ಬೀದರ: ಕೋವಿಡ್-19 ಸೋಂಕಿನ ಆತಂಕ ಹಿನ್ನೆಲೆ ರಾಜ್ಯ ಸರ್ಕಾರದ ಪಟಾಕಿ ನಿಷೇಧ ನಿರ್ಧಾರ ಪಟಾಕಿ ವ್ಯಾಪಾರಿಗಳಿಗೆ ಶಾಕ್ ನೀಡಿದೆ. ದೀಪಾವಳಿ ಹಬ್ಬಕ್ಕೆ ಕೆಲ ದಿನಗಳು ಬಾಕಿ ಇರುವಾಗ ಸರ್ಕಾರ ಪ್ರಕಟಿಸಿರುವ ನಿರ್ಣಯ ಈಗ ವ್ಯಾಪಾರಕ್ಕಾಗಿ ಬಂಡವಾಳ ಹಾಕಿರುವ ಮಾಲೀಕರನ್ನು ಕಂಗಾಲಾಗಿಸಿದೆ.
ದೆಹಲಿ, ಮಹಾರಾಷ್ಟ್ರ ಬೆನ್ನಲ್ಲೇ ಕರ್ನಾಟಕದಲ್ಲೂ ಪಟಾಕಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದ್ದು, ರಾಜ್ಯ ಸರ್ಕಾರದ ಅಧಿಕೃತ ಆದೇಶ ಹೊರಬೀಳುವುದು ಮಾತ್ರ ಬಾಕಿ ಇದೆ. ಹೋಂ ಐಸೋಲೇಷನ್‌ನಲ್ಲಿರುವ ಕೋವಿಡ್ ರೋಗಿಗಳಿಗೆ ಪಟಾಕಿ ಹೊಗೆಯಿಂದ ಹಾಗೂ ಅದು ಸೃಷ್ಟಿಸುವ ವಾಯು ಮಾಲಿನ್ಯದಿಂದ ಆರೋಗ್ಯದಲ್ಲಿ ತೀವ್ರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಸೋಂಕಿತರ ಆರೋಗ್ಯ ದೃಷ್ಟಿಯಿಂದ ತಜ್ಞರು ನೀಡಿದ ಸಲಹೆ ಹಿನ್ನೆಲೆಯಲ್ಲಿ ಸರ್ಕಾರ ಇಂಥದ್ದೊಂದು ನಿರ್ಧಾರ ಕೈಗೊಂಡಿದೆ.
ಸಂಕಷ್ಟದಲ್ಲಿ ಮಾಲೀಕರು: ಪಟಾಕಿ ಮಾರಾಟ ನಿಷೇಧದ ಸರ್ಕಾರದ ಚಿಂತನೆ ಸರಿ ಇರಬಹುದು. ಆದರೆ, ತನ್ನ ನಿರ್ಧಾರ ಘೋಷಿಸಲು ವಿಳಂಬ ಮಾಡಿರುವುದು ಇದೀಗ ಪಟಾಕಿ ಅಂಗಡಿ ವರ್ತಕರಿಗೆ ಆಘಾತ ತಂದಿದೆ. ದೀಪಾವಳಿ ಹಬ್ಬಕ್ಕೆ ಕೇವಲ ಒಂದು ವಾರ ಮಾತ್ರ ಉಳಿದಿದೆ. ವ್ಯಾಪಾರ- ವಹಿವಾಟಿಗಾಗಿ ವರ್ತಕರು ಈಗಾಗಲೇ ಲಕ್ಷಾಂತರ ರೂ.ಬಂಡವಾಳ ಹಾಕಿ ಬಗೆ ಬಗೆಯ ಪಟಾಕಿ ದಾಸ್ತಾನು ಮಾಡಿಕೊಂಡಿದ್ದಾರೆ. ಕೊನೆ ಕ್ಷಣದಲ್ಲಿ ಸಿಡಿಮದ್ದು ನಿಷೇಧಿಸಿರುವುದು
ಮಾಲೀಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬೀದರ ನಗರದಲ್ಲಿ 32 ಸೇರಿದಂತೆ ಜಿಲ್ಲೆಯಲ್ಲಿ ಪ್ರತಿ ವರ್ಷ 70ಕ್ಕೂ ಹೆಚ್ಚು ಪಟಾಕಿ ಅಂಗಡಿಗಳು ತಲೆ ಎತ್ತುತ್ತವೆ. ಪ್ರತಿ ವರ್ಷ ಬೀದರನಲ್ಲಿ 2 ಕೋಟಿ ರೂ. ಗಳಿಗೂ ಹೆಚ್ಚು ವಹಿವಾಟು ನಡೆಯುತ್ತದೆ. ಈ ಬಾರಿಯೂ ವರ್ತಕರು ಕೊರೊನಾ ಆತಂಕದ ಅನುಮಾನ ನಡುವೆ ಶೇ. 50 ಪಟಾಕಿ ಈಗಾಗಲೇ ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ನಗರಸಭೆ, ಅಗ್ನಿ ಶಾಮಕ ದಳಕ್ಕೆ ನಿಗದಿತ ಶುಲ್ಕ ಪಾವತಿಸಿ ಪರವಾನಗಿ ಪಡೆದಿದ್ದಾರೆ. ದೀಪಾವಳಿ ಜತೆಗೆ ಬರುವ ಕ್ರಿಸ್‌ಮಸ್, ಹೊಸ ವರ್ಷದಸಂಭ್ರಮಾಚರಣೆ ವೇಳೆ ವ್ಯಾಪಾರ ಮಾಡುವ ಆಶಯ ವರ್ತಕರದ್ದಾಗಿದೆ.
ಪರಿಸರ ಮಾಲಿನ್ಯಕ್ಕೆ ಧಕ್ಕೆ ಹಿನ್ನೆಲೆ ಸಿಡಿಮದ್ದುಗಳ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚುತ್ತಿರುವುದರಿಂದ ಪಟಾಕಿ ಮಾರಾಟ ಪ್ರಮಾಣ ಈಗಾಗಲೇ ಕುಸಿತ ಕಂಡಿದ್ದು, ನಂತರ ಕೋವಿಡ್‌ನಿಂದಾಗಿ ಮತ್ತಷ್ಟು ಪರಿಣಾಮ ಬೀರಿತ್ತು. ಇನ್ನೇನು ಅಂಗಡಿ ತೆರೆಯುವ ಸಿದ್ಧತೆಯಲ್ಲಿರುವ ಸಂದರ್ಭದಲ್ಲಿ ಈಗ ಪಟಾಕಿಯನ್ನೇ ನಿಷೇಧಿಸಲಾಗಿದೆ. ವ್ಯಾಪಾರಕ್ಕಾಗಿ ಸಾಲ ಮಾಡಿ, ಚಿನ್ನಾಭರಣ ಅಡವಿಟ್ಟು ಪಟಾಕಿ ಸ್ಟಾಕ್ ಮಾಡಿಕೊಂಡಿದ್ದವರಿಗೆ, ಈಗಾಗಲೇ ನಷ್ಟದಲ್ಲಿರುವ ವರ್ತಕರು ಬೀದಿಗೆ ಬರುವಂತಾಗಿದೆ.
ಪಟಾಕಿ ನಿಷೇಧ ಮಾಡುವುದರಿಂದ ಪಟಾಕಿ ಉದ್ಯಮವನ್ನೇ ನಂಬಿರುವ ಮತ್ತು ಲಕ್ಷಾಂತರ ರೂ. ಬಂಡವಾಳ ಹೂಡಿರುವ ಮಾರಾಟಗಾರಿಗೆ ದಿಕ್ಕು ತೋಚದಂತಾಗಿದೆ. ಸರ್ಕಾರದ ನಿರ್ಣಯ ವಿಳಂಬದಿಂದ ಆತಂಕ ಹೆಚ್ಚಿಸಿದೆ. ಸರ್ಕಾರ ಪಟಾಕಿ ನಿಷೇಧಿಸುವ ಬದಲು ಕೆಲ ಕಟ್ಟುನಿಟ್ಟಿನ ನಿಯಮ ರೂಪಿಸಿ ಅವುಗಳನ್ವಯ ಪಟಾಕಿ ಹೊಡೆಯಲು ಮತ್ತು ಮಾರಾಟ ಮಾಡಲು ಅವಕಾಶ ನೀಡಬೇಕು ಎನ್ನುತ್ತಾರೆ ವರ್ತಕರು.
ದೀಪಾವಳಿ ಹಬ್ಬಕ್ಕೆ ಒಂದು ವಾರ ಮಾತ್ರ ಬಾಕಿ ಇದೆ. ಕೊನೆ ಕ್ಷಣದಲ್ಲಿ ಪಟಾಕಿ ನಿಷೇಧಿಸುವ ಸರ್ಕಾರದ ನಿರ್ಧಾರದಿಂದ ವರ್ತಕರಿಗೆಆರ್ಥಿಕ ಸಂಕಷ್ಟ ಆಗಲಿದೆ. ಈಗಾಗಲೇ ಲಕ್ಷಾಂತರ ಬಂಡವಾಳ ಹೂಡಿ ಪಟಾಕಿ ದಾಸ್ತಾನು ಮಾಡಿಕೊಳ್ಳಲಾಗಿದೆ. ವ್ಯಾಪಾರ ಇಲ್ಲವಾದರೆ ಭಾರಿ ನಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ಸರ್ಕಾರ ಈ ವಿಷಯದಲ್ಲಿ ಪುನರ್ ಪರಿಶೀಲಿಸಬೇಕು.
-ಓಂಪ್ರಕಾಶ ಬಜಾರೆ, ಪಟಾಕಿ ವರ್ತಕ, ಬೀದರ
–ಶಶಿಕಾಂತ ಬಂಬುಳಗೆ