ಬೆಂಗಳೂರು: ಬಟ್ಟೆ ಗೋಡೌನ್‌ಗೆ ಬೆಂಕಿ ಬಿದ್ದು ಇಬ್ಬರು ಕಾರ್ಮಿಕರು ಸಜೀವ ದಹನವಾಗಿರುವ ಘಟನೆ ಚಂದ್ರಲೇಔಟ್ ಬಳಿಯ ಸುವರ್ಣ ಲೇಔಟ್‌ನಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಮೈಸೂರು ಮೂಲದ ಮಂಜು(30) ಮೃತಪಟ್ಟಿದ್ದು. ಮತ್ತೂಬ್ಬನ ಮೃತ ದೇಹ ಗುರುತು ಸಿಕಿಲ್ಲ. ಇದೇ ವೇಳೆ ಮತ್ತೂಬ್ಬ ಸ್ಥಳದಿಂದ ಓಡಿ ಹೋಗಿದ್ದಾನೆ.
ಅಲ್ಲದೇ ಗೋಡೌನ್ ಮಾಲೀಕ ನಾಸೀರ್ ಕೂಡ ನಾಪತ್ತೆಯಾಗಿದ್ದಾನೆ. ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುವರ್ಣ ಲೇಔಟ್‌ನಲ್ಲಿ ವೆಂಕಟಪ್ಪ ಎಂಬುವರ ಖಾಲಿ ನಿವೇಶನವಿದೆ. ಇದನ್ನು ನಾಸೀರ್ ಬಟ್ಟೆ ಗೋಡೌನ್ ಮಾಡಿಕೊಳ್ಳಲು ಬಾಡಿಗೆ ಪಡೆದುಕೊಂಡಿದ್ದ.
ಗಾರ್ಮೆಂಟ್ಸ್‌ಗಳಲ್ಲಿ ಉಪಯೋಗಕ್ಕೆ ಬಾರದ ಚಿಂದಿ ಬಟ್ಟೆಗಳನ್ನು ಗೋಡೌನ್‌ನಲ್ಲಿ ಶೇಖರಿಸಿಕೊಟ್ಟು, ಬಳಿಕ ಮರು ಬಳಕೆ ಮಾಡಲು ಬೇರೆಡೆ ಮಾರಾಟ ಮಾಡುವ ವ್ಯವಹಾರ ಮಾಡುತ್ತಿದ್ದ. ಇದೇ ಗೋಡೌನ್‌ನಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದು, ಇಲ್ಲಿಯೇ ತಂಗುತ್ತಿದ್ದರು.
ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಗೋಡೌನ್‌ಗೆ ಬೆಂಕಿ ಬಿದ್ದಿದ್ದೆ. ಆದರೆ, ಒಳಗಿರುವ ಇಬ್ಬರು ಕಾರ್ಮಿಕರು ಗಾಢನಿದ್ದೆಯಲ್ಲಿದ್ದರಿಂದ ಇದು ಗಮನಕ್ಕೆ ಬಂದಿಲ್ಲ. ಆದರೆ, ಬೆಂಕಿಯ ಜ್ವಾಲೆಗೆ ಇಬ್ಬರು ಅಲ್ಲಿಯೇ ಸಾವನ್ನಪ್ಪಿದ್ದಾರೆ.
ಗೋಡೌನ್‌ನ ಪಕ್ಕದಲ್ಲಿರುವ ಮನೆಗೆ ಬೆಂಕಿ ಕಿನ್ನಾಲಿಗೆ ವ್ಯಾಪಿಸಿದ್ದು, ಮನೆಯವರು ಹೊರಗಡೆ ಬಂದು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎರಡು ವಾಹನಗಳ ಜತೆ ಸ್ಥಳಕ್ಕೆ ಬಂದು ಸಿಬ್ಬಂದಿ ಬೆಳಗ್ಗೆ 4 ಗಂಟೆವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಟ್ಟೆಗಳ ನಡುವೆ ಉರಿದು ಹೋದ ಕಾರ್ಮಿಕರು: ಗೋಡೌನ್ ಪೂರ್ತಿ ಚಿಂದಿ ಬಟ್ಟೆಗಳು ತುಂಬಿದ್ದರಿಂದ ಅವುಗಳ ನಡುವೆ ಇಬ್ಬರು ಸಜೀವ ದಹನವಾಗಿದ್ದಾರೆ. ಹೀಗಾಗಿ ಆರಂಭದಲ್ಲಿ ಇಬ್ಬರ ಮೃತ ದೇಹ ಪತ್ತೆಯಾಗಲಿಲ್ಲ.
ಮಂಗಳವಾರ ಬೆಳಗ್ಗೆ ಸ್ಥಳೀಯ ನಿವಾಸಿ ಮಂಜುನಾಥ್ ಪೈಪ್ ಮೂಲಕ ನೀರು ಹಾಯಿಸುವಾಗ ಮೃತ ದೇಹಗಳು ಕಣ್ಣಿಗೆ ಬಿದ್ದಿವೆ. ಘಟನೆ ಸಂಬಂಧ ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಚಂದ್ರಲೇಔಟ್ ಠಾಣೆಯಲ್ಲಿ ದಾಖಲಾಗಿದೆ.