ಹುಬ್ಬಳ್ಳಿ: ಗಣೇಶನ ಹಬ್ಬ ಮುಗಿದಿದೆ. ಗಣೇಶ ಭಕ್ತರ ಸಂಭ್ರಮ ಸಡಗರಕ್ಕೆ ತೆರೆ ಬಿದ್ದಿದೆ. ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಯೂ ಮುಗಿದಿದೆ. ಈ ಬಾರಿಯ ಗಣೇಶೋತ್ಸವದ ಡಿಜೆ ಅಬ್ಬರದಲ್ಲಿ ಪಟಾಕಿ ಸದ್ದು ಅಡಗಿ ಹೋಗಿದೆ. ಡಿ.ಜೆ.ಸಂಗೀತಕ್ಕೆ ಕುಣಿಯುವಲ್ಲಿ ಆಸಕ್ತಿ ತೋರಿದ ಮಕ್ಕಳು-ಯುವಕರು ಪಟಾಕಿ ಸುಡಲು ನಿರಾಸಕ್ತಿ ತೋರಿದ್ದರಿಂದ ಮದ್ದು ವ್ಯಾಪಾರಿಗಳ ನಿರೀಕ್ಷೆ ಠುಸ್ಸಾಗಿದೆ!
ಹೂವು, ಹಣ್ಣು, ಅಲಂಕಾರಿಕ ಸಾಮಗ್ರಿ ವಹಿವಾಟು ವೃದ್ಧಿಸಿದೆ. ಗೃಹಬಳಕೆ ಸಾಮಗ್ರಿಗಳ ವ್ಯಾಪಾರ ಕೂಡ ಭರದಿಂದ ನಡೆದಿದೆ. ಆದರೆ ನೋವು ತಂದಿದ್ದು ಮಾತ್ರ ಪಟಾಕಿ ವ್ಯಾಪಾರಿಗಳಿಗೆ. ವರ್ಷದಿಂದ ವರ್ಷಕ್ಕೆ ಪಟಾಕಿ ವಹಿವಾಟು ಕಡಿಮೆಯಾಗುತ್ತಿದೆ. ಆದರೆ ಈ ಬಾರಿ ನೆಹರು ಮೈದಾನದಲ್ಲಿ ಹಾಕಲಾದ ಪಟಾಕಿ ಮಳಿಗೆಗಳು 5ನೇ ದಿನದ ನಂತರ ತೆರವುಗೊಂಡಿದ್ದು ಪಟಾಕಿ ವಹಿವಾಟು ಕ್ಷೀಣಿಸಿದ್ದಕ್ಕೆ ಸಾಕ್ಷಿಯಾಗಿದೆ. ಈ ಬಾರಿ ಗಣೇಶೋತ್ಸವದಲ್ಲಿ ಅಟಾಂ ಬಾಂಬ್, ಲಕ್ಷ್ಮಿ ಬಾಂಬ್, ಚೈನಾ ಸರದ ಪಟಾಕಿಗಳ ಅಬ್ಬರ, ಬಾಣ, ಬತ್ತಿಗಳ ಚಿತ್ತಾರ ಕಂಡಿದ್ದೇ ಕಡಿಮೆ. ಮೊದಲೇ ಬುಕ್ ಮಾಡಿಟ್ಟವರು ಮಾತ್ರ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಪ್ರತಿ ಬಾರಿ ನೆಹರು ಮೈದಾನದಲ್ಲಿ ಮದ್ದು ಮಾರಾಟ ಲೈಸೆನ್ಸ್ ಪಡೆದ ಮಾರಾಟಗಾರರು ಪಟಾಕಿ ಮಾರಾಟ ಮಾಡುತ್ತಾರೆ. ಹುಬ್ಬಳ್ಳಿಯಲ್ಲಿ 10 ಜನ, ಧಾರವಾಡದಲ್ಲಿ 7 ಲೈಸೆನ್ಸ್ ಪಡೆದ ವ್ಯಾಪಾರಿಗಳಿದ್ದಾರೆ. ಆದರೆ ಕಳೆದ ಬಾರಿಗೆ ಹೋಲಿಸಿದರೆ ಶೇ.50 ಮಾತ್ರ ವಹಿವಾಟು ನಡೆದಿದ್ದರಿಂದ ವ್ಯಾಪಾರಿಗಳು 5ನೇ ದಿನಕ್ಕೆ ಮಳಿಗೆ ಖಾಲಿ ಮಾಡಿದ್ದಾರೆ.
ಪ್ರತಿದಿನ ಮಹಾನಗರ ಪಾಲಿಕೆಗೆ ಒಂದು ಸ್ಟಾಲ್ಗೆ 1500ರೂ. ಬಾಡಿಗೆ ನೀಡಬೇಕಿತ್ತು. ಅಲ್ಲದೇ ಸಿಬ್ಬಂದಿ ಸಂಬಳ ಖರ್ಚು ಸೇರಿ 3500ರೂ.ಗಳಿಂದ 4000ರೂ.ವರೆಗೆ ಖರ್ಚು ಬರುತ್ತಿತ್ತು. ಆದರೆ ವ್ಯಾಪಾರ ನಿರೀಕ್ಷಿತ ಪ್ರಮಾಣದಲ್ಲಿ ನಡೆಯಲಿಲ್ಲ. ವ್ಯಾಪಾರ ಕಡಿಮೆಯಾಗಿದ್ದಕ್ಕೆ ಹಲವು ಕಾರಣಗಳಿವೆ. ಜನರಲ್ಲಿ ಪರಿಸರ ರಕ್ಷಣೆ ಕುರಿತು ಮೂಡುತ್ತಿರುವ ಜಾಗೃತಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಜಾಗೃತಿ ಕಾರ್ಯಕ್ರಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಳ್ಳುವ ಪರಿಸರ ರಕ್ಷಣೆ ಸಂದೇಶಗಳು, ವಿಡಿಯೋಗಳು, ಪರಿಸರ ರಕ್ಷಣೆ ದಿಸೆಯಲ್ಲಿ ಮಾಧ್ಯಮಗಳಲ್ಲಿ ನೀಡಿದ ಜಾಹಿರಾತುಗಳು, ಮಹಾನಗರ ಪಾಲಿಕೆ ಕಸ ಸಂಗ್ರಹಿಸುವ ವಾಹನಗಳ ಮೂಲಕ ನಡೆಸಿದ ಪ್ರಚಾರ, ಪರಿಸರ ಸಂಘ-ಸಂಸ್ಥೆಗಳ ಉಪನ್ಯಾಸಗಳ ಪರಿಣಾಮದಿಂದಾಗಿ ಪಟಾಕಿ ಬಗ್ಗೆ ಆಸಕ್ತಿ ಕಡಿಮೆಯಾಗಿರುವ ಸಾಧ್ಯತೆಯಿದೆ. ಪ್ರವಾಹದಿಂದಾಗಿ ಜನರು ಮದ್ದಿಗಾಗಿ ಹಣ ವ್ಯಯಿಸಲು ಹಿಂದೇಟು ಹಾಕಿರಲೂಬಹುದು.
ಅಲ್ಲದೇ ವಿಪರೀತ ಮಳೆ ಹಾಗೂ ಪರಿಸರದಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿದ್ದರಿಂದ ಪಟಾಕಿಗಳು ಸಿಡಿಯುವ ಪ್ರಮಾಣ ಕಡಿಮೆಯಾಗಿದೆ. ಪಟಾಕಿ ಖರೀದಿಸಿದ ಕೆಲವರು ಪಟಾಕಿ ಸಿಡಿಯದ್ದರಿಂದ ಮರಳಿ ತಂದು ಹಣ ಮರಳಿಸುವಂತೆ ಕಿರಿಕಿರಿ ಮಾಡಿದ್ದಾರೆ. ಪಟಾಕಿಗಳನ್ನು ಗಾಳಿಯಾಡದಂತೆ ಇಡಲಾಗುತ್ತದೆ. ತೇವಾಂಶದ ವಾತಾವರಣದಲ್ಲಿ ಮೈದಾನದಲ್ಲಿ ಸ್ಟಾಕ್ ಮಾಡಿ ಇಡುವುದರಿಂದ ಪಟಾಕಿಗಳು ಸಿಡಿಯುವ ಪ್ರಮಾಣ ಕಡಿಮೆಯಾಗಿದ್ದು ವ್ಯಾಪಾರಿಗಳಿಗೆ ವ್ಯಾಪಾರ ಕುಂಠಿತಗೊಳ್ಳಲು ಕಾರಣವಾಯಿತು. ಇದರಿಂದ ಮದ್ದು ವ್ಯಾಪಾರಿಗಳು 5 ದಿನಗಳಿಗೆ ಪ್ಯಾಕಪ್ ಮಾಡಿದ್ದಾರೆ. ತಮ್ಮ ಗೋಡೌನ್‌ಗಳಲ್ಲಿ ಕೆಲವರು ಮಾರಾಟ ಮಾಡಿದ್ದಾರೆ.
ಶಿವಕಾಶಿಯಿಂದ ತರಿಸಲಾಗಿದ್ದ ಮದ್ದುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗದೇ ಉಳಿದಿದ್ದು, ವ್ಯಾಪಾರಿಗಳು ದೀಪಾವಳಿಗಾಗಿ ಕಾಯುತ್ತಿದ್ದಾರೆ. ದೀಪಾವಳಿಗೆ ಉತ್ತಮ ವಹಿವಾಟು ನಡೆಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
•ವಿಶ್ವನಾಥ ಕೋಟಿ