ಮೈಸೂರು: ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿ ಸಿಡಿಸದೆ ದೀಪಗಳೊಂದಿಗೆ ಆಚರಿಸುವ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಅಭಿಯಾನದ ವೇಳೆ ಶಾಸಕ ಎಂ.ಕೆ.ಸೋಮಶೇಖರ್ ಹಾಗೂ ಪಟಾಕಿ ಮಾರಾಟಗಾರರ ನಡುವೆ ಜಟಾಪಟಿ ನಡೆದ ಘಟನೆ ನಗರದ ಜೆ.ಕೆ.ಮೈದಾನದಲ್ಲಿ ನಡೆಯಿತು.
ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ತ್ಯಜಿಸಿ ದೀಪ ಬೆಳಗುವ ಮೂಲಕ ಆಚರಿಸುವಂತೆ ಜಾಗೃತಿ ಮೂಡಿಸುವ ಸಲುವಾಗಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಬುಧವಾರ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಾಥಾ ಮೂಲಕ ನಗರದ ಜೆ.ಕೆ.ಮೈದಾನಕ್ಕೆ ತೆರಳಿದ ಶಾಸಕ ಎಂ.ಕೆ.ಸೋಮಶೇಖರ್ ಹಾಗೂ ಬೆಂಬಲಿಗರು, ಪಟಾಕಿಗಳನ್ನು ನೀರು ತುಂಬಿದ ಬಕೆಟ್‌ಗೆ ಹಾಕುವ ಮೂಲಕ ಪಟಾಕಿ ಸಿಡಿಸದಂತೆ ಜನಜಾಗೃತಿ ಮೂಡಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಟಾಕಿ ಮಾರಾಟಗಾರರು ಶಾಸಕರ ನೇತೃತ್ವದಲ್ಲಿ ನಡೆದ ಜಾಗೃತಿ ಜಾಥಾಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಪಟಾಕಿ ಮಾರಾಟ ಮಾಡಲು ಅನುಮತಿ ನೀಡಿ ಇದೀಗ ಪಟಾಕಿ ಮಾರಾಟ ಮಾಡಬೇಡಿ, ಪಟಾಕಿ ಹೊಡೆಯಬೇಡಿ ಎಂದು ಹೇಳಿದರೆ ಹೇಗೆ? ಎಂದು ಪಟಾಕಿ ಮಾರಾಟಗಾರರು ಪ್ರಶ್ನಿಸಿದರು. ಇದರಿಂದಾಗಿ ಶಾಸಕರು, ಅವರ ಬೆಂಬಲಿಗರು ಹಾಗೂ ಪಟಾಕಿ ಮಾರಾಟಗಾರರ ನಡುವೆ ಮಾತಿನ ಚಕಮಕಿ ಉಂಟಾಯಿತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಪಟಾಕಿ ತಯಾರಿಕೆಯಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸ ಮಾಡಲಿದ್ದು, ಪಟಾಕಿ ನಿಷೇಧ ಮಾಡಿದರೆ ಅವರು ಬೀದಿ ಪಾಲಾಗುತ್ತಾರೆ. ಅದೇ ರೀತಿ ನಾವು ಸಾಲ ಮಾಡಿ ಬಂಡವಾಳ ಹೂಡಿ, ಪಟಾಕಿ ತಂದು ಮಾರಾಟ ಮಾಡುತ್ತಿದ್ದೇವೆ. ಅಲ್ಲದೆ ನಮಗೂ ಜನರ ಬಗ್ಗೆ ಕಾಳಜಿ ಇದ್ದು, ಹೀಗಾಗಿ ಪರಿಸರಕ್ಕೆ ಹಾನಿಯಾಗದ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದೇವೆಂದರು.
ಈ ನಡುವೆ ಜಿಲ್ಲಾಡಳಿತದಿಂದ ಕಾನೂನು ಬದ್ಧ ಅನುಮತಿ ನೀಡಿದ್ದು ಈ ವೇಳೆ ಪಟಾಕಿ ತ್ಯಜಿಸುವ ಬಗ್ಗೆ ಪ್ರಚಾರ ಮಾಡುವುದು ಸರಿಯಲ್ಲ. ಪಟಾಕಿ ಅರಿವು ಮೂಡಿಸಲು ನಮ್ಮ ವಿರೋಧವಿಲ್ಲ, ಆದರೆ ಪಟಾಕಿ ಮಾರಾಟ ಮಾಡಬೇಡಿ, ಪಟಾಕಿ ಸಿಡಿಸಬೇಡಿ ಎಂಬುದು ಖಂಡನೀಯ ಎಂದು ಮೈಸೂರು ನಗರ ಪಟಾಕಿ ವರ್ತಕರ ಸಂಘದ ಉಪಾಧ್ಯಕ್ಷ ಶರತ್ ಅಸಮಾಧಾನ ವ್ಯಕ್ತಪಡಿಸಿದರು.
ಈ ನಡುವೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಅಭಿಯಾನದಲ್ಲಿ ಬಾಗಿಯಾಗಿದ್ದ ಶಾಸಕ ಎಂ.ಕೆ.ಸೋಮಶೇಖರ್ ಬೆಂಬಲಿಗರು ಹಾಗೂ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪಟಾಕಿ ಮಾರಾಟಗಾರರನ್ನು ಸಮಾಧಾನಪಡಿಸಿ, ಶಾಸಕರ ಆಪ್ತ ಗುಣಶೇಖರ್‌ರನ್ನು ವಶಕ್ಕೆ ಪಡೆಯುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.