ಬೆಂಗಳೂರು: ದೇಶದಲ್ಲಿ ಮೊದಲ ಬಾರಿಗೆ ಕುಟುಂಬದ ಆರೋಗ್ಯ ಸ್ಥಿತಿಯನ್ನು ಮೂಲ ಹಂತದಲ್ಲಿಯೇ ಪತ್ತೆ ಹಚ್ಚಿ ಸರಕಾರದ ಮಟ್ಟದಲ್ಲಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ರಾಜ್ಯಾದ್ಯಂತ ಜು.30ರ ವರೆಗೆ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆಯನ್ನು ಮೊಬೈಲ್ ಆ್ಯಪ್ ಮೂಲಕ ನಡೆಸಲಾರಂಭಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಂತಾನೋತ್ಪತ್ತಿ ಮತ್ತು ಮಗುವಿನ ಆರೋಗ್ಯ ಕ್ರಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಸಮೀಕ್ಷೆ ನಡೆಯಲಿದೆ. ಪ್ರಾಯೋಗಿಕವಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಪೂರ್ಣಗೊಳಿಸಲಾಗಿದೆ.
ಸಮೀಕ್ಷೆಯಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು (ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಸಮುದಾಯ ಆರೋಗ್ಯಾಧಿಕಾರಿಗಳು) ಗ್ರಾಮೀಣ ಹಾಗೂ ನಗರ ಪ್ರದೇಶದ ಕುಟುಂಬಗಳ ಮಕ್ಕಳ ಬೆಳವಣಿಗೆ, ಆರೋಗ್ಯ ಸ್ಥಿತಿ, ಅಪೌಷ್ಟಿಕತೆ ಸಮಸ್ಯೆ ವಿವರ, ಗರ್ಭಿಣಿ ಮಹಿಳೆಯರ ರಕ್ತ ಹೀನತೆ, ಗಂಡಾಂತರದ ಗರ್ಭಧಾರಣೆ, ಕುಟುಂಬ ಕಲ್ಯಾಣ ವಿಧಾನ ಬಳಕೆ ಸಹಿತ ವಿವಿಧ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಪ್ರಕಟನೆ ತಿಳಿಸಿದೆ.