ಪುತ್ತೂರು: ನಗರದ ಬೊಳುವಾರಿನ ಉಪ್ಪಿನಂಗಡಿ ರಸ್ತೆಯಲ್ಲಿರುವ ಮನ್ಸೂರ್ ಅವರಿಗೆ ಸೇರಿದ ಗುಜರಿ ಅಂಗಡಿಯಲ್ಲಿ ರವಿವಾರ ಮಧ್ಯಾಹ್ನ ಬೆಂಕಿ ಆಕಸ್ಮಿಕ ಸಂಭವಿಸಿ ಸುಮಾರು 1ಲಕ್ಷ ರೂ. ಮೌಲ್ಯದ ಹಳೆಯ ಪ್ಲಾಸ್ಟಿಕ್ ಸಾಮಗ್ರಿಗಳು ಸುಟ್ಟು ಹೋಗಿವೆ.
ಪುತ್ತೂರು ಅಗ್ನಿಶಾಮಕ ದಳದ 2 ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿತು. ಅಂಗಡಿಯ ಮೇಲ್ಭಾಗದಿಂದ ವಿದ್ಯುತ್ ಎಲ್‌ಟಿ ಲೈನ್ ಹಾದು ಹೋಗಿದ್ದು, ಅದರ ಮೇಲೆ ತೆಂಗಿನ ಗರಿ ಬಿದ್ದುದು ಘಟನೆಗೆ ಕಾರಣವಾಗಿದೆ.
ಸ್ಥಳೀಯರು ಪುತ್ತೂರು ವಿದ್ಯುತ್ ಉಪಕೇಂದ್ರಕ್ಕೆ ಮಾಹಿತಿ ನೀಡಿದ್ದು, ಬಳಿಕ ಕೊಂಬೆಟ್ಟು ಮತ್ತು ಬೊಳುವಾರು ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಯಿತು.
ಅಂಗಡಿಯಲ್ಲಿ ದಾಸ್ತಾನಿದ್ದ ಹಳೆಯ ಪ್ಲಾಸ್ಟಿಕ್ ಸಾಮಗ್ರಿಯಲ್ಲಿ ಹೆಚ್ಚಿನ ಪ್ರಮಾಣದ ಸೊತ್ತುಗಳನ್ನು ಶನಿವಾರ ಬೇರೆ ಕಡೆಗೆ ಮಾರಾಟಕ್ಕಾಗಿ ಕೊಂಡೊ ಯ್ಯಲಾಗಿತ್ತು. ದಾಸ್ತಾನು ಕಡಿಮೆ ಇದ್ದ ಕಾರಣ ಬೆಂಕಿಯನ್ನು ಕೂಡಲೇ ನಿಯಂತ್ರಿಸಲು ಸಾಧ್ಯವಾಗಿದೆ.
ಪುತ್ತೂರು ನಗರ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಓಮನಾ ಮತ್ತು ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಸಹಕರಿಸಿದರು.