ಬೆಂಗಳೂರು: ದೀಪಗಳ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಮುಖ್ಯಮಂತ್ರಿಯವರ ಹೆಸರಿನಲ್ಲಿ ಪಟಾಕಿ ಕುರಿತ ಜಾಗೃತಿ ಮೊಬೈಲ್ ಸಂದೇಶ ಕಳುಹಿಸುವ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ಈ ಸಂದೇಶವು ಬೆಂಗಳೂರಿನ 1.5 ಲಕ್ಷ ಮಂದಿ ಹಾಗೂ ಗುಲ್ಬರ್ಗಾ, ಹುಬ್ಬಳ್ಳಿ ಧಾರವಾಡ, ಮಂಗಳೂರು, ಶಿವಮೊಗ್ಗ, ದಾವಣಗೆರೆ, ತುಮ ಕೂರು, ಮೈಸೂರು ಮಹಾನಗರಗಳ ತಲಾ 50 ಸಾವಿರ ಜನರಿಗೆ ತಲುಪಲಿದೆ. ಮೊಬೈಲ್ ಸಂದೇಶವು ಶನಿವಾರ ಮಧ್ಯಾಹ್ನದಿಂದ ಆರಂಭವಾಗಲಿದ್ದು ಈ ಸಂದೇಶವು ನಿರ್ದಿಷ್ಟ ವ್ಯಕ್ತಿಗೆ ಸೀಮಿತವಲ್ಲ. ಸಂದೇಶ ಆರಂಭದಲ್ಲಿಯೇ ಮುಖ್ಯಮಂತ್ರಿಯವರು ಜನತೆಗೆ ದೀಪಾವಳಿ ಶುಭಾಷಯ ಕೋರಲಿದ್ದಾರೆ. ಜತೆಗೆ, ಸಣ್ಣ ಪ್ರಮಾಣದ ಪಟಾಕಿ ಬಳಕೆ, ಪಟಾಕಿ ಹೊಡೆಯುವ ಸಮಯ, ಪಟಾಕಿ ಹೊಡೆಯುವ ಸಮಯದಲ್ಲಿ ಮುಂಜಾಗ್ರತೆ ಹಾಗೂ ಆರೋಗ್ಯ ಕುರಿತು ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಲಿದ್ದಾರೆ.
ಇದರ ಜತೆಗೆ ಈ ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿಯು ಬೀದಿ ನಾಟಕ, ಜಾಹೀರಾತು ಮೂಲಕ ಜಾಗೃತಿಯ ಮೂಡಿಸುತ್ತಿದೆ. ಹಬ್ಬದ ಕೇಂದ್ರಬಿಂದುವಾಗಿರುವ ಸಡಗರ-ಸಂಭ್ರಮಕ್ಕೆ ಅಡ್ಡಿಯಾಗದಂತಹ ಪರಿಸರ ಪಟಾಕಿಯ ಕುರಿತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾಹಿತಿ ನೀಡಲಿದೆ.
ಪರಿಸರ ಪಟಾಕಿ ಪ್ರಯೋಜನ ಪತ್ತೆ?: ಇದೇ ಮೊದಲ ಬಾರಿ ಕೇಂದ್ರದಿಂದ ಪರಿಸರ ಮಾಲಿನ್ಯವನ್ನು ಶೇ.30 ಕುಗ್ಗಿಸುವ ಪರಿಸರ ಪಟಾಕಿಗಳು ಬಂದಿದ್ದು, ನಗರದ ಕೆಲ ಮಾರುಕಟ್ಟೆಗಳಲ್ಲಿ ಲಭ್ಯವಿವೆ. ಅವುಗಳ ಬಳಕೆಯಿಂದ ನಗರದಲ್ಲಿ ಈ ಬಾರಿ ಇನ್ನಷ್ಟು ಮಾಲಿನ್ಯ ಕುಗ್ಗಬಹುದು. ಈ ಕುರಿತು ಪರಿಸರ ಪಟಾಕಿಯ ಸಾಧಕ ಬಾಧಕಗಳನ್ನು ತಿಳಿಯುವ ಪ್ರಯತ್ನವನ್ನು ಮಾಡಲಾಗುತ್ತಿದೆ. ನಿಟ್ಟಿನಲ್ಲಿ ಇದರ ಜತೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಾಯು ಹಾಗೂ ಶಬ್ದ ಮಾಲಿನ್ಯ ದಾಖಲಿಸುವ ಕಾರ್ಯವನ್ನು ಮುಂದುವರಿಸಿದೆ. ಸುಪ್ರೀಂ ಕೋರ್ಟ್ ಆದೇಶ, ಸಂಘ-ಸಂಸ್ಥೆಗಳು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಜಾಗೃತಿ ಕಾರ್ಯಕ್ರಮಗಳಿಂದ 2017ರ ದೀಪಾಳಿಗೆ ಹೋಲಿಸಿದರೆ 2018ರ ದೀಪಾವಳಿ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಶೇ.32ರಷ್ಟು ಮಾಲಿನ್ಯ ಪ್ರಮಾಣ ಕಡಿಮೆಯಾಗಿತ್ತು.
ಹೆಚ್ಚು ಸ್ಥಳಗಳಲ್ಲಿ ತಪಾಸಣಾ ಯಂತ್ರ ಅಳವಡಿಕೆ: ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಳೆದ ಬಾರಿ 10 ಕಡೆ ವಾಯು ಮಾಲಿನ್ಯ ಹಾಗೂ 10 ಕಡೆ ಶಬ್ದ ಮಾಲಿನ್ಯ ತಪಾಸಣೆ ಮಾಡುವ ಪರಿವೇಷ್ಟಕಗಳನ್ನು ಅಳವಡಿಸಲಾಗಿತ್ತು. ಈ ಬಾರಿ ನಗರದ 20 ಕಡೆಗಳಲ್ಲಿ ವಾಯು ಮಾಲಿನ್ಯ ಪರಿವೇಷ್ಟಕಗಳು ಹಾಗೂ 10 ಕಡೆ ಶಬ್ದ ಮಾಲಿನ್ಯ ಪರಿವೇಷ್ಟಕಗಳ ಅಳವಡಿಸುವ ಮೂಲಕ ತಪಾಸಣೆ ನಡೆಸಲಾಗುತ್ತಿದೆ. ಇಲ್ಲಿ ದಾಖಲಾಗುವ ಮಾಲಿನ್ಯ ಪ್ರಮಾಣವನ್ನು ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಪ್ರಕಾರ ಅಳತೆ ಮಾಡಲಾಗುತ್ತದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳಿಂದ ಸಂಭವಿಸುವ ಅನಾಹುತಗಳಿಗೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಲಭ್ಯವಾಗಲಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಲು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ನೇತ್ರ ತಜ್ಞರು ತುರ್ತು ಕರೆ ಮೇರೆಗೆ ಕರ್ತವ್ಯಕ್ಕೆ ಹಾಜರಾಗಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದೆ. ಜತೆಗೆ ಎಲ್ಲಾ ಆಸ್ಪತ್ತೆಗಳಲ್ಲೂ ಕಣ್ಣಿಗೆ ಸಂಬಂಧಪಟ್ಟ ಔಷಧಗಳ ದಾಸ್ತಾನು ಇರಿಸುವಂತೆ ಇಲಾಖೆಯ ಅಂಧತ್ವ ನಿಯಂತ್ರಣಾ ವಿಭಾಗದ ಸಹ ನಿರ್ದೇಶಕರು ಸೂಚಿಸಿದ್ದಾರೆ.
-ಜಯಪ್ರಕಾಶ್ ಬಿರಾದಾರ್