Advertisement

ನಾಗರಹೊಳೆ ಉದ್ಯಾನದಲ್ಲಿ ಬೆಂಕಿ ನಿಯಂತ್ರಣಕ್ಕೆ ಫೈರ್‌ಲೈನ್ ನಿರ್ಮಾಣ

06:12 PM Jan 22, 2022 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಕಿರೇಖೆ (ಫೈರ್‌ಲೈನ್) ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು, ಹಸಿರಿರುವ ಕಡೆ ತಡವಾಗಿದ್ದರೂ ಬೆಂಕಿ ತಡೆಗೆ ಅರಣ್ಯ ಇಲಾಖೆ ಸಕಲ ತಯಾರಿ ನಡೆಸಿದೆ.

Advertisement

ಸಾಮಾನ್ಯವಾಗಿ ಪ್ರತಿವರ್ಷ ಡಿಸೆಂಬರ್ ಅಂತ್ಯದೊಳಗೆ ಫೈರ್‌ಲೈನ್ ಮುಗಿಯುತ್ತಿತ್ತು. ಈ ಬಾರಿ ಹೆಚ್ಚಿನ ಮಳೆಯಿಂದಾಗಿ ಹಸಿರಿರುವುದರಿಂದ ಜನವರಿ ಅಂತ್ಯದೊಳಗೆ ಬಹುತೇಕ ಮುಗಿಯಬಹುದೆಂದು ನಿರೀಕ್ಷಿಸಲಾಗಿದೆ. ಒಂದೆಡೆ ಶೂನ್ಯ ಬೆಂಕಿ ಅರಣ್ಯವಾಗಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು  ಫೈರ್‌ಲೈನ್ ನಿರ್ಮಾಣದಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಜ.23ರಿಂದ ನಡೆಯುವ ಹುಲಿ ಗಣತಿ ಕಾರ್ಯಕ್ಕೆ ಸನ್ನದ್ದರಾಗುತ್ತಿದ್ದಾರೆ.

2537 ಕಿ.ಮೀ. ಫೈರ್‌ಲೈನ್ ನಿರ್ವಹಣೆ:

ಉದ್ಯಾನದ ನಾಗರಹೊಳೆ, ಕಲ್ಲಳ್ಳ, ಅಂತರಸಂತೆ, ಮೇಟಿಕುಪ್ಪೆ, ಡಿ.ಬಿ.ಕುಪ್ಪೆ, ವೀರನಹೊಸಹಳ್ಳಿ, ಹುಣಸೂರು, ಮತ್ತಿಗೋಡು, ವಲಯಗಳು ಸೇರಿದಂತೆ ೮ ವಲಯಗಳಲ್ಲಿ 2537 ಕಿ.ಮೀ.ಯಷ್ಟು ಫೈರ್‌ಲೈನ್ ನಿರ್ಮಿಸಬೇಕಿದ್ದು, ಈಗಾಗಲೆ ಬೆಂಕಿರೇಖೆ ನಿರ್ಮಿಸುವ ಸಲುವಾಗಿ ಗಿಡಗುಂಟೆಗಳನ್ನು ತೆರವುಗೊಳಿಸಲಾಗಿದೆ. ಬಹುತೇಕ ಕಡೆಗಳಲ್ಲಿ ಲೈನ್ ನಿರ್ಮಿಸಲಾಗಿದೆ. ಈಗಾಗಲೆ ಬೆಂಕಿ ಬೀಳುವ ಪ್ರದೇಶಗಳ ಶೀಘ್ರ ಗುರುತಿಸುವಿಕೆಗಾಗಿ ಅನುಕೂಲ ಮಾಡಿಕೊಳ್ಳಲಾಗಿದೆ. ಅಲ್ಲದೆ ಅರಣ್ಯ ಪ್ರದೇಶದ ಡಿ-ಲೈನ್ ನಲ್ಲಿ ಮತ್ತು ಮುಖ್ಯರಸ್ತೆಗಳ ಎರಡೂಕಡೆಗಳಲ್ಲಿ ಪ್ರತಿನಿತ್ಯ ನೀರು ಸಿಂಪಡಣೆಗೆ ಮಾಡಲು ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.

Advertisement

400 ಮಂದಿ ಬೆಂಕಿತಡೆ ಸಿಬ್ಬಂದಿ:

ಪ್ರತಿವಲಯದಲ್ಲೂ ಅಗತ್ಯಕ್ಕೆ ತಕ್ಕಂತೆ ಬೆಂಕಿ ನಂದಿಸುವ ಕಾರ್ಯದಲ್ಲಿ ನುರಿತ ಸುಮಾರು 400 ಮಂದಿ ಕಾಡಂಚಿನ ಆದಿವಾಸಿಗಳನ್ನು ಪ್ರತಿ ವಲಯಕ್ಕೆ 40-65 ಮಂದಿಯಂತೆ ಫೆಬ್ರವರಿ ಒಂದರಿಂದಲೇ ನೇಮಿಸಿಕೊಳ್ಳಲಾಗುವುದು. ಇವರಿಗೆ ನಿತ್ಯ ಮದ್ಯಾಹ್ನ ಊಟ ಮತ್ತು ಕುಡಿಯುವನೀರಿನ ವ್ಯವಸ್ಥೆ, ಅಗತ್ಯ ಪರಿಕರಗಳ ಸೌಲಭ್ಯ ಕಲ್ಪಿಸಲಾಗುವುದು.

ಕೆರೆ-ಕಟ್ಟೆಗಳಲ್ಲಿ ಸಮೃದ್ದ ನೀರು;

ಈ ಬಾರಿ ಮಳೆಗಾಲ ಉತ್ತಮವಾಗಿದ್ದು, ಉದ್ಯಾನದೊಳಗಿನ ಕೆರೆ-ಕಟ್ಟೆಗಳಲ್ಲಿ ಸಮೃದ್ದಿ ನೀರಿದ್ದು, ಇನ್ನೂ ಹಸಿರು ನಳನಳಿಸುತ್ತಿದೆ. ಇದು ಬೆಂಕಿ ನಿಯಂತ್ರಣಕ್ಕೆ ಪೂರಕವಾಗಿದೆ. ಅಲ್ಲದೇ ಅರಣ್ಯದೊಳಗಿನ ಸೋಲಾರ್‌ಪಂಪ್‌ನಿಂದಾಗಿ ಕೆರೆ-ಕಟ್ಟೆಗಳಿಗೆ ನಿರಂತರವಾಗಿ ನೀರು ತುಂಬುತ್ತಿರುವುದು ಹಾಗೂ ಉದ್ಯಾನದೊಳಗೆ ಹರಿಯುವ ನಾಗರಹೊಳೆ, ಸಾರಥಿ, ಲಕ್ಷಣತೀರ್ಥ ನದಿಗಳಲ್ಲಿ ನೀರಿನ ಹರಿವಿರುವುದರ ಪರಿಣಾಮ ಅರಣ್ಯ ಬೆಂಕಿ ರಕ್ಷಣೆಗೆ ಹಾಗೂ ವನ್ಯಜೀವಿಗಳ ನೀರಿನ ದಾಹ ನೀಗಿಸಲು  ವರದಾನವಾಗಿದೆ.

31 ವಾಚ್ ಟವರ್, ಡ್ರೋಣ್-ಕ್ಯಾಮರ ಕಣ್ಗಾವಲು :

ಉದ್ಯಾನದ ಹಲವೆಡೆ ಇರುವ ದೊಡ್ಡದಾದ 31 ವಾಚ್ ಟವರ್ ಮೂಲಕ ಹಾಗೂ ಉದ್ಯಾನದಂಚಿನ ಪ್ರದೇಶದ ಅಲ್ಲಲ್ಲಿ ಮರದ ಮೇಲೆ ಅಟ್ಟಣೆ ನಿರ್ಮಿಸಲಾಗಿದೆ. ಹಗಲು-ರಾತ್ರಿವೇಳೆ ಛಾಯಾಚಿತ್ರ ತೆಗೆಯುವ 3 ಡ್ರೋಣ್ ಹಾಗೂ ಅರಣ್ಯದಂಚಿನ ಪ್ರದೇಶಗಳಲ್ಲಿ ಅಕ್ರಮವಾಗಿ ಒಳನುಸುಳುವವರ ಪತ್ತೆಗಾಗಿ ಅಲ್ಲಲ್ಲಿ ಕ್ಯಾಮರ ಅಳವಡಿಸಲಾಗಿದೆ. ಸಿಬ್ಬಂದಿಗಳು ದಿನವಿಡಿ ಕಣ್ಗಾವಲು ಇಡಲಿದ್ದಾರೆ.

ಜೀಪ್ ಮೌಂಟೆಡ್ ಟ್ಯಾಂಕರ್:

ಪ್ರತಿ ವಲಯಕ್ಕೆ ಒಂದರಂತೆ ಜೀಪ್ ಮೌಂಟೆಡ್ ಟ್ಯಾಂಕರ್ ಇದೆ. ಒಟ್ಟಾರೆ ಬೆಂಕಿ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆಯಾಗಿ  80 ಸ್ಪೈಯರ್, 15 ಪವರ್ ಮರಕಟ್ಟಿಂಗ್ ಯಂತ್ರ, 11 ಬ್ಲೋರ‍್ಸ್ಗಳು ಹಾಗೂ ೩ ಅಗ್ನಿಶಾಮಕ ದಳದ ವಾಹನ ಮತ್ತು ಕ್ಯೂ.ಆರ್.ಟಿ.ವಾಹನಗಳನ್ನು ಸನ್ನದ್ದವಾಗಿಡಲಾಗುವುದು. ಹುಣಸೂರು,ಡಿ.ಬಿ.ಕುಪ್ಪೆ ವಲಯಕ್ಕೆ ೨, ನಾಗರಹೊಳೆ,ವೀರನಹೊಸಹಳ್ಳಿ, ಆನೆಚೌಕೂರು, ಕಲ್ಲಹಳ್ಳ, ಮೇಟಿಕುಪ್ಪೆ, ಅಂತರಸಂತೆ ವಲಯಗಳಿಗೆ ಇಲಾಖಾ ವಾಹನಗಳ ಜೊತೆಗೆ ತಲಾ ಒಂದರಂತೆ 11 ಬಾಡಿಗೆ ವಾಹನಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ಡಿ.ಸಿ.ಎಫ್.ಮಹೇಶ್‌ಕುಮಾರ್ ತಿಳಿಸಿದ್ದಾರೆ.

ಫೆ.3-5ರವರೆಗೆ ಬೆಂಕಿತಡೆ ಕುರಿತ ತರಬೇತಿ;

ಬೆಂಕಿತಡೆ ಕುರಿತು ಅಗ್ನಿಶಾಮಕ ದಳದವತಿಯಿಂದ ಫೆ.೩ ದಮ್ಮನಕಟ್ಟೆ, ಫೆ.4.ವೀರನಹೊಸಹಳ್ಳಿ, ಫೆ.೫ಕ್ಕೆ ನಾಗರಹೊಳೆಯಲ್ಲಿ 8 ವಲಯಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡುವರು.

ನಾಗರಹೊಳೆ ಉದ್ಯಾನದಲ್ಲಿ ಕಾಡ್ಗಿಚ್ಚು ತಡೆಯಲು ಅಧಿಕಾರಿ-ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು,  ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಕಳೆದ ಬಾರಿ ಅಂತರಸಂತೆ ವಲಯದಲ್ಲಿ 20 ಹೆಕ್ಟರ್ ಪ್ರದೇಶದಲ್ಲಿ ಮಾತ್ರ ನೆಲಬೆಂಕಿಯಾಗಿತ್ತು. ಮಳೆಗಾಲ ಹೆಚ್ಚಿದ್ದರಿಂದ ಈಬಾರಿಫೈರ್‌ಲೈನ್ ನಿರ್ಮಾಣ ತಿಂಗಳ ಕಾಲ ತಡವಾಗಿದೆ. ಕಳೆದ ಬಾರಿಯಿಂದ ಹವಾಮಾನ ಕುರಿತ ಮಾಹಿತಿ ನೀಡುವ ಕಿಗ್ಸ್ ಕಾರ್‌ಸಾಕ್ ಅಪ್ಲಿಕೇಷನ್ ಮೂಲಕ ಬೆಂಕಿ ಬೀಳುವ ಪ್ರದೇಶದ ಮಾಹಿತಿಯನ್ನು, ಉಷ್ಟಾಂಶ, ಶೀತ,ಗಾಳಿಯ ವೇಗ-ಬೀಸುವ ದಿಕ್ಕನ್ನು ಅಧಿಕಾರಿಗಳಿಗೆ-ಸಿಬ್ಬಂದಿಗಳಿಗೆ ಎಸ್.ಎಂ.ಎಸ್.ಮೂಲಕ ಮಾಹಿತಿ ರವಾನೆಯಾಗುವ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ.

ಇದರಿಂದ ಉದ್ಯಾನದ ಅಧಿಕಾರಿಗಳು-ಸಿಬ್ಬಂದಿಗಳ ಮೊಬೈಲ್‌ಗೆ ತಕ್ಷಣವೇ ಮೆಸೇಜ್ ಬರಲಿದ್ದು, ತ್ವರಿತವಾಗಿ ಸ್ಥಳಕ್ಕೆ ತೆರಳಲು ನೆರವಾಗಲಿದೆ.   ಅಗತ್ಯಬಿದ್ದಲ್ಲಿ ಹೆಲಿಕಾಪ್ಟರ್ ಬಳಕೆಗೂ ಕ್ರಮವಹಿಸಲಾಗಿದ್ದು, ಬೆಂಕಿಯಿಂದ ಅರಣ್ಯ ಸಂರಕ್ಷಣೆಗೆ ಎಲ್ಲರ ಸಹಕಾರ ಅತ್ಯಗತ್ಯವಾಗಿದ್ದು, ಅರಣ್ಯದಂಚಿನ ಗ್ರಾಮಸ್ಥರು, ಕಾಡುಕುಡಿಗಳು ಹೆಚ್ಚಿನ ಮುತುವರ್ಜಿವಹಿಸಬೇಕು.-ಡಿ.ಮಹೇಶ್‌ಕುಮಾರ್, ನಾಗರಹೊಳೆ ಮುಖ್ಯಸ್ಥ

 

-ಸಂಪತ್ ಕುಮಾರ್ ಹುಣಸೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next