ಭಾರತೀನಗರ: ನಿರಂತರವಾಗಿ ಜನಜಾಗೃತಿ ಮೂಡಿಸುವ ಜಾಹೀರಾತು ಹಾಗೂ ಮಳೆ ಅಬ್ಬರದಿಂದ ಬೆಳಕಿನ ಹಬ್ಬದ ದೀಪಾವಳಿಯಲ್ಲಿ ಪಟಾಕಿ ಸಿಡಿಸುವ ಸಂಭ್ರಮ ಗಣನೀಯವಾಗಿ ಕುಸಿದಿದೆ.
ಜನ ಪಟಾಕಿ ಕೊಂಡುಕೊಳ್ಳದ ಕಾರಣ ಪಟಾಕಿಗಳ ಸದ್ದು, ಗದ್ದಲ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ದೀಪಾವಳಿ ಶಬ್ದಮಾಲಿನ್ಯ ಮುಕ್ತವಾಗಬೇಕೆಂಬ ಅರಿವು ಎಲ್ಲೆಡೆ ಹೆಚ್ಚಾಗುತ್ತಿರುವುದರಿಂದ ಪಟಾಕಿಗಳ ಸಡಗರ ಕಡಿಮೆಯಾಗುತ್ತಿದೆ. ಪರಿಸರಕ್ಕೆ ಮಾರಕವಾದ ಹಾಗೂ ಪ್ರಾಣಿ-ಪಕ್ಷಿಗಳಿಗೆ ಕಿರಿಕಿರಿಯಾಗುವ ಮತ್ತು ಮಾನವರು ಎಚ್ಚರ ತಪ್ಪಿದರೆ ದೃಷ್ಟಿಯನ್ನೇ ಕಳೆದುಕೊಳ್ಳಬೇಕಾದ ಭಯ ಪಟಾಕಿಯಿಂದ ಆವರಿಸಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ಎಲ್ಲೆಡೆ ಪರಿಸರ ಜಾಗೃತಿ ವೇದಿಕೆಗಳು ಹಾಗೂ ಪರಿಸರ ಪ್ರೇಮಿಗಳು ಜಾಗೃತಿ ಮೂಡಿಸುತ್ತಿರುವುದರಿಂದ ಪಟಾಕಿಗಳ ಶಬ್ಧ ಹಾಗೂ ಕಣ್ಣುಕೋರೈಸುವ ಬೆಂಕಿ ತೀವ್ರತೆ ಕಡಿಮೆ ಯಾಗುತ್ತಿರುವುದು ಸಮಾಧಾನಕರ ಸಂಗತಿ. ಅದರಂತೆ ಎಲ್ಲೆಡೆ ಈ ಬಾರಿ ಪಟಾಕಿಗಳ ಅಬ್ಬರವಿಲ್ಲದೆ, ಜನರು ಮನೆಗಳಲ್ಲೇ ಹಣತೆ ಹಚ್ಚುವ ಮೂಲಕ ಹಬ್ಬ ಆಚರಿಸುತ್ತಿದ್ದಾರೆ.
ವ್ಯಾಪಾರಿಗಳಿಗೆ ನಷ್ಟ: ಪಟಾಕಿ ಮತ್ತು ಸಿಡಿಮದ್ದಿನ ದುಷ್ಪರಿಣಾಮಗಳ ಕುರಿತಂತೆ ಹಲವು ಪರಿಸರ ಸಂಘಸಂಸ್ಥೆಗಳು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯಲ್ಲಿ ಎಂದಿನ ರೀತಿ ಪಟಾಕಿಗಳು ವ್ಯಾಪಾರವಾಗದೆ ವ್ಯಾಪರಸ್ಥರು ಸಂಕಷ್ಟಕ್ಕೆಗುರಿಯಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ಈ ಹಿಂದಿನ ವರ್ಷಗಳಲ್ಲಿ ಪಟಾಕಿ ಬೆಲೆ ದುಬಾರಿ ಎಂದು ಚಿಂತಿಸುತ್ತಿದ್ದ ಜನರು ಈ ದೀಪಾವಳಿಯಲ್ಲಿ ಅದರ ಗೊಡವೆ ನಮಗೇತಕ್ಕೆ ಎನ್ನುತ್ತಿದ್ದಾರೆ.
ಆದರೂ, ಕೆಲವರು ಮಕ್ಕಳನ್ನು ಸಂತೋಷಪಡಿಸಲು ಅಪಾಯಕಾರಿಯಲ್ಲದ ಸಣ್ಣಪುಟ್ಟ ಪಟಾಕಿ ಖರೀದಿ ಕಂಡುಬಂದಿದೆ. ಪ್ರಸಕ್ತ ವರ್ಷ ಲಕ್ಷಾಂತರ ಮಂದಿಗೆ ಪಟಾಕಿ ವ್ಯಾಪಾರ ಕತ್ತಲೆ ಕೂಪವಾಗಿದೆ. ತಮಿಳುನಾಡಿನಿಂದ ಪಟಾಕಿ ತಂದು ವ್ಯಾಪಾರ ಮಾಡುತ್ತಿರುವ ಮಾಲಿಕರು ಪಟಾಕಿಗಳನ್ನು ಹೆಚ್ಚಾಗಿ ಕೊಂಡುಕೊಳ್ಳದ ಕಾರಣ ನಷ್ಟ ಅನುಭವಿಸಬೇಕಾಗಿದೆ. ತಂದ ಬೆಲೆಗೆ ಮಾರುತ್ತಿರುವುದು ಎಲ್ಲೆಲ್ಲಿಯೂ ಕಂಡುಬಂದಿತು.
ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ.ವೆಂಕಟೇಶ್, ಕಳೆದ ವರ್ಷಕ್ಕೆ ಹೋಲಿಸಿದರೆ ಪಟಾಕಿಯಿಂದ ಸಂಭವಿಸಿದ ಹಾನಿ ಪ್ರಮಾಣ ಈ ಬಾರೀ ಕಡಿಮೆಗೊಂಡಿದೆ ಎನ್ನುತ್ತಾರೆ. ಇನ್ನು ಪ್ರತಿ ವರ್ಷವೂ ತಮಿಳುನಾಡಿನಿಂದ ಪಟಾಕಿಗಳನ್ನು ತಂದು ವ್ಯಾಪಾರ ಮಾಡುತ್ತಿದ್ದೆ. ಕಳೆದ ವರ್ಷಕ್ಕಿಂತ ಶೇ 50 ರಷ್ಟು ವ್ಯಾಪಾರ ಕುಸಿತ ಕಂಡಿದೆ ಎನ್ನುತ್ತಾರೆ ಚಿಕ್ಕರಸಿನಕೆರೆ ಗ್ರಾಮದ ಪಟಾಕಿ ವ್ಯಾಪಾರಿ ಧನ್‌ಪಾಲ್‌ಶೆಟ್ಟಿ.
ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ ಪಟಾಕಿಯಿಂದ ಅನೇಕರು ಸುಟ್ಟಗಾಯಗಳಿಂದ ಮತ್ತು ಕಣ್ಣಿನ ದೃಷ್ಟಿ ಕಳೆದುಕೊಂಡು ಆಸ್ಪತ್ರೆಗೆ ಬರುತ್ತಿದ್ದವರ ಸಂಖ್ಯೆ ಇತ್ತೀಚೆಗೆಇಳಿಮುಖವಾಗಿದೆ. ಇದಕ್ಕೆ ಪ್ರಮುಖ ಕಾರಣ ಪರಿಸರ ವೇದಿಕೆಗಳ ಜಾಗೃತಿ ಅಭಿಯಾನ. ಒಟ್ಟಾರೆ,ಪಟಾಕಿಗಳಿಂದ ಉಂಟಾಗುವ ಶಬ್ಧ ಹಾಗೂ ಹೊಗೆಯಿಂದಾಗಿ ನೆಮ್ಮದಿ ಕಳೆದುಕೊಂಡಿದ್ದ ಪ್ರಾಣಿ ಪಕ್ಷಿಗಳು ಪರಿಸರ ಪ್ರೇಮಿಗಳಿಗೆ ಕೃತಜ್ಞತೆ ಹೇಳುವಂತಾಗಿದೆ.
-ಅಣ್ಣೂರು ಸತೀಶ್