Advertisement

ತೆಂಡುಲ್ಕರ್‌ ಜತೆಯೇ ಮೊದಲ ಹಾಗೂ ಕೊನೆಯ ಇನ್ನಿಂಗ್ಸ್‌ ! ಗಂಗೂಲಿ ಅದೃ ಷ್ಟ

07:56 PM Jan 11, 2022 | Team Udayavani |

ಎಲ್ಲರಿಗೂ ಸಚಿನ್‌ ತೆಂಡುಲ್ಕರ್‌ ಆಗಲು ಸಾಧ್ಯವಿಲ್ಲ. ಹೀಗಿರುವಾಗ ಅವರ ಜತೆ, ಅವರಿರುವ ತಂಡದಲ್ಲಿ, ಅವರ ವಿರುದ್ಧ ಆಡಿದ್ದು, ಅವರಿಗೆ ಬೌಲಿಂಗ್‌ ಮಾಡಿದ್ದೇ ಒಂದು ಭಾಗ್ಯ ಎಂಬ ಖುಷಿ, ತೃಪ್ತಿ, ಧನ್ಯತೆ ಅದೆಷ್ಟೋ ಆಟಗಾರರದು. ಇಲ್ಲಿ ಹೇಳು ಹೊರಟಿರುವ ವಿಷಯ ಸಚಿನ್‌ ಜತೆಗಿನ ಬಾಂಧವ್ಯದ ಮತ್ತೊಂದು ಸ್ವಾರಸ್ಯಕರ ಸಂಗತಿಗೆ ಸಂಬಂಧಿಸಿದ್ದು. ಒಂದು ಲೆಕ್ಕದಲ್ಲಿ ಇವರು ಅದೃಷ್ಟಶಾಲಿಗಳೇ. ಇವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿ ಕ್ರೀಸ್‌ ಇಳಿಯುವಾಗ ಹಾಗೂ ತಮ್ಮ ಕಟ್ಟಕಡೆಯ ಅಂತಾರಾಷ್ಟ್ರೀಯ ಇನ್ನಿಂಗ್ಸ್‌ ಆಡಿ ವಾಪಸಾಗುವಾಗ ಕ್ರೀಸಿನ ಇನ್ನೊಂದು ತುದಿಯಲ್ಲಿ ನಿಂತಿದ್ದವರು ಅದೇ ವಾಮನಮೂರ್ತಿ, ಸಚಿನ್‌ ತೆಂಡುಲ್ಕರ್‌!

Advertisement

ಇಂಥ ನಾಲ್ವರು ಆಟಗಾರರಿಗೆ ಭಾರತ ಸಾಕ್ಷಿಯಾಗಿದೆ. ಇವರೆಂದರೆ ಸೌರವ್‌ ಗಂಗೂಲಿ, ಸುಜಿತ್‌ ಸೋಮಸುಂದರ್‌, ವಿಜಯ್‌ ದಹಿಯಾ ಮತ್ತು ಸೊಬ್ರೊತೊ ಬ್ಯಾನರ್ಜಿ.

ಕನ್ನಡಿಗನ ಹೆಮ್ಮೆ..
ಸಚಿನ್‌ ತೆಂಡುಲ್ಕರ್‌ ಜತೆ ಮೊದಲ ಹಾಗೂ ಕಡೆಯ ಇನ್ನಿಂಗ್ಸ್‌ ಆಡಿದ್ದು ಕರ್ನಾಟಕದ ಆರಂಭಕಾರ ಸುಜಿತ್‌ ಸೋಮಸುಂದರ್‌ ಪಾಲಿನ ಹೆಮ್ಮೆಯ ಸಂಗತಿ. ಸುಜಿತ್‌ ಆಡಿದ್ದು 2 ಏಕದಿನ ಪಂದ್ಯ ಮಾತ್ರ. 1996ರ ಟೈಟಾನ್‌ ಕಪ್‌ ಸರಣಿಯ ದಕ್ಷಿಣ ಆಫ್ರಿಕಾ ಎದುರಿನ ಹೈದರಾಬಾದ್‌ ಪಂದ್ಯದಲ್ಲಿ ಸುಜಿತ್‌ ಪದಾರ್ಪಣೆ ಮಾಡಿದ್ದರು. ನಾಯಕ ತೆಂಡುಲ್ಕರ್‌ ಜತೆ ಇನ್ನಿಂಗ್ಸ್‌ ಆರಂಭಿಸಿದ ಅದೃಷ್ಟ ಈ ಕನ್ನಡಿಗನದ್ದಾಗಿತ್ತು.

ಸರಣಿಯ ದ್ವಿತೀಯ ಪಂದ್ಯ ಆಸ್ಟ್ರೇಲಿಯ ವಿರುದ್ಧ ನಡೆದಿತ್ತು. ತವರಾದ ಬೆಂಗಳೂರಿನಲ್ಲಿ ಆಡುವ ಅವಕಾಶ ಸುಜಿತ್‌ಗೆ ಲಭಿಸಿತ್ತು. ದುರದೃಷ್ಟವಶಾತ್‌ ಇದೇ ಅವರ ಕಟ್ಟಕಡೆಯ ಅಂತಾರಾಷ್ಟ್ರೀಯ ಪಂದ್ಯವಾದದ್ದು. 216 ರನ್‌ ಚೇಸಿಂಗ್‌ ವೇಳೆ ಸುಜಿತ್‌ 7 ರನ್‌ ಮಾಡಿ ಮೆಕ್‌ಗ್ರಾತ್‌ಗೆ ಬೌಲ್ಡ್‌ ಆಗಿದ್ದರು. ಜತೆಗಾರ ಸಚಿನ್‌ 88ರ ತನಕ ಬೆಳೆದು ಭಾರತದ 2 ವಿಕೆಟ್‌ ಗೆಲುವಿನ ರೂವಾರಿ ಎನಿಸಿದರು.

ದಹಿಯಾ-ಏಕೈಕ ಇನ್ನಿಂಗ್ಸ್‌
ವಿಕೆಟ್‌ ಕೀಪರ್‌ ವಿಜಯ್‌ ದಹಿಯಾ ತನ್ನ ಎರಡೂ ಟೆಸ್ಟ್‌ಗಳನ್ನು 2000-01ರಲ್ಲಿ ಜಿಂಬಾಬ್ವೆ ವಿರುದ್ಧ ಆಡಿದ್ದರು. ಪದಾರ್ಪಣೆ ಮಾಡಿದ್ದು ಹೊಸದಿಲ್ಲಿಯಲ್ಲಾದರೂ ಇವರಿಗೆ ಅಲ್ಲಿ ಬ್ಯಾಟಿಂಗ್‌ ಅವಕಾಶ ಸಿಕ್ಕಿರಲಿಲ್ಲ. ನಾಗ್ಪುರದಲ್ಲಿ 8ನೇ ಕ್ರಮಾಂಕದಲ್ಲಿ ಕ್ರೀಸ್‌ ಇಳಿಯುವಾಗ ಆಗಲೇ ಭಾರತ 6ಕ್ಕೆ 601 ರನ್‌ ಪೇರಿಸಿತ್ತು. ತೆಂಡುಲ್ಕರ್‌ 195ರಲ್ಲಿದ್ದರು. ಇವರ ದ್ವಿಶತಕ ಪೂರ್ತಿಯಾದೊಡನೆ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಲಾಯಿತು. ಇಬ್ಬರು ಒಟ್ಟಿಗೇ ಪೆವಿಲಿಯನ್‌ ಕಡೆ ಹೆಜ್ಜೆ ಹಾಕಿದರು. ಭಾರತಕ್ಕೆ ದ್ವಿತೀಯ ಇನ್ನಿಂಗ್ಸ್‌ ಬ್ಯಾಟಿಂಗ್‌ ಸಿಗಲಿಲ್ಲ. ದಹಿಯಾ ಅವರ ಏಕೈಕ ಟೆಸ್ಟ್‌ ಇನ್ನಿಂಗ್ಸ್‌ ಸಚಿನ್‌ ಜತೆಯೇ ಆರಂಭಗೊಂಡು ಅವರೊಂದಿಗೇ ಮುಗಿದು ಹೋಯಿತು.

Advertisement

ಬಂಗಾಲದ ಪೇಸ್‌ ಬೌಲರ್‌ ಸೊಬ್ರೊತೊ ಬ್ಯಾನರ್ಜಿ ಅವರದು ಇನ್ನೊಂದು ಸ್ವಾರಸ್ಯ. ಇವರಿಗೆ ಟೆಸ್ಟ್‌ನಲ್ಲಿ ಜತೆಗಾರನಾಗಿ ಕಾಣಿಸಿಕೊಂಡ ಏಕೈಕ ಆಟಗಾರನೆಂದರೆ ತೆಂಡುಲ್ಕರ್‌. ಅಂದಹಾಗೆ ಬ್ಯಾನರ್ಜಿ ಆಡಿದ್ದು ಒಂದೇ ಟೆಸ್ಟ್‌, ಒಂದೇ ಇನ್ನಿಂಗ್ಸ್‌!

ಈ ಪಂದ್ಯ ಆಸ್ಟ್ರೇಲಿಯ ವಿರುದ್ಧ 1992ರಲ್ಲಿ ಸಿಡ್ನಿಯಲ್ಲಿ ನಡೆದಿತ್ತು. ಬ್ಯಾನರ್ಜಿ 10ನೇ ಕ್ರಮಾಂಕದಲ್ಲಿ ಆಡಲಿಳಿಯುವಾಗ ಸಚಿನ್‌ ಶತಕ ಬಾರಿಸಿ ಕ್ರೀಸ್‌ ಆಕ್ರಮಿಸಿಕೊಂಡಿದ್ದರು. ಬ್ಯಾನರ್ಜಿ ಗಳಿಕೆ 3 ರನ್‌. ಕೊನೆಯಲ್ಲಿ ಶ್ರೀನಾಥ್‌ ರನೌಟಾದರು. ಸಚಿನ್‌ 148ರಲ್ಲಿ ಅಜೇಯರಾಗಿ ಉಳಿದರು.

“ದಾದಾ’ ಸೌರವ್‌ ಗಂಗೂಲಿಗೆ ಅದೆಷ್ಟೋ ಸಮಯ ಕಾದ ಬಳಿಕ ಭಾರತ ತಂಡದ ಬಾಗಿಲು ತೆರೆದಿತ್ತು. ಅದು 1992ರ ವಿಶ್ವಕಪ್‌ ಕೂಟದ ವೆಸ್ಟ್‌ ಇಂಡೀಸ್‌ ಎದುರಿನ ಬ್ರಿಸ್ಬೇನ್‌ ಪಂದ್ಯ. ಭಾರತ 35 ರನ್ನಿಗೆ 4 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಟದಲ್ಲಿತ್ತು. ಈ ಸಮಯದಲ್ಲಿ ಗಂಗೂಲಿ ಅವರ ಪ್ರವೇಶವಾಗುತ್ತದೆ. ಆಗ ತೆಂಡುಲ್ಕರ್‌ ಇನ್ನೊಂದು ತುದಿಯಲ್ಲಿ ಬ್ಯಾಟ್‌ ಹಿಡಿದು ನಿಂತಿದ್ದರು. ಸಚಿನ್‌ 4ನೇ ಕ್ರಮಾಂಕದಲ್ಲಿ ಕ್ರೀಸ್‌ ಇಳಿದಿದ್ದರೆ, ಗಂಗೂಲಿ 6ನೇ ನಂಬರ್‌ನಲ್ಲಿ ಬಂದಿದ್ದರು. 13 ಎಸೆತ ಎದುರಿಸಿದ ದಾದಾ ಕೇವಲ 3 ರನ್‌ ಮಾಡಿ ನಿರ್ಗಮಿಸಿದರು. ಆದರೆ ಸಚಿನ್‌ 77ರ ತನಕ ಬ್ಯಾಟಿಂಗ್‌ ಬೆಳೆಸಿದರು.

ಸೌರವ್‌ ಗಂಗೂಲಿ ಅವರ ಕಟ್ಟಕಡೆಯ ಅಂತಾರಾಷ್ಟ್ರೀಯ ಇನ್ನಿಂಗ್ಸಿಗೆ ಸಾಕ್ಷಿಯಾದದ್ದು ಆಸ್ಟ್ರೇಲಿಯ ಎದುರಿನ 2008ರ ನಾಗ್ಪುರ ಟೆಸ್ಟ್‌. ಮೊದಲ ಸರದಿಯಲ್ಲಿ 85 ರನ್‌ ಬಾರಿಸಿದ ಗಂಗೂಲಿ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೊದಲ ಎಸೆತದಲ್ಲೇ ಜಾಸನ್‌ ಕ್ರೇಝ ಅವರಿಗೆ ರಿಟರ್ನ್ ಕ್ಯಾಚ್‌ ನೀಡಿ ನಿರ್ಗಮಿಸಿದರು. ಇನ್ನೊಂದು ತುದಿಯಲ್ಲಿ ಸಚಿನ್‌ ಇದನ್ನು ನೋಡುತ್ತ ನಿಂತಿದ್ದರು.

ಇನ್ನೊಂದು ಕಾಕತಾಳೀಯವೆಂದರೆ, ಏಕದಿನದಲ್ಲೂ ಗಂಗೂಲಿ ಅವರ ಕೊನೆಯ ಜತೆಗಾರನಾಗಿ ತೆಂಡುಲ್ಕರ್‌ ಅವರೇ ಕಾಣಿಸಿಕೊಂಡದ್ದು! ಅದು ಪಾಕಿಸ್ಥಾನ ವಿರುದ್ಧದ 2007ರ ಗ್ವಾಲಿಯರ್‌ ಪಂದ್ಯವಾಗಿತ್ತು. ಆಗ ಸಚಿನ್‌-ಗಂಗೂಲಿ ಆರಂಭಿಕರಾಗಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next