Advertisement

ಮೊದಲ ವಾಯುಪಡೆ ಪರಂಪರಾ ಕೇಂದ್ರ ಉದ್ಘಾಟನೆ

09:26 PM May 08, 2023 | Team Udayavani |

ಭಾರತೀಯ ವಾಯುಪಡೆಯ ಅಸಾಮಾನ್ಯ ಸಾಹಸಗಳನ್ನು ನೆನಪಿಸುವಂತಹ, ರಕ್ಷಿಸುವಂತಹ ಒಂದು ಕೇಂದ್ರವಿದೆಯಾ ಎಂಬ ಪ್ರಶೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಉತ್ತರ ನೀಡಿದ್ದಾರೆ. ಚಂಡೀಗಢದಲ್ಲಿ ಭಾರತೀಯ ವಾಯುಸೇನಾ ಪರಂಪರಾ ಕೇಂದ್ರವನ್ನು ಅವರು ಉದ್ಘಾಟಿಸಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ಕೇಂದ್ರ ನಿರ್ಮಾಣವಾಗಿದೆ.

Advertisement

ಏನಿದೆ ಈ ಕೇಂದ್ರದಲ್ಲಿ?
ವಾಯುಸೇನೆಯ ಮಹಾನ್‌ ಯೋಧರ ಬೃಹತ್‌ ಭಿತ್ತಿಚಿತ್ರಗಳು, ಸ್ಮರಣಿಕೆಗಳು, 1965, 1971, 1999ರ ಕಾರ್ಗಿಲ್‌ ಯುದ್ಧಗಳು ಸೇರಿದಂತೆ ವಿವಿಧ ಯುದ್ಧಗಳಲ್ಲಿ ವಾಯುಸೇನೆಯ ಪಾತ್ರದ ನೆನಪುಗಳು ಇಲ್ಲಿರುತ್ತವೆ. ಹಲವಾರು ವಿಭಾಗಗಳು ಈ ಕಟ್ಟಡದಲ್ಲಿವೆ. ಇಲ್ಲಿ ಹಲವಾರು ಆಕರ್ಷಣೆಗಳಿವೆ. ಯುದ್ಧವಿಮಾನಗಳ ಮಾದರಿಗಳು, ವೈಮಾನಿಕ ಎಂಜಿನ್‌ಗಳು, ಶಸ್ತ್ರಾಸ್ತ್ರಗಳು, ಗ್ರ್ಯಾಝೆವ್‌ ಶಿಪುನೊವ್‌ನಂತಹ ಅವಳಿ ಬ್ಯಾರೆಲ್‌ಗ‌ಳಿರುವ ಗನ್‌ಗಳು ಇಲ್ಲಿವೆ.

ಪ್ರದರ್ಶನಕ್ಕೂ ವಿಶೇಷ ವ್ಯವಸ್ಥೆ
ಸ್ಮರಣಿಕೆಗಳನ್ನು ನೇರವಾಗಿಯೂ, ಹೋಲೋಗ್ರಾಮ್‌ಗಳು ಕಂಪ್ಯೂಟರೀಕೃತ ಫ‌ಲಕಗಳು, ವಿದ್ಯುನ್ಮಾನ ಸಾಧನಗಳ ಮೂಲಕವೂ ತೋರಿಸಲಾಗುವುದು. ನಮಗೆ ಬೇಕಿರುವ ಮಾಹಿತಿ ಪಡೆಯಲು ಕಿಯೋಸ್ಕ್ಗಳನ್ನೂ ಬಳಸಬಹುದು. ಸಿಮ್ಯುಲೇಟರ್‌ಗಳನ್ನೂ ಇಲ್ಲಿಡಲಾಗಿದೆ. ಅಂದರೆ ನೆಲದಲ್ಲಿದ್ದರೂ ಸಿಮ್ಯುಲೇಟರ್‌ನಲ್ಲಿ ಕುಳಿತರೆ ಹಾರುತ್ತಿರುವಂತಹ ಅನುಭವವಾಗುತ್ತದೆ.

ವಿಸ್ತಾರ ಎಷ್ಟು?
ಪರಂಪರಾ ಕೇಂದ್ರ 17000 ಚದರಡಿ ಪ್ರದೇಶದಲ್ಲಿ ಹರಡಿಕೊಂಡಿದೆ. ಅರ್ಧ ಎಕರೆಗೆ ಸ್ವಲ್ಪ ಕಡಿಮೆ ವಿಸ್ತಾರವಿದೆ. ವಾಯುಪಡೆಯ ಸ್ಫೂರ್ತಿಯುತ ಕಾರ್ಯಗಳನ್ನು ಇದು ಪ್ರತಿಬಿಂಬಿಸುವಂತೆ ರೂಪಿಸಲಾಗಿದೆ.

ಯುವಕರಿಗೆ ಸ್ಫೂರ್ತಿ
ಈ ಕೇಂದ್ರ ಇಡೀ ದೇಶದ ಜನರಿಗೆ ಒಂದು ಸ್ಫೂರ್ತಿ ಕೇಂದ್ರವಾಗಿರಲಿದೆ. ಭೇಟಿ ನೀಡಲು ಬಯಸುವಂತೆ ಸಿದ್ಧಪಡಿಸಲಾಗಿದೆ. ಮಾತ್ರವಲ್ಲ ಯುವಕರು ಸೇನೆ ಸೇರುವಂತಹ ಪ್ರೇರಣೆಯನ್ನು ಇದು ನೀಡುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next