Advertisement
1973ರ ಮಾತಿದು. ನನಗೆ ಆಗ 18 ವರ್ಷ. ಬಿಸಿರಕ್ತ, ಇಟ್ಟಿಗೆಯನ್ನು ಮುಷ್ಟಿಯಲ್ಲಿ ಕುಟ್ಟಿ ಒಡೆಯುವ ಅದಮ್ಯ ಉತ್ಸಾಹ. ಓದಿಗೆ ತಿಲಾಂಜಲಿ ಹಾಡಿ, ಅನಿವಾರ್ಯಕ್ಕೆ ಕಟ್ಟುಬಿದ್ದು ಅಪ್ಪನೊಂದಿಗೆ ಹೋಟೆಲ್ ವ್ಯವಹಾರದಲ್ಲಿ ಕೈ ಜೋಡಿಸಿದ್ದೆ. ಆಗೆಲ್ಲ ಪ್ರತಿ ವರ್ಷ ದೀಪಾವಳಿ ಸಮಯದಲ್ಲಿ ಹೋಟೆಲ್ ಪಕ್ಕದಲ್ಲಿ ಸುಮಾರು 30 ಅಡಿ ಎತ್ತರದ ದೊಡ್ಡ ಕಂಬಗಳನ್ನು ಹುಗಿದು, ಅವುಗಳಿಗೆ ನಾವೇ ತಯಾರಿಸಿದ ಆಕಾಶ ಬುಟ್ಟಿ ಕಟ್ಟುತ್ತಿದ್ದೆವು. ಅವುಗಳನ್ನು ನೋಡಲೆಂದೇ ಇಡೀ ಊರಿನ ಜನರು ಬರುತ್ತಿದ್ದರು. ಪಾಡ್ಯದಂದು ಪೂಜೆ, ಪ್ರಸಾದ, ಪಟಾಕಿ ಎಲ್ಲವೂ ವೈಶಿಷ್ಟಪೂರ್ಣವಾಗಿರುತ್ತಿದ್ದವು.
Related Articles
Advertisement
ಅರೆಕ್ಷಣ, ಬಾಣ ಬಿರುಸು ಢಮಾರ್ ಎಂದು ಕೈಯಲ್ಲೇ ಸಿಡಿದಿತ್ತು! ಕಣ್ಣಿಗೆ ಕತ್ತಲೆ ಕವಿಯಿತು. ಬಲಹಸ್ತ ಭಗಭಗ ಉರಿದು, ಎಲ್ಲರೂ ಸುತ್ತ ನೆರೆದರು. ಅರ್ಧಂಬರ್ಧ ತಿಳಿದವನೊಬ್ಬ ಪಕ್ಕದ ಪುಸ್ತಕದ ಅಂಗಡಿಯಿಂದ ಇಂಕ್ ಬಾಟಲಿ ತಂದು ಹಸ್ತದ ತುಂಬಾ ಸುರಿದ. ಪಟಾಕಿ ಸಿಡಿದು ಗಾಯವಾದಾಗ ಯಾವುದೇ ಕಾರಣಕ್ಕೂ ಇಂಕ್ ಹಾಕಬಾರದಂತೆ. ಅದು ಅವನಿಗೆ ಗೊತ್ತಿರಲಿಲ್ಲ. ಗಾಯ ಆಯ್ತು ಎಂದು ತಿಳಿದಾಕ್ಷಣ ಅವನ ಅರಿವಿಗೆ ಬಂದಂತೆ ಇಂಕ್ ಸುರಿದಿದ್ದ. ತಕ್ಷಣವೇ ಹಸ್ತದ ತುಂಬಾ ನೀರುಗುಳ್ಳೆಗಳೆದ್ದವು. ನೋವು ತಡೆಯಲಾರದೇ ಮನೆಯ ಕಡೆಗೆ ಓಡಿದೆ. ಟೇಬಲ್‌ಫ್ಯಾನ್ ಹಾಕಿ ಅದರೆದುರು ಕೈ ಹಿಡಿದು ಕುಳಿತೆ. ಬಳಲಿಕೆ, ತಲೆ ತಿರುಗುವಿಕೆ, ಕಣ್ಣಲ್ಲಿ ನೀರು. ನನ್ನಲ್ಲಿನ ಹೀರೋ ಜೀರೋ ಆಗಿದ್ದ.
ವಿಷಯ ತಿಳಿದು ಮನೆಯವರೆಲ್ಲ ಓಡಿ ಬಂದರು. ಬರ್ನಾಲ್ ಸೇವೆ, ಮರುದಿನ ಡಾಕ್ಟರ್‌ರ ಭೇಟಿ. ಒಂದೆರಡು ದಿನಗಳಲ್ಲಿ ಬಲಗೈಗೆ ಪ್ಲಾಸ್ಟಿಕ್ ಕವರ್‌ನ ಹೊದಿಕೆ ಹಾಕಿಕೊಂಡು ಹೋಟೆಲಿಗೆ ಬಂದೆ. ಎಡಗೈಯಲ್ಲಿಯೇ ಹಣ ತೆಗೆದುಕೊಳ್ಳುವುದು, ಊಟ, ತಿಂಡಿ ಎಲ್ಲವೂ! ಐದಾರು ದಿನಗಳಲ್ಲಿ ಗುಳ್ಳೆಗಳು ಒಡೆದು. 15 ದಿನಗಳಲ್ಲಿ ಮೊದಲಿನಂತಾದೆ.
ಪ್ರತಿ ವರ್ಷದ ದೀಪಾವಳಿಯಂದು, ಪಟಾಕಿ “ಬಾ ನನ್ನ ಪ್ರೀತಿಸು’ ಎನ್ನುತ್ತದೆ. ಆದರೆ ನನ್ನ ಬಲಹಸ್ತ- “ದೂರ ದೂರ ಅಲ್ಲೇ ನಿಲ್ಲು, ನನ್ನಾ ದೇವರೇ..’ಎಂದು ಹಾಡುತ್ತದೆ.
ಕೆ. ಶ್ರೀನಿವಾಸರಾವ್, ಹರಪನಹಳ್ಳಿ