ನಸ್ಸಿರಿಯಾ (ಇರಾಕ್ ): ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟವಾದ ಪರಿಣಾಮ 44 ಮಂದಿ ಸಾವನ್ನಪ್ಪಿ 67ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಇರಾಕ್ ನ ನಸ್ಸಿರಿಯಾ ಪಟ್ಟಣದಲ್ಲಿ ನಡೆದಿದೆ.
ಘಟನೆಯ ಬಳಿಕ ಪ್ರಧಾನ ಮಂತ್ರಿ ಮುಸ್ತಫಾ ಅಲ ಕಧಿಮಿ ಹಿರಿಯ ಸಚಿವರೊಂದಿಗೆ ತುರ್ತು ಸಭೆ ಕರೆದಿದ್ದು, ಆಸ್ಪತ್ರೆಯ ಮ್ಯಾನೇಜರ್ ನನ್ನು ಬಂಧಿಸಲು ಆದೇಶಿಸಿದ್ದಾರೆ.
ಯುದ್ಧಗಳಿಂದ ಕಂಗೆಟ್ಟಿರುವ ಇರಾಕ್ ಆರೋಗ್ಯ ಉಪಕ್ರಮಗಳಿಗಾಗಿ ಹೆಣಗಾಡುತ್ತಿದೆ. ಇರಾಕ್ ನಲ್ಲಿ ಈಗಾಗಲೇ ಕೋವಿಡ್ ವೈರಸ್ ನಿಂದ 17,5922 ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:3ನೇ ಅಲೆ ಖಚಿತ : ಸರ್ಕಾರಗಳು ಹಾಗೂ ಜನರು ಮೈಮರೆತಿರುವುದರ ಬಗ್ಗೆ ಐಎಂಎ ಕಳವಳ
ಆಸ್ಪತ್ರೆಯ ಬೆಂಕಿಯನ್ನು ನಂದಿಸಲಾಗಿದೆ. ಆದರೆ ಆಸ್ಪತ್ರೆಯ ತುಂಬೆಲ್ಲಾ ಹೊಗೆ ತುಂಬಿಕೊಂಡಿದೆ. ರಕ್ಷಣಾ ದಳದವರು ಬದುಕಿ ಉಳಿದವರನ್ನು ಹೊರತರುತ್ತಿದ್ದಾರೆ. ಇದರಿಂದಾಗಿ ರಕ್ಷಣಾ ಕಾರ್ಯಾಚರಣೆಗೂ ಕಷ್ಟವಾಗುತ್ತಿದೆ ಎಂದು ವರದಿ ತಿಳಿಸಿದೆ.
“ನನಗೆ ಕೋವಿಡ್ ವೈರಸ್ ವಾರ್ಡ್ ಒಳಗಿಂದ ದೊಡ್ಡ ಸ್ಫೋಟದ ಸದ್ದು ಕೇಳಿಸಿತು. ಕೂಡಲೇ ಬೆಂಕಿ ಹತ್ತಿಕೊಂಡಿತು” ಎಂದು ಆಸ್ಪತ್ರೆಯ ಗಾರ್ಡ್ ಅಲಿ ಮುಹ್ಸಿನ್ ಹೇಳಿದರು.
ಎಪ್ರಿಲ್ ನಲ್ಲಿ ಬಾಗ್ದಾದ್ ನ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟವಾಗಿತ್ತು. ಈ ಘಟನೆಯಲ್ಲಿ 82 ಮಂದಿ ಸಾವನ್ನಪ್ಪಿ, 110 ಮಂದಿ ಗಾಯಗೊಂಡಿದ್ದರು.