾರಿಯಾಗುವ ಮೂಲಕ ಪೂರೈಸಬಹುದು ಎನ್ನಿಸಿತು.
Related Articles
ಸಿವಿಲ್ ಸರ್ವಿಸ್ ಪರೀಕ್ಷೆ, ಇತರೆ ಪದವಿ ಪರೀಕ್ಷೆಯ ಓದಿನಂತಲ್ಲ. ಪರೀಕ್ಷೆ ಬರೆಯಲು ಒಂದೆರಡು ವರ್ಷಗಳ ತಯಾರಿ ಬೇಕೇ ಬೇಕು. ಸತತ ಓದು, ಏಕಾಗ್ರತೆಯ ಓದು, ಬೇಸಿಕ್ ವಿಷಯಗಳ ಆಳ ಜ್ಞಾನ ಅತ್ಯಂತ ಅಗತ್ಯ. ನಾನು ತಾಂತ್ರಿಕ ವಿಷಯಗಳನ್ನು ಪದವಿಯಲ್ಲೇ ಓದಿದ್ದರಿಂದ ಐಚ್ಛಿಕ ವಿಷಯವಾಗಿ ಮಾನವಿಕ ಶಾಸ್ತ್ರ (ಆ್ಯಂಥ್ರೊಪಾಲೊಜಿ) ಆರಿಸಿಕೊಂಡಿದ್ದೆ. ಜೊತೆಗೆ ಅರ್ಥಶಾಸ್ತ್ರದ ಓದು ಅಲ್ಲಲ್ಲಿ ಸ್ವಲ್ಪ ಕಠಿಣ ಅನ್ನಿಸ್ತಾ ಇತ್ತು. ಆದ್ರೆ ನಂಗೆ ಆಸಕ್ತಿ ಇದ್ದಿದ್ದರಿಂದ ಬೇಗ ಅರ್ಥ ಆಗ್ತಾ ಹೋಗ್ತಿತ್ತು.
Advertisement
ವಿಷಯ ವ್ಯಾಪ್ತಿ, ಪಠ್ಯಕ್ರಮ ನೋಡಿದರೆ ಸಿವಿಲ್ ಸರ್ವಿಸ್ ಪರೀಕ್ಷೆ ಅಷ್ಟೊಂದು ಕಠಿಣವಲ್ಲ. ಅಕಾಡೆಮಿಕ್ ಎಕ್ಸರ್‌ಸೈಜ್‌ಗಿಂತ ಇದೊಂಥರಾ ಮೆಂಟಲ್ ಗೇಮ್ ಇದ್ದಂತೆ. ಪರೀಕ್ಷಾರ್ಥಿಗಳಲ್ಲಿ ಬಹಳಷ್ಟು ಜನ ಸೋಲುವುದು ಸ್ವಂತ ಒತ್ತಡಗಳ ನಿರ್ವಹಣೆಯಲ್ಲೇ. “ನನ್ನಿಂದ ಆಗುತ್ತೋ, ಇಲ್ಲವೋ?’ ಅನ್ನೋ ಆತಂಕ, ಸಂದೇಹ ಅವರನ್ನು ಕಾಡ್ತಾ ಇರುತ್ತೆ. ಅದರ ಜೊತೆಗೆ ಕುಟುಂಬದವರು ಒತ್ತಡ ಹೇರಿದರೆ ಗುರಿಯಿಂದಲೇ ವಿಮುಖನಾಗುವ ಭಯ ಎದುರಾಗುತ್ತೆ. ಈ ಐದು ವರ್ಷಗಳಲ್ಲಿ ನನಗೆ ಇಂಥ ಒತ್ತಡ ಎದುರಾದರೂ, ಆ ಒತ್ತಡ ಒಂದು ದಿನಕ್ಕಿಂತ ಜಾಸ್ತಿ ನನ್ನನ್ನು ಕಾಡಲು ಬಿಟ್ಟಿಲ್ಲ. “ನನ್ನಿಂದ ಸಾಧ್ಯ’ ಅನ್ನೋ ವಿಶ್ವಾಸವೇ ನನ್ನನ್ನು ಇಷ್ಟು ದಿನಗಳವರೆಗೆ ಕಾಯ್ದಿದ್ದು. ಜೊತೆಗೆ ಕುಟುಂಬದವರೂ “ನಿನ್ನಿಂದ ಆಗುತ್ತೆ’ ಅಂತ ಹುರಿದುಂಬಿಸ್ತಲೇ ಇದ್ರು. ಅವರೇ ನನ್ನ ಹಿಂದಿನ ಅದ್ಭುತ ಶಕ್ತಿ.
ಹೇಗೆ ಓದುತ್ತಿದ್ದೆ ಗೊತ್ತಾ?ನಾನು ದಿನಕ್ಕೆ ಎಂಟರಿಂದ ಹತ್ತು ತಾಸುಗಳ ಅಧ್ಯಯನ ಮಾಡ್ತಿದ್ದೆ. ಆದರೆ, ನಡುವೆ 2 ತಾಸುಗಳ ವಿರಾಮ ಇರುತ್ತಿತ್ತು. ಆಗ ನಂಗಿಷ್ಟ ಇರೋ ಚಟುವಟಿಕೆ ಮಾಡ್ತಾ ಇದ್ದೆ. ಬೆಳಗ್ಗೆ ಜಾಗಿಂಗ್, ನಡುವೆ ಸಂಗೀತ ಕೇಳಿ ಮನಸ್ಸು ರಿಲ್ಯಾಕ್ಸ್ ಮಾಡಿಕೊಳ್ತಿದ್ದೆ. ಗೆಳೆಯರೊಂದಿಗಿನ ಹರಟೆ ಹೊಡೆಯುತ್ತಿದ್ದೆ. ಮತ್ತೆ ಸ್ವಲ್ಪ ಹೊತ್ತು ಬಿಟ್ಟು ಓದು ಆರಂಭಿಸುತ್ತಿದ್ದೆ. ತಂದೆ- ತಾಯಿ ಜೊತೆ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದೆ. ಅದು ನನಗೆ ಧೈರ್ಯ ಮತ್ತು ಭದ್ರತಾ ಭಾವ ನೀಡುತ್ತಿತ್ತು. ಹದಿನಾರು ತಾಸು ದುಡೀತಿದ್ದೆ!
ಇಲ್ಲಿ ನಾನೊಂದು ವಿಷಯ ಹೇಳ್ಳೋಕೆ ಬಯಸ್ತೀನಿ. ನಮ್ಮದು ತುಂಬಾ ಯಂಗ್ ದೇಶ. ನಮ್ಮ ಯುವ ಜನರಲ್ಲಿ ಅಪಾರ ಶಕ್ತಿ ಇದೆ. ನಾನು ಇಟಿಎಂ ಸಿಸ್ಟಮ್ಸ್‌ನಲ್ಲಿದ್ದಾಗ 15-16 ತಾಸು ಕೆಲಸ ಮಾಡ್ತಾ ಇದ್ದೆ. ನಂತರ ಮರುದಿನ ಮತ್ತೆ ನನಗೆ ಅಷ್ಟೇ ಎನರ್ಜಿ ಇರ್ತಾ ಇತ್ತು. ಯಾಕಂದ್ರೆ, ನಾನು ನನ್ನ ಕೆಲಸವನ್ನು ಎಂಜಾಯ್ ಮಾಡ್ತಾ ಇದ್ದೆ. ಆಗ ನನಗೆ ಅರ್ಥವಾಗಿದ್ದೇನೆಂದರೆ, ಕೆಲಸ ಎಷ್ಟೇ ಕಷ್ಟದ್ದಾಗಿರಲಿ ಅದನ್ನು ಎಂಜಾಯ್ ಮಾಡೋದನ್ನು ಕಲಿಯಬೇಕು. ಅದನ್ನು ಪ್ರಯತ್ನಪಟ್ಟು ರೂಢಿಸಿಕೊಂಡರೆ, ಮುಂದೆ ಅದು ನಮ್ಮ ಮನೋಭಾವವೇ ಆಗಿ ಬದಲಾಗುತ್ತೆ. ಆಮೇಲೆ ಗಮನಿಸಿದರೆ ನಾವು ಪಕ್ಕಾ ಪರಿಶ್ರಮಿಗಳಾಗಿ ಬದಲಾಗಿರುತ್ತೇವೆ. ಇದನ್ನು ಇಂದಿನ ಯುವಜನರು ಕಲೀಬೇಕಿದೆ. ಸಕ್ಸಸ್ ಸೂತ್ರ
– ಗುರಿಯತ್ತ ಸ್ಪಷ್ಟತೆ
– ಚಿತ್ತ ಚಾಂಚಲ್ಯಕ್ಕೆ ಬ್ರೇಕ್
– ಸಾಮಾಜಿಕ ಜಾಲತಾಣಗಳಿಗೆ ಫುಲ್‌ಸ್ಟಾಪ್
– ಜ್ಞಾನಕ್ಕಷ್ಟೇ ಇಂಟರ್‌ನೆಟ್ ಬಳಕೆ
– ಟೈಮ್‌ಟೇಬಲ್ ಪಾಲನೆ
– ಸಾಮರ್ಥಯಕ್ಕೆ ತಕ್ಕಂತೆ ಅಧ್ಯಯನ
– ಇನ್ನೊಬ್ಬರ ಅನುಕರಣೆ ಮಾಡದಿರೋದು ನನಗೆ ಸ್ಫೂರ್ತಿ ಕೊಟ್ಟ ಪುಸ್ತಕಗಳು
ಶಿವಶಂಕರ್ ಮೆನನ್- ಚಾಯ್ಸಸ್
ಸ್ವಾಮಿ ಜಗದಾತ್ಮಾನಂದ- ಬದುಕಲು ಕಲಿಯಿರಿ
ವರ್ಗೀಸ್ ಕುರಿಯನ್- ಐ ಟೂ ಹ್ಯಾಡ್ ಎ ಡ್ರೀಮ್
ವ್ಯಕ್ತಿತ್ವ ವಿಕಸನ ಪುಸ್ತಕಗಳು ನಾನು ಸಿಟಿಯವನಲ್ಲ…
ನಾನು ಸಿಟಿಯ ಹುಡುಗ ಅಲ್ಲ. ನಮ್ಮದು ಗದಗ ಜಿಲ್ಲೆ ರೋಣ ತಾಲೂಕು ಇಡಗುಂಜಿ ಗ್ರಾಮ. ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದೇವೆ. ನಮ್ಮ ತಂದೆ ಶರಣಪ್ಪ ಸಂಕನೂರ ಅವರು ನಿವೃತ್ತ ಪಿಡಬ್ಲ್ಯುಡಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾಗಿದ್ದರು. ತಾಯಿ ಸವಿತಾ ಗೃಹಿಣಿ. ಅಣ್ಣ ದೀಪಕ ಸಂಕನೂರ, ಕೆಎಲ್‌ಇ ಫಾರ್ಮಸಿ ಕಾಲೇಜಿನಲ್ಲಿ ಗ್ರಂಥಪಾಲನಾಗಿದ್ದಾನೆ. ರಾಹುಲ್ ಶರಣಪ್ಪ ಸಂಕನೂರ, ಯುಪಿಎಸ್ಸಿ 17ನೇ ರ್‍ಯಾಂಕ್
- ನಿರೂಪಣೆ: ಪ್ರತಿಮಾ ಟಿ.ಕೆ.