Advertisement

6ನೇ ಸೆಮಿಸ್ಟರ್‌ಗೆ ಮೊದಲ ಆದ್ಯತೆ; ಶೀಘ್ರ ಪರೀಕ್ಷೆ

12:55 AM Sep 09, 2021 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 6ನೇ ಸೆಮಿಸ್ಟರ್‌ ಪರೀಕ್ಷೆ ಇನ್ನೂ ನಡೆಯದಿರುವ ಕಾರಣ ಸುಮಾರು 40 ಸಾವಿರ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇರೆ ಕೋರ್ಸ್‌ಗೆ ಸೇರೋಣವೆಂದರೆ ಅಲ್ಲಿ 6ನೇ ಸೆಮಿಸ್ಟರ್‌ನ ಅಂಕಪಟ್ಟಿ ಕೇಳು ತ್ತಿರುವುದರಿಂದ ವಿದ್ಯಾರ್ಥಿಗಳು ದಾರಿತೋಚದಾಗಿದ್ದಾರೆ.

Advertisement

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ 6ನೇ ಸೆಮಿಸ್ಟರ್‌ನಲ್ಲಿ ಬಾಕಿ ಇರುವ ತರಗತಿಗಳನ್ನು ಶೀಘ್ರ ಪೂರ್ಣಗೊಳಿಸಿ ಶೀಘ್ರ ಪರೀಕ್ಷೆ ನಡೆಸಲು ವಿ.ವಿ. ತೀರ್ಮಾನಿಸಿದೆ. ಸೆಪ್ಟಂಬರ್‌ ಕೊನೆಯಲ್ಲಿ ಪರೀಕ್ಷೆ ಆರಂಭವಾದರೆ 10 ದಿನದೊಳಗೆ ಪೂರ್ಣಗೊಳಿಸಿ, ಬಳಿಕ 15 ದಿನದೊಳಗೆ ಮೌಲ್ಯಮಾಪನ ಮುಗಿಸಿ  ಅಕ್ಟೋಬರ್‌ ಮಧ್ಯಭಾಗದಲ್ಲಿ ಫಲಿತಾಂಶ ಪ್ರಕಟಿಸಬಹುದು ಎಂಬುದು ವಿ.ವಿ.ಯ ಚಿಂತನೆ.

ಮೌಲ್ಯಮಾಪನ ಸ್ಥಗಿತ :

ಪದವಿಯಲ್ಲಿ 1, 3 ಮತ್ತು 5ನೇ ಸೆಮಿಸ್ಟರ್‌ ಹಾಗೂ ಸ್ನಾತಕೋತ್ತರದಲ್ಲಿ 1 ಮತ್ತು 3ನೇ ಸೆಮಿಸ್ಟರ್‌ ಪರೀಕ್ಷೆ  ಇತ್ತೀಚೆಗೆ ಪೂರ್ಣಗೊಂಡಿದ್ದು ಮೌಲ್ಯಮಾಪನ ಕೂಡ ಆರಂಭವಾಗಿತ್ತು. ಅದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಪ್ರಾಂಶುಪಾಲರ ಮಹತ್ವದ ವಿಶೇಷ ಸಭೆಯಲ್ಲಿ “ಸದ್ಯಕ್ಕೆ ತರಗತಿ ಮಾಡಿ 6ನೇ ಸೆಮಿಸ್ಟರ್‌ ಮಕ್ಕಳ ಪರೀಕ್ಷೆ ಮುಗಿಸಿದ ಬಳಿಕವೇ ಉಳಿದ ಮೌಲ್ಯಮಾಪನ ನಡೆಸುವುದು ಸೂಕ್ತ’ ಎಂದು ತೀರ್ಮಾನ ಕೈಗೊಂಡ ಕಾರಣ ಸದ್ಯ ಮೌಲ್ಯ ಮಾಪನವನ್ನು ಸ್ಥಗಿತಗೊಳಿಸಲಾಗಿದೆ. ಹೀಗೆ ಮಾಡಿದರೆ ಇದು ವಿದ್ಯಾರ್ಥಿಗಳ ಭವಿಷ್ಯಕ್ಕೂ ಪೂರಕವಾಗಲಿದೆ ಎಂಬು ವಿವಿಯ ಅಭಿಪ್ರಾಯವಾಗಿದೆ.

6ನೇ ಸೆಮಿಸ್ಟರ್ಗೆ ಆದ್ಯತೆ ಏಕೆ? :

Advertisement

1ನೇ ಸೆಮಿಸ್ಟರ್‌ ಅಂಕವು 2ನೇ ಸೆಮಿಸ್ಟರ್‌ಗೆ ಭಡ್ತಿಗೆ ಹಾಗೂ 3ನೇ ಸೆಮಿಸ್ಟರ್‌ ಅಂಕವು 4ನೇ ಸೆಮಿಸ್ಟರ್‌ಗೆ ಭಡ್ತಿಗೆ ಮಾತ್ರ ಅಗತ್ಯ. ಈ ವಿದ್ಯಾರ್ಥಿಗಳು ಮುಂದಿನ ಶಿಕ್ಷಣವನ್ನು ಅದೇ ಕಾಲೇಜಿನಲ್ಲಿ ಮುಂದು ವರಿಸುವ ಕಾರಣ ಮೌಲ್ಯಮಾಪನದ ತುರ್ತು ಇಲ್ಲ. ಆದರೆ 6ನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ಮುಂದಿನ ಶಿಕ್ಷಣಕ್ಕಾಗಿ ಬೇರೆಡೆ ತೆರಳುವ ಕಾರಣ ಹಾಗೂ 5ನೇ ಸೆಮಿಸ್ಟರ್‌ ವಿದ್ಯಾರ್ಥಿಗಳ  ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಅದನ್ನು ಮೊದಲು ಪೂರ್ಣಗೊಳಿಸಬೇಕು ಎಂಬುದು ವಿ.ವಿ.ಯ ನಿರ್ಧಾರ.

ಆನ್ಲೈನ್ ಪರೀಕ್ಷೆ ಇಲ್ಲ :

6ನೇ ಸೆಮಿಸ್ಟರ್‌ ಪರೀಕ್ಷೆಯನ್ನು ಆನ್‌ಲೈನ್‌  ಮೂಲಕ ನಡೆಸುವ ಬಗ್ಗೆ ವಿ.ವಿ. ಈ ಹಿಂದೆ ಚಿಂತಿ ಸಿತ್ತು. ಆದರೆ ಗ್ರಾಮಾಂತರದಲ್ಲಿ ನೆಟ್‌ವರ್ಕ್‌ ಸಮಸ್ಯೆ/ತಾಂತ್ರಿಕ ತೊಂದರೆಯ ಹಿನ್ನೆಲೆಯಲ್ಲಿ ಆಫ್‌ಲೈನ್‌ ಪರೀಕ್ಷೆಯ ಮೊರೆಹೋಗಿದೆ.

6ನೇ ಸೆಮಿಸ್ಟರ್‌ ತರಗತಿ  ಮಾಡಿ ಪರೀಕ್ಷೆ ನಡೆಸಿ 6 ಹಾಗೂ 5ನೇ ಸೆಮಿಸ್ಟರ್‌ ಮೌಲ್ಯಮಾಪನ ಮುಗಿ ಸಲು ಪ್ರಾಂಶುಪಾಲರ ಸಭೆಯಲ್ಲಿ ನಿರ್ಧರಿಸ ಲಾಗಿದೆ. ಅದರಂತೆ ಸದ್ಯ ಇತರ ಸೆಮಿಸ್ಟರ್‌ಗಳ ಮೌಲ್ಯ ಮಾಪನವನ್ನು ಸ್ಥಗಿತಗೊಳಿಸಲಾಗಿದೆ. 6ನೇ ಸೆಮಿಸ್ಟರ್‌ ಪರೀಕ್ಷಾ ವೇಳಾಪಟ್ಟಿ ಶೀಘ್ರ ಪ್ರಕಟಿಸಲಾಗುವುದು. ಪ್ರೊ| ಪಿ.ಎಸ್. ಯಡಪಡಿತ್ತಾಯ, ಮಂಗಳೂರು ವಿ.ವಿ. ಕುಲಪತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next