Advertisement

ರೌಡಿಶೀಟರ್‌ಗಳ ಮೇಲೆ ಫೈರಿಂಗ್‌

11:22 AM Oct 09, 2017 | Team Udayavani |

ಕಲಬುರಗಿ: ರೌಡಿಶೀಟರ್‌ಗಳನ್ನು ಬಂಧಿಸಲು ಹೋದ ಪೊಲೀಸ್‌ ಸಿಬ್ಬಂದಿ ಮೇಲೆ ಆರೋಪಿಗಳು ಪ್ರತಿದಾಳಿ ನಡೆಸಿದ ಹಿನ್ನೆಲೆಯಲ್ಲಿ ಮಹಿಳಾ ಪಿಎಸ್‌ಐ ಗುಂಡಿನ ದಾಳಿ ನಡೆಸಿ, ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಪಿಎಸ್‌ಐ
ಅಕ್ಕಮಹಾದೇವಿ ಹಾಗೂ ಪೇದೆ ಪ್ರಲ್ಹಾದ ಕುಲಕರ್ಣಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಅ.2ರ ಗಾಂಧಿ ಜಯಂತಿಯಂದು ರೌಡಿಶೀಟರ್‌ಗಳಾದ ಚೇತನ, ಶಿವಕುಮಾರ ಹಾಗೂ ಇತರರು ವಿನಾಯಕ, ಪ್ರವೀಣ ಎಂಬುವರಿಗೆ ನಗರದ ಎಂಎಸ್‌ಕೆ ಮಿಲ್‌ ರಸ್ತೆಯ ಕಣ್ಣಿ ಮಾರ್ಕೆಟ್‌ ಬಳಿ ಹಣ ನೀಡುವಂತೆ ಪೀಡಿಸಿ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದರು. ಭಾನುವಾರ ಬೆಳಗ್ಗೆ ಕೂಡ ಅವರು ದರೋಡೆಗೆ ಹೊಂಚು ಹಾಕಿದ್ದರು.

ಇದನ್ನರಿತ ರಾಘವೇಂದ್ರ ಪೊಲೀಸ್‌ ಠಾಣೆಯ ಪಿಎಸ್‌ಐ ಅಕ್ಕಮಹಾದೇವಿ, ಸಿಬ್ಬಂದಿಯೊಂದಿಗೆ ಬಂಧಿಸಲು ತೆರಳಿದ್ದರು. ಆಗ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾದರು. ಅಲ್ಲದೇ ಜೀಪ್‌ ಮೇಲೆ ಕಲ್ಲೆಸೆದರು. ಈ ಸಂದರ್ಭದಲ್ಲಿ ಪಿಎಸ್‌ಐ ಗಾಳಿಯಲ್ಲಿ ಗುಂಡು ಹಾರಿಸಿದರು. ಇದಕ್ಕೂ ಬಗ್ಗದಿದ್ದಾಗ ರೌಡಿ ಶೀಟರ್‌ಗಳ ಕಾಲಿಗೆ ಗುಂಡು ಹಾರಿಸಲಾಯಿತು. ಈ ನಡುವೆ, ಅಶೋಕ ನಗರ ಠಾಣೆ ಇನ್ಸ್‌ಪೆಕ್ಟರ್‌ ಮಿನೇಜನಸ್‌ ಸ್ಥಳಕ್ಕೆ ಧಾವಿಸಿ ರೌಡಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ
ಪಿಎಸ್‌ಐ ಅಕ್ಕಮಹಾದೇವಿ ಹಾಗೂ ಪೇದೆ ಪ್ರಲ್ಹಾದ ಕುಲಕರ್ಣಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ದಿಗಾರರ ಜೊತೆ ಮಾತನಾಡಿದ ಈಶಾನ್ಯ ವಲಯ ಐಜಿಪಿ ಅಲೋಕಕುಮಾರ, ಜೀವದ ಹಂಗು ತೊರೆದು ರೌಡಿ ಶೀಟರ್‌ಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಪಿಎಸ್‌ಐ ಅಕ್ಕಮಹಾದೇವಿ ಹಾಗೂ ಸಿಬ್ಬಂದಿಗೆ
ಮುಖ್ಯಮಂತ್ರಿಗಳ ಸೇವಾ ಪದಕಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next