ಮಹದೇವಪುರ: ವರ್ತೂರು ಕೆರೆಯ ಮಧ್ಯ ಭಾಗದಲ್ಲಿ ಭಾನುವಾರ ಏಕಾಏಕಿ ಬೆಂಕಿ ಹತ್ತಿಕೊಂಡು ದಟ್ಟವಾದ ಹೊಗೆ ಅವರಿಸಿದ್ದರಿಂದ ಸ್ಥಳೀಯರಲ್ಲಿ ಅತಂಕ ಆವರಿಸಿತ್ತು. ಬೆಳ್ಳಂದೂರು, ವರ್ತೂರು ಕೆರೆಯಲ್ಲಿ ಬೆಂಕಿ ಮತ್ತು ನೊರೆ ಸಮಸ್ಯೆ ನಿರಂತರವಾಗಿದ್ದು, ಇದರಿಂದ ಸ್ಥಳೀಯರು ಮತ್ತು ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.
ಬೆಳ್ಳಂದೂರು ಕೆರೆಯಿಂದ ಹರಿದು ಹೋಗುವ ಕಲುಷಿತ ನೀರು ವರ್ತೂರು ಕೆರೆ ಸೇರುತ್ತಿದೆ. ಈ ಹಿಂದೆ ಬೆಳ್ಳಂದೂರು ಕೆರೆಯಲ್ಲಿ ಮೂರು ಬಾರಿ ಬೆಂಕಿ ಕಾಣಿಸಿಕೊಂಡಿತ್ತು. ಕೆರೆಯನ್ನು ಶುದ್ಧವಾಗಿರಿಸುವಂತೆ ನ್ಯಾಯಾಲಯ ತಾಕೀತು ಮಾಡಿತ್ತು. ಈಗ ವರ್ತೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಬೆಂಕಿ ನಂದಿಸಲು ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಅಗಮಿಸಿದರು. ಆದರೆ, ಕೆರೆಯಲ್ಲಿ ಬೆಳೆದಿರುವ ಜೊಂಡು ಹುಲ್ಲನ್ನು ದಾಟಿ ಬೆಂಕಿ ಬಿದ್ದಿರುವ ಸ್ಥಳಕ್ಕೆ ತಲುಪಲು ಸಂಜೆಯಾದರೂ ಅವರಿಂದ ಸಾದ್ಯವಾಗಲಿಲ್ಲ. ಬಳಿಕ ತೆಪ್ಪ, ದೋಣಿ ಮೂಲಕ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು.
ತೂಬರಹಳ್ಳಿ ಹಾಗೂ ಸಿದ್ಧಾಪುರ ಮಧ್ಯಭಾಗದ ಕೆರೆ ಪ್ರದೇಶದಲ್ಲಿ ಬೆಂಕಿ ಹತ್ತಿಕೊಂಡಿದ್ದರಿಂದ ಸುಮಾರು 10 ಏಕರೆ ಪ್ರದೇಶ ಸುಟ್ಟು ಕರಕಲಾಗಿದೆ ಜಲಚರ ಪ್ರಾಣಿಗಳು ನಾಶವಾಗಿವೆ. ಬೆಳ್ಳಂದೂರು ಹಾಗೂ ವರ್ತೂರು ಕೆರೆಗೆ ಕಾರ್ಖಾನೆಗಳ ಮತ್ತು ಬಹುಮಹಡಿ ಕಟ್ಟಡಗಳಿಂದ ವಿಷಮಿಶ್ರಿತ ನೀರು ಸೇರುತ್ತಿರುವ ಕಾರಣ ಕಳೆದ 4-5 ವರ್ಷಗಳಿಂದ ನೊರೆ ಹಾಗೂ ಬೆಂಕಿಯ ಸಮಸ್ಯೆ ಉದ್ಬವಿಸುತ್ತಿವೆ.
ಬೆಳ್ಳಂದೂರು ಕೆರೆಯನ್ನು ಅಭಿವೃದ್ಧಿಗೊಳಿಸುವಂತೆ ಎನ್‌ಜಿಟಿ ಸರ್ಕಾರ, ಬಿಬಿಎಂಪಿ ಹಾಗೂ ಬಿಡಿಎಗೆ ಚಾಟಿ ಬೀಸಿದರು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಕೆರೆಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎಂದು ಲೇಕ್ ವಾರ್ಡ್‌ನ ಜಗದೀಶ್‌ರೆಡ್ಡಿ ಅರೋಪಿಸಿದರು.