Advertisement

ಪೆಟ್ರೋಲ್‌ ಬಂಕ್‌ನಲ್ಲಿ ಬೆಂಕಿ: ಧಗ ಧಗ ಹೊತ್ತಿ ಉರಿದ ಲಾರಿ

08:53 AM Jan 17, 2019 | |

ಚಿತ್ರದುರ್ಗ: ಪೆಟ್ರೋಲ್‌ ಬಂಕ್‌ನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಪೆಟ್ರೋಲ್‌ ಹೊತ್ತು ತಂದಿದ್ದ ಟ್ಯಾಂಕರ್‌ ಸುಟ್ಟು ಕರಕಲಾದ ಘಟನೆ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.

Advertisement

ನಗರದ ಗಾಯತ್ರಿ ವೃತ್ತದ ಸಮೀಪದಲ್ಲಿರುವ ಪೆಟ್ರೋಲ್‌ ಬಂಕ್‌ನಲ್ಲಿ ಈ ಅವಘಡ ಸಂಭವಿಸಿದ್ದು, ಬಂಕ್‌ ವಾಸುದೇವ ರೆಡ್ಡಿ ಎಂಬುವರಿಗೆ ಸೇರಿದ್ದಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನೆಯಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಶೇ. 90 ರಷ್ಟು ಗಾಯಗೊಂಡಿರುವ ಲಾರಿ ಕ್ಲೀನರ್‌ ನೌಶದ್‌ ಖಾನ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಾಲಕ ಅಬ್ದುಲ್‌ ಮುಜೀದ್‌ ಸಣ್ಣಪುಣ್ಣ ಗಾಯಗಳೊಂದಿಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಹೇಗಾಯ್ತು ಘಟನೆ?: ರಾತ್ರಿ 7 ಗಂಟೆ ಸುಮಾರಿಗೆ ಪೆಟ್ರೋಲ್‌ ತುಂಬಿದ ಲಾರಿಯನ್ನು ಚಾಲಕ ಮತ್ತು ಕ್ಲೀನರ್‌ ಬಂಕ್‌ಗೆ ತಂದಿದ್ದರು. ಟ್ಯಾಂಕರ್‌ನಲ್ಲಿದ್ದ ಪೆಟ್ರೋಲ್‌ ಅನ್ನು ಭೂಮಿಯೊಳಗಿರುವ ಟ್ಯಾಂಕಿಗೆ ಇಳಿಸುವ ಸಂದರ್ಭದಲ್ಲಿ ಟ್ಯಾಂಕಿಗೆ ಅಳವಡಿಸಲಾಗಿದ್ದ ಏರ್‌ ಪೈಪ್‌ನಿಂದ ಬೆಂಕಿ ಕಿಡಿಯೊಂದು ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಪೆಟ್ರೋಲ್‌ ತುಂಬಿದ ಲಾರಿಗೆ ವ್ಯಾಪಿಸಿತು. ಬೆಂಕಿಯ ರುದ್ರ ನರ್ತನಕ್ಕೆ ಭಾರೀ ಶಬ್ದದೊಂದಿಗೆ ಬೆಂಕಿಯುಂಡೆಗಳು ಸಿಡಿದು ಬಂಕ್‌ನ ಮೇಲ್ಛಾವಣಿ ಮತ್ತು ಲಾರಿಗೆ ವ್ಯಾಪಿಸಿತು. ಲಾರಿ ಚಾಲಕ ಮತ್ತು ಕ್ಲೀನರ್‌ ಇಬ್ಬರಿಗೂ ಬೆಂಕಿ ತಗುಲಿ ಗಾಯಗೊಂಡರು.

ಆರಂಭದಲ್ಲಿ ಚಿತ್ರದುರ್ಗದ ಮೂರು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿದವು. ತಕ್ಷಣ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜಿಲ್ಲೆಯಲ್ಲಿನ ಐದಾರು ಅಗ್ನಿಶಾಮಕ ವಾಹನಗಳು ಸೇರಿದಂತೆ ದಾವಣಗೆರೆ ಜಿಲ್ಲೆಯ ಅಗ್ನಿಶಾಮಕ ವಾಹನಗಳನ್ನು ಕರೆಸುವ ಪ್ರಯತ್ನ ಮಾಡಿದರು.

Advertisement

ಬೆಂಕಿಯ ಕೆನ್ನಾಲಿಗೆ ಭೂಮಿಯೊಳಗಿನ ಪೆಟ್ರೋಲ್‌ ಮತ್ತು ಡಿಸೇಲ್‌ ಟ್ಯಾಂಕುಗಳಿಗೆ ವ್ಯಾಪಿಸಿದ್ದರೆ ಸುಮಾರು 500 ಮೀಟರ್‌ ಸುತ್ತಳತೆಯಲ್ಲಿನ ನೂರಾರು ಮನೆಗಳಿಗೆ, ಹತ್ತಾರು ವಾಣಿಜ್ಯ ಮಳಿಗೆಗಳಿಗೆ ವ್ಯಾಪಿಸಿ ಹೆಚ್ಚಿನ ಅನಾಹುತವಾಗುವ ಸಾಧ್ಯತೆ ಇತ್ತು. ಅಗ್ನಿಶಾಮಕದಳದ ಸಿಬ್ಬಂದಿ ಜೀವದ ಹಂಗು ತೊರೆದು ಬೆಂಕಿ ನಿಯಂತ್ರಿಸಿದರು.

ಜೆಸಿಆರ್‌ ಬಡಾವಣೆಗೆ ಹೋಗುವ ರಸ್ತೆ, ಬಸವೇಶ್ವರ ಚಿತ್ರಮಂದಿರದಿಂದ ಬರುವ ರಸ್ತೆ, ತಾಲೂಕು ಕಚೇರಿಯಿಂದ ಬರುವ ರಸ್ತೆ, ಜಿಲ್ಲಾಧಿಕಾರಿಗಳ ನಿವಾಸದಿಂದ ಬರುವ ರಸ್ತೆ ಸೇರಿದಂತೆ ಎಲ್ಲ ಮಾರ್ಗಗಳನ್ನು ಪೊಲೀಸರು ನಿರ್ಬಂಧಿಸಿ ವಾಹನಗಳ ಓಡಾಟ ತಡೆದರು.

ಪೆಟ್ರೋಲ್‌ ತುಂಬಿದ ಲಾರಿಯಿಂದ ಪೆಟ್ರೋಲ್‌ ಅನ್ನು ಟ್ಯಾಂಕ್‌ಗೆ ಸೇರಿಸುವ ಕಾರ್ಯ ನಡೆಯುತ್ತಿತ್ತು. ಏಕಾಏಕಿ ಬೆಂಕಿ ಆವರಿಸಿ ಪೆಟ್ರೋಲ್‌ ತುಂಬಿದ ಲಾರಿಯ ಚಾಲಕ ಮತ್ತು ಕ್ಲೀನರ್‌ ಗಂಭೀರವಾಗಿ ಗಾಯಗೊಂಡರು. ಕೂಡಲೇ ನೌಶಾದ್‌ ಖಾನ್‌ ಮೈಗೆ ವ್ಯಾಪಿಸಿದ್ದ ಬೆಂಕಿಯನ್ನು ನಂದಿಸಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೆಟ್ರೋಲ್‌ ಬಂಕ್‌ ಮಾಲೀಕ ವಾಸುದೇವ ರೆಡ್ಡಿ ಮಾಹಿತಿ ನೀಡಿದರು.

2007ರಲ್ಲಿ ಪೆಟ್ರೋಲ್‌ ಬಂಕ್‌ ಆರಂಭವಾಗಿದೆ. ಆ ಸಂದರ್ಭದಲ್ಲಿ ಬಂಕ್‌ ಸುತ್ತ ಮುತ್ತ ಯಾವುದೇ ಮನೆಗಳಾಗಲೀ, ಶಾಲೆಗಳಾಗಲೀ ಇರಲಿಲ್ಲ ಎನ್ನುವ ಮಾಹಿತಿ ಇದೆ. ಇಂದು ನೂರಾರು ಮನೆ, ಸಾವಿರಾರು ಸಂಖ್ಯೆಯಲ್ಲಿ ಓದುತ್ತಿರುವ ಶಾಲೆಯೂ ಇದೆ. ಅಗ್ನಿಶಾಮಕ ಠಾಣಾಧಿಕಾರಿಗಳು ತನಿಖೆ ನಡೆಸಿ ವರದಿ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. •ಟಿ.ಸಿ. ಕಾಂತರಾಜ್‌, ತಹಶೀಲ್ದಾರ್‌, ಚಿತ್ರದುರ್ಗ.

• ಲಾರಿಯಿಂದ ಟ್ಯಾಂಕ್‌ಗೆ ಪೆಟ್ರೋಲ್‌ ತುಂಬಿಸುತ್ತಿದ್ದಾಗ‌ ಅಗ್ನಿ ಅವಘಡ
• ಘಟನೆಯಲ್ಲಿ ಲಾರಿ ಚಾಲಕ-ಕ್ಲೀನರ್‌ಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next