ಆಲಮಟ್ಟಿ: ವಿಜಯಪುರದಿಂದ ಬೀಳಗಿ ಮಾರ್ಗವಾಗಿ ಬಾಗಲಕೋಟೆಗೆ ಸಂಚರಿಸುತ್ತಿದ್ದ ಬೀಳಗಿ ಘಟಕದ ಸಾರಿಗೆ ಸಂಸ್ಥೆ ಬಸ್‌ಗೆ ಆಕಸ್ಮಿಕ ಬೆಂಕಿ ತಗುಲಿದ್ದು, 35 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕೊಲ್ಹಾರ ಯುಕೆಪಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬಸ್‌ನ ಡೀಸೆಲ್ ಟ್ಯಾಂಕ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಕೆ.ಎಸ್. ಚೂರಿ ಮತ್ತು ನಿರ್ವಾಹಕ ವಿ.ಎಂ. ಬಿರಾದಾರ ತಕ್ಷಣ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಪ್ರಯಾಣಿಕರು ಗಾಬರಿಯಿಂದ ಕೆಳಗಿಳಿಯುವ ಭರದಲ್ಲಿ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ತಿಳಿಸಿದ್ದಾರೆ.
ಕೊಲ್ಹಾರ ಸಮೀಪ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಬೆಂಕಿ ನಂದಿಸಿದ್ದಾರೆ. ಎಲ್ಲ ಪ್ರಯಾಣಿಕರನ್ನು ಬೇರೆ ಬಸ್‌ಗಳ ಮೂಲಕ ಕಳುಹಿಸಲಾಗಿದೆ. ಸಾರಿಗೆ ಸಂಸ್ಥೆ ಹಿರಿಯ ಸಿಬ್ಬಂದಿ ಘಟನೆ ನಡೆದ ಸ್ಥಳಕ್ಕೆ ಬರದೆ, ಬೆಂಕಿ ಹತ್ತಿಕೊಂಡ ಬಸ್‌ನ್ನು ಬೀಳಗಿ ಘಟಕಕ್ಕೆ ಸಾಗಿಸಿದ್ದಾರೆ. ಈ ತರಾತುರಿ ಹಿಂದೆ ಸಿಬ್ಬಂದಿಗಳ ವೈಫಲ್ಯ ಎದ್ದು ಕಾಣುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಬೆಳಗ್ಗೆ ಬಸ್ ಹೊರಡುವಾಗ ಸಂಪೂರ್ಣ ಪರಿಶೀಲಿಸಿ ರಸ್ತೆಗೆ ಇಳಿಸಲಾಗಿದೆ. ಆದರೂ ಕೂಡ ಘಟನೆ ಜರುಗಿದೆ. ಪ್ರಯಾಣಿಕರಿಗೆ ಯಾವುದೆ ತೊಂದರೆಯಾಗಿಲ್ಲ. ಘಟನೆಗೆ ಕುರಿತಂತೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಸ್.ಆರ್. ಒಡೆಯರ, ಬೀಳಗಿ ಸಾರಿಗೆ ಘಟಕ ವ್ಯವಸ್ಥಾಪಕ
ಬಸ್‌ನಲ್ಲಿ ಏಕಾ ಏಕಿ ಬೆಂಕಿ ಕಾಣಿಸಿಕೊಂಡಿದ್ದಕ್ಕೆ ಪ್ರಯಾಣಿಕರು ಕೂಗಿಕೊಳ್ಳುತ್ತ ಇಳಿದು ಓಡಿ ಹೋಗುತ್ತಿರುವುದನ್ನು ಕಂಡು ನಾವು ಹೋಗಿ ನೋಡಿದಾಗ ಬೆಂಕಿ ಹತ್ತಿರುವುದು ಗಮನಕ್ಕೆ ಬಂತು. ತಕ್ಷಣ ನೀರು ಹಾಕಿ ಬೆಂಕಿ ನಂದಿಸಿದೆವು.
ಮೈನುದ್ದೀನ್ ಗಿರಗಾಂವಿ, ಬೆಂಕಿ ನಂದಿಸಿದ ವ್ಯಕ್ತಿ, ಘಟನೆ ಪ್ರತ್ಯಕ್ಷದರ್ಶಿ