Advertisement

ಬಣ್ಣದ ಗೋದಾಮಿಗೆ ಬೆಂಕಿ

07:15 AM Feb 14, 2019 | Team Udayavani |

ನೆಲಮಂಗಲ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ (ಬಿಐಇಸಿ) ಹಿಂಭಾಗದಲ್ಲಿರುವ ಕುದುರಗೆರೆ ಗ್ರಾಮದಲ್ಲಿನ ಯುನೈಟೆಡ್‌ ಪೇಂಟ್ಸ್‌ ಗೋದಾಮಿನಲ್ಲಿ ಬುಧವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ದಟ್ಟ ಹೊಗೆ ಮುಗಿಲೆತ್ತರಕ್ಕೆ ವ್ಯಾಪಿಸಿದ್ದನ್ನು ಕಂಡು ಸುತ್ತಲ ನಾಗರಿಕರು ಕೆಲ ಕಾಲ ಆತಂಕಕ್ಕೆ ಒಳಗಾದರು.

Advertisement

ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಕೋಟ್ಯಂತರ ರೂ. ಮೌಲ್ಯದ ಕಚ್ಚಾ ತೈಲ ಮತ್ತು ಪೇಂಟ್‌ ಬಾಕ್ಸ್‌ಗಳು ಬೆಂಕಿಗಾಹುತಿಯಾಗಿವೆ. ಕುದುರಗೆರೆ ಗ್ರಾಮದ 3 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಯುನೈಟೆಡ್‌ ಪೇಂಟ್ಸ್‌ ಕಂಪನಿಯ ಗೋದಾಮು ಇದೆ. ಅಲ್ಲಿ ವಿವಿಧ ಬಗೆಯ ಪೇಂಟ್‌ (ಬಣ್ಣ) ತಯಾರಿಸಲು ಟಿಮ್ಮರ್‌ ಆಯಿಲ್‌ ಮತ್ತಿತರ ಕಚ್ಚಾ ಸಾಮಗ್ರಿಗಳಿದ್ದ ಬ್ಯಾರಲ್‌ ಶೇಖರಿಸಿಡಲಾಗಿತ್ತು. ಈ ಬ್ಯಾರಲ್‌ಗ‌ಳ ಬಳಿ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿ ಕೊಂಡಿದೆ. ಪರಿಣಾಮ, ಬ್ಯಾರಲ್‌ ಸಿಡಿದು ಬೆಂಕಿ ಕೆನ್ನಾಲಿಗೆ ಇಡೀ ಗೋದಾಮನ್ನು ಆವರಿಸಿಕೊಂಡು, ನೋಡ ನೋಡುತ್ತಲೇ ದಟ್ಟ ಹೊಗೆ ಬಾನೆತ್ತರದವರೆಗೂ ಆವರಿಸಿತು.

ಗೋದಾಮಿನಲ್ಲಿ ಹಲವು ವರ್ಷಗಳಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ಬ್ಯಾರಲ್‌ ಕಚ್ಚಾ ಸಾಮಗ್ರಿ ಹಾಗೂ ಪೇಂಟ್‌ ಬಾಕ್ಸ್‌ಗಳನ್ನು ಇರಿಸಿದ್ದು, ಅವುಗಳನ್ನು ಕಾಲಕಾಲಕ್ಕೆ ಬಳಸಿಲ್ಲ. ಹಾಗೇ ಗೋದಾಮಿನ ಸುತ್ತ ಸಾಕಷ್ಟು ಹುಲ್ಲು ಬೆಳೆದಿದ್ದು, ನೀಲಗಿರಿ ಮರಗಳ ಎಲೆಗಳು ಉದುರಿ ಒಣಗಿವೆ. ದಾರಿಹೋಕರು ಧೂಮಪಾನ ಮಾಡಿ ಬಿಸಾಡಿದ ಬೆಂಕಿ ಕಡ್ಡಿ ಅಥವಾ ಬೀಡಿ, ಸಿಗರೆಟ್‌ ಕಿಡಿಯಿಂದ ಎಲೆಗಳಿಗೆ ಬೆಂಕಿ ಹೊತ್ತಿಕೊಂಡು, ಗೋದಾಮಿಗೆ ವ್ಯಾಪಿಸಿರಬಹುದು ಎಂದು ಸಾರ್ವಜನಿಕರು ಶಂಕಿಸಿದ್ದಾರೆ.

ಪ್ರಾಣಾಪಾಯವಿಲ್ಲ: ಘಟನೆ ನಡೆದಾಗ ಕಾವಲುಗಾರರನ್ನು ಹೊರತುಪಡಿಸಿ ಬೇರಾರೂ ಗೋದಾಮಿನಲ್ಲಿ ಇರಲಿಲ್ಲ. ಇಬ್ಬರು ಕಾವಲುಗಾರರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಅತ್ತ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಮತ್ತು ಗೋದಾಮು ಕಾವಲುಗಾರರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.

20ಕ್ಕೂ ಹೆಚ್ಚು ವಾಹನಗಳ ಜತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, 15 ಲಕ್ಷ ಲೀಟರ್‌ಗೂ ಹೆಚ್ಚು ನೀರು ಮತ್ತು ರಾಸಾಯನಿಕ ದ್ರವಗಳನ್ನು ಬಳಸಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದರು. ಬೆಳಗ್ಗೆ 11 ಗಂಟೆಗೆ ಕಾಣಿಸಿಕೊಂಡ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸತತ 7 ಗಂಟೆಗಳ ಕಾಲ
ಶ್ರಮಿಸಿದ್ದು, ಸಂಜೆ 6 ಗಂಟೆಗೆ ಬೆಂಕಿ ನಿಯಂತ್ರಣಕ್ಕೆ ಬಂತು. ಘಟನೆ ಬಳಿಕ ಸ್ಥಳದಲ್ಲಿ ನೆರೆದಿದ್ದ ನೂರಾರು ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಜತೆಗೆ ಗೋದಾಮಿನ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಜನ, ವಾಹನ ಸಂಚರಿಸದಂತೆ ಎಚ್ಚರ ವಹಿಸಿ, ರಸ್ತೆ ಬಂದ್‌ ಮಾಡಿದ್ದರು. ಗೋದಾಮಿನ ಬಳಿ ಯಾರೂ ಸುಳಿಯದಂತೆ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಲಾಯಿತು.

Advertisement

ಸಂಚಾರ ಅಸ್ತವ್ಯಸ್ತ: ಅಗ್ನಿ ಅವಘಡದ ಸುದ್ದಿ ತಿಳಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಚಾಲಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ದರಿಂದ ಹಾಗೂ ಪೊಲೀಸರು ಸರ್ವಿಸ್‌ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದ ಕಾರಣ, ಕೆಲಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು.
 
ಯಾವುದೇ ಆತಂಕವಿಲ್ಲ, ಎಚ್ಚರಿಕೆ ಅಗತ್ಯ: ಎಸ್ಪಿ ಗೋದಾಮಿನಲ್ಲಿದ್ದ ಪೇಂಟ್‌ ತಯಾರಿಕೆಗೆ ಬಳಸುವ ಟಿಮ್ಮರ್‌ ಆಯಿಲ್‌ ಮತ್ತು ಪೇಂಟ್‌ ಬಾಕ್ಸ್‌ಗಳಿಗೆ ಬೆಂಕಿ ತಗುಲಿ ದುರ್ಘ‌ಟನೆ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ನಾಗರಿಕರ ರಕ್ಷಣೆಗಾಗಿ ಮತ್ತು ಕೆಮಿಕಲ್‌ ಡ್ರಮ್‌ಗಳು ಸ್ಫೋಟಗೊಳ್ಳದಂತೆ ರಾಸಾಯನಿಕ ದ್ರವಗಳೊಂದಿಗೆ 15 ಲಕ್ಷ ಲೀ. ನೀರು ಬಳಸಿ ಬೆಂಕಿ ನಿಯಂತ್ರಿಸಲಾಗಿದೆ.

ಟಿಮ್ಮರ್‌ ಆಯಿಲ್‌ ಮತ್ತಿತರ ಕಚ್ಚಾ ಸಾಮಗ್ರಿ ಖಾಲಿ ಆಗುವವರೆಗೂ ಬೆಂಕಿ ಇರಲಿದ್ದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಗೋದಾಮು ಸುತ್ತಲ ಬಡಾವಣೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದು, ಬಡಾವಣೆ ನಿವಾಸಿಗಳನ್ನು ದೂರ ಕಳುಹಿಸಲಾಗಿದೆ. ಸದ್ಯಕ್ಕೆ ಯಾವುದೇ ಆತಂಕವಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಕುಮಾರ್‌ ಮಾಹಿತಿ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next