Advertisement
ಗಾಯಾಳು ಯುವತಿ ವಿನಿತಾ (ಹೆಸರುಬದಲಿಸಲಾಗಿದೆ) ಈ ಕುರಿತು ಅಶೋಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು ” ಒತ್ತಾಯ ಪೂರ್ವಕವಾಗಿ ಬಾರ್‌ಸಿಬ್ಬಂದಿ “ಫೈರ್ ಶಾಟ್’ ನೀಡಿದರು’ಎಂದು ಆರೋಪಿಸಿದ್ದಾರೆ. ಯುವತಿಯ ದೂರು ಆಧರಿಸಿ ರೆಸಿಡೆನ್ಸಿ ರಸ್ತೆಯಲ್ಲಿರುವ ಬಾರ್‌ನ ಮದ್ಯ ಸರಬರಾಜು ಮಾಡುವ ಸಿಬ್ಬಂದಿ (ಬಾರ್‌ಟೆಂಡರ್) ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Related Articles
Advertisement
ಯುವತಿ ದೂರು ಆಧರಿಸಿ ಬಾರ್‌ನ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದು ಆಕೆಯ ಆರೋಪವನ್ನು ಸಿಬ್ಬಂದಿ ನಿರಾಕರಿಸಿದ್ದಾರೆ. ಆಕೆಯ ಖುದ್ದಾಗಿ ಫೈರ್‌ಶಾಟ್ ಆರ್ಡರ್ ಮಾಡಿದ್ದು. ಮದ್ಯದ ಗ್ಲಾಸ್ ಸರಿಯಾದ ರೀತಿ ಹಿಡಿದುಕೊಳ್ಳದೆ ಪ್ರಯತ್ನಿಸಿದ್ದರಿಂದ ಅವಘಡ ಸಂಭವಿಸಿದೆ ಎಂದು ಹೇಳುತ್ತಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಫೈರ್‌ಶಾಟ್ ಎಂದರೇನು?: ಕಾಕ್‌ಟೇಲ್ ಸೇರಿದಂತೆ ಇನ್ನಿತರೆ ಮದ್ಯಗಳಿಗೆ ಗ್ಲಾಸ್‌ಗಳಲ್ಲಿ ಹಾಕಿ ಬೆಂಕಿ ಹಚ್ಚಿ ಅದರಿಂದ ಬರುವ ಹೊಗೆಯ ಸುವಾಸನೆ (ಅಮಲು) ಆಸ್ವಾದಿಸುವುದು. ಬೆಂಕಿ ಆರಿದ ಬಳಿಕ ಗ್ಲಾಸ್‌ನಲ್ಲಿರುವ ಮದ್ಯ ಸೇವಿಸುವುದನ್ನು “ಫೈರ್ ಶಾಟ್’ ಎನ್ನುತ್ತಾರೆ. ಬಹುತೇಕ ಪಬ್ ಬಾರ್ ಅಂಡ್ ರೆಸ್ಟೋರೆಂಟ್, ಪಾರ್ಟಿಗಳಲ್ಲಿ ಫೈರ್‌ಶಾಟ್ ಎಂಬುದು ಸಾಮಾನ್ಯ. “ಫೈರ್‌ಶಾಟ್’ ನಡೆಸಲು ಬಾರ್‌ನವರು ಅಬಕಾರಿ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯ.
ಎಚ್ಚರ ತಪ್ಪಿದ್ರೆ ಅಪಾಯ!: “ಫೈರ್‌ಶಾಟ್’ ಮೂಲಕ ಮದ್ಯವನ್ನು ಅತ್ಯಂತ ಜಾಗರೂಕವಾಗಿ ಸೇವಿಸಬೇಕು. ಇದರ ಅಭ್ಯಾಸವಿರುವವರು ಮಾತ್ರವೇ ಇದನ್ನು ಸೇವಿಸುತ್ತಾರೆ. ಬೆಂಕಿ ಆರುವ ಮುನ್ನವೇ ಪ್ರಯತ್ನಿಸಬಾರದು. ಹೀಗಾಗಿ ಬೆಂಕಿ ಪೂರ್ಣ ಪ್ರಮಾಣದಲ್ಲಿ ಆರುವವರೆಗೂ ಕಾಯಬೇಕಾಗಿರುತ್ತದೆ. ಮದ್ಯದ ತುಂಬಿದ ಗ್ಲಾಸ್ ಕೂಡ ಅತ್ಯಂತ ಬಿಸಿಯಾಗಿರುವುದರಿಂದ ಹಿಡಿತವೂ ಮುಖ್ಯ. ಬೇರೆ ಬೇರೆ ಕಡೆ ಫೈರ್‌ಶಾಟ್ ಪ್ರಯತ್ನಿಸುವಾಗ ಗ್ರಾಹಕರು ಎಚ್ಚರತಪ್ಪಿ ದುರ್ಘಟನೆಗೆ ಈಡಾಗಿದ್ದಾರೆ.
ಪೊಲೀಸರಿಗೆ ನಿಖರ ಮಾಹಿತಿಯಿಲ್ಲ!: ಸ್ವಲ್ಪ ಎಚ್ಚರ ತಪ್ಪಿದರೂ ಗ್ರಾಹಕನ ಜೀವಕ್ಕೆ ಕುತ್ತುತರುವ “ಫೈರ್ ಶಾಟ್’ ಮಾದರಿಯ ಮದ್ಯ ಮಾರಾಟ ಕಾನೂನು ಅನುಮತಿ ಅಥವಾ ಕಾನೂನು ಬಾಹಿರ ಎಂಬುದರ ಬಗ್ಗೆ ಪೊಲೀಸರಿಗೆ ಸ್ಪಷ್ಟತೆಯಿಲ್ಲ. ಕಾನೂನುಬಾಹಿರ ಚಟುವಟಿಕೆಗಳ ಆರೋಪದ ಮೇಲೆ ಬಾರ್ ಆಂಡ್ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸುವ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ಗೂ ಸ್ಪಷ್ಟತೆ ಸಿಕ್ಕಿಲ್ಲ. ಸಿಸಿಬಿ ಇದುವರೆಗೂ ನಡೆಸಿರುವ ದಾಳಿಗಳಲ್ಲಿ ಈ ಮಾದರಿಯನ್ನು ನಾನು ಗಮನಿಸಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ನುಣುಚಿಕೊಂಡರು. “ಫೈರ್ ಶಾಟ್’ ವಿಚಾರ, ಬಾರ್‌ನ ಲೈಸೆನ್ಸ್ ಬಗ್ಗೆ ಅಬಕಾರಿ ಇಲಾಖೆ ವ್ಯಾಪ್ತಿಗೆ ಬರಲಿದೆ ಎಂದು ಮತ್ತೂಬ್ಬ ಅಧಿಕಾರಿ ಹೇಳಿದರು.
ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ. ಮಾರಾಟದ ಪ್ರಕ್ರಿಯೆಯಲ್ಲಿ ಮಾನವ ದೇಹಕ್ಕೆ ತೊಂದರೆಯಾಗುವ ಮಾದರಿಯಲ್ಲಿ ಕೃತ್ಯ ಸಂಭವಿಸಿದರೆ ಕಾನೂನುಬಾಹಿರ. ಅಶೋಕನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.-ಟಿ.ಸುನೀಲ್ ಕುಮಾರ್, ನಗರ ಪೊಲೀಸ್ ಆಯುಕ್ತ