Advertisement

ಕೆರೆ ಹೊತ್ತಿ ಉರಿಯಲು ಬಣವೆ ಬೆಂಕಿ ಕಾರಣ

12:06 PM Feb 10, 2018 | |

ನವದೆಹಲಿ: ಬೆಳ್ಳಂದೂರು ಕರೆಯ ದಡದಲ್ಲಿರುವ ಹುಲ್ಲಿನ ಬಣವೆ ಬಳಿ ಧೂಮಪಾನ ಮಾಡಿದ್ದರಿಂದಾಗಿ ಕೆರೆಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಕೇಂದ್ರ ಪರಿಸರ ಖಾತೆ ಸಹಾಯಕ ಸಚಿವ ಮಹೇಶ್‌ ಶರ್ಮಾ ಶುಕ್ರವಾರ ರಾಜ್ಯಸಭೆಗೆ ತಿಳಿಸಿದ್ದಾರೆ. 

Advertisement

ಕೆರೆಯ ದಡದಲ್ಲಿ ಬೆಳೆಯುವ ಹುಲ್ಲನ್ನು ಕತ್ತರಿಸಿ ಮೇವಿಗಾಗಿ ಬಳಸುವುದು ಇಲ್ಲಿನ ಸಹಜ ಕ್ರಿಯೆ. ಈ ವೇಳೆ ಯಾರೋ ಧೂಮಪಾನ ಮಾಡಿದ್ದರಿಂದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದೆ. ಜನವರಿ 19ರಂದು ಕೆರೆಯ ಬಳಿ ಭಾರಿ ಅಗ್ನಿ ಅನಾಹುತ ಸಂಭವಿಸಿರುವುದಕ್ಕೆ ಇದೇ ಮೂಲ ಕಾರಣ. ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಆಕಾಶದೆತ್ತರಕ್ಕೆ ಭಾರಿ ಹೊಗೆ ಕಂಡುಬಂದಿತ್ತು.

ಅಲ್ಲದೆ ತ್ಯಾಜ್ಯ, ಉದ್ಯಮ ಘಟಕಗಳು, ಘನತ್ಯಾಜ್ಯ ಮತ್ತು ಮೀಥೇನ್‌ ಉತ್ಪಾದನೆಯಿಂದಾಗಿಯೂ ಕೆರೆಯಲ್ಲಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅವರು ಹೇಳಿದ್ದಾರೆ. ಕೆರೆಗೆ ಹೊಂದಿಕೊಂಡಂತೆ ಇಬೂರು ಮತ್ತು ಈಜಿಪುರದ ಕಡೆ ಕೆಲವು ಪ್ರದೇಶದಲ್ಲಿ ಜನವರಿ 19ರಂದು ಬೆಳಗ್ಗೆ 9.30ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ರಕ್ಷಣಾ ಸಚಿವಾಲಯಕ್ಕೆ  ಸಂಬಂಧಿಸಿದ ಎಎಸ್‌ಸಿ ಸೆಂಟರ್‌ನ ಭಾಗದಲ್ಲಿ ಕಿತ್ತಳೆ ಬಣ್ಣದ ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ರಕ್ಷಣಾ ಇಲಾಖೆ, ಅಗ್ನಿಶಾಮಕ ದಳ ಹಾಗೂ ಬಿಡಿಎ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದೆ. ಕೆರೆಯ ಮಧ್ಯದಲ್ಲೇ ಬೆಂಕಿ ಹೊತ್ತಿಕೊಂಡಿದ್ದರಿಂದ ಅಗ್ನಿಶಾಮಕ ದಳ ಅಗ್ನಿ ನಂದಿಸುವಲ್ಲಿ ಕಷ್ಟಪಡುವಂತಾಗಿತ್ತು. ಆದರೆ ಬೆಂಕಿ ಇತರ ಕಡೆಗೆ ಹರಡದಂತೆ ತಡೆಯಲಾಯಿತು.

ಅಲ್ಲದೆ ರಾಜ್ಯ ಸರ್ಕಾರ ಕೆರೆಯ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಕೆರೆಯಲ್ಲಿ ನೊರೆಯನ್ನು ತಡೆಯುವುದಕ್ಕಾಗಿ 20 ಅಡಿ ಎತ್ತರಕ್ಕೆ ತಂತಿಯ ಜಾಲರಿಯನ್ನು ಹಾಕಲಾಗಿದೆ. ಇದರಿಂದಾಗಿ ರಸ್ತೆಗೆ ನೊರೆ ಬರುವುದನ್ನು ತಡೆಯಬಹುದಾಗಿದೆ. ಕೆರೆಯ ನಿರ್ವಹಣೆಗೆ ರಾಜ್ಯ ಸರ್ಕಾರ ಇತರ ಕೆಲವು ಕ್ರಮಗಳನ್ನೂ ಕೈಗೊಂಡಿದೆ ಎಂದು ಸಚಿವ ಶರ್ಮಾ ರಾಜ್ಯಸಭೆಯಲ್ಲಿ ವಿವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next