ಕುಷ್ಟಗಿ: ಮೊಮ್ಮಗನ ನಾಮಕರಣದ ಸಂಭ್ರಮದ ಹಿನ್ನೆಲೆಯಲ್ಲಿ ಸಿಡಿಸಿದ ಪಟಾಕಿ ಕಿಡಿಯಿಂದ ರೈತರೊಬ್ಬರ ಟ್ರಾಕ್ಟರ್ ನಲ್ಲಿದ್ದ ಮೇವು ಸುಟ್ಟು ಭಸ್ಮವಾಗಿರುವ ಘಟನೆ ಬುಧವಾರ ನಡೆದಿದೆ.
ಯಲಬುರ್ಗಾ ಹಿರೇಅರಳಹಳ್ಳಿಯ ರೈತರೊಬ್ಬರು, ಲಿಂಗಸುಗೂರು ತಾಲೂಕಿನ ರಾಮತ್ನಾಳ ರೈತರಿಂದ ಖರೀದಿಸಿದ್ದ ಜೋಳದ ಸೊಪ್ಪೆಯ ಮೇವನ್ನು ಟ್ರಾಕ್ಟರ್ ಟ್ರಾಲಿಯಲ್ಲಿ ಕುಷ್ಟಗಿ ಪಟ್ಟಣದ ಮೂಲಕ ಸಾಗಣಿಕೆಯ ವೇಳೆ ಈ ಘಟನೆ ಸಂಭವಿಸಿದೆ.
ಸ್ಥಳೀಯರಾದ ಶಾಂತರಾಜ್ ಗೋಗಿ ಅವರು ತಮ್ಮ ಮೊಮ್ಮಗನ ನಾಮಕರಣದ ಸಂಭ್ರಮದ ಹಿನ್ನೆಲೆಯಲ್ಲಿ ಅವರ ಮನೆಯ ಮುಂದೆ ಪಟಾಕಿ ಹಚ್ಚಿದ್ದರು. ಹಚ್ಚಿದ ಪಟಾಕಿ ಕಿಡಿಗೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಟ್ರಾಕ್ಟರ್ ಟ್ರಾಲಿಯ ಮೇವಿಗೆ ತಗುಲಿದ್ದು ಧಗಧಗನೇ ಹೊತ್ತಿ ಉರಿಯ ತೊಡಗಿದ್ದು, ಅದೇ ವೇಳೆ ಮಾದಾಪೂರದ ರಾಜಶೇಖರ ಎಂಬುವರ ಸಮಯ ಪ್ರಜ್ಞೆ ಯಿಂದ ಕೂಡಲೇ ಬೆಂಕಿ ಹತ್ತಿದ್ದ ಮೇವನ್ನು ಕೆಳಗೆ ಉರುಳಿಸಿ ಮೇವು ಸಂಪೂರ್ಣ ಸುಡದಂತೆ ರಕ್ಷಿಸಿದ್ದಾರೆ. ನಂತರ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಇದನ್ನೂ ಓದಿ:ತುಮಕೂರು: ಲಾಡ್ಜ್ ನಲ್ಲಿ ಹೆಂಡತಿಯ ಕಾಲು ಕಡಿದ ಗಂಡ
ಆಕಸ್ಮಿಕ ಬೆಂಕಿಯಿಂದ ಮೇವು ನಷ್ಟ ಅನುಭವಿಸಿದ ರೈತನಿಗೆ ಶಾಂತರಾಜ್ ಗೋಗಿ ಅವರು, ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.