ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ಇತ್ತೀಚೆಗೆ ಬೆಂಕಿ ಕಾಣಿಸಿಕೊಳ್ಳಲು ಕೆರೆಯಲ್ಲಿರುವ ರಾಸಾಯನಿಕ ಕಾರಣವಲ್ಲ. ಯಾರೋ ದುರುದ್ದೇಶದಿಂದ ಹಾಕಿದ ಬೆಂಕಿ ಎಂದು ಬಿಡಿಎ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಮುಂದೆ ಹೇಳಿಕೆ ನೀಡಿದೆ. ಒಪ್ಪದ ಹಸಿರುಪೀಠ ಕರೆ ನಿರ್ವಹಣೆ ಸಮಗ್ರ ವರದಿ ನೀಡಲು ಸೂಚಿಸಿದೆ.
ಬುಧವಾರ ಹಸಿರು ನ್ಯಾಯಾಧಿಕರಣದ ಮುಂದೆ ಹಾಜರಾದ ಬಿಡಿಎ ಆಯುಕ್ತ ರಾಕೇಶ್ ಸಿಂಗ್, ಈ ಹಿಂದೆ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕೆರೆಗೆ ತ್ಯಾಜ್ಯ ನೀರು ಸೇರಿ ಉಂಟಾಗಿದ್ದ ರಾಸಾಯನಿಕ ಕಾರಣವಾಗಿತ್ತು. ಆದರೆ, ಈಗ ರಾಸಾಯನಿಕ ಉತ್ಪತ್ತಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಹಾಗಾಗಿ ಇತ್ತೀಚೆಗೆ ಈ ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ರಾಸಾಯನಿಕ ಕಾರಣವಲ್ಲ. ಯಾರೋ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿರುವುದಾಗಿ ಮಾಹಿತಿ ಸಿಕ್ಕಿದೆ ಎಂದು ಹೇಳಿದರು.
ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಕುರಿತಂತೆ 2017ರ ಫೆಬ್ರವರಿಯಲ್ಲಿ ನಮ್ಮ ಬೆಂಗಳೂರು ಫೌಂಡೇಷನ್ ಸಲ್ಲಿಸಿದ್ದ ಅರ್ಜಿ ಕುರಿತು ಹಸಿರು ನ್ಯಾಯಾಧಿಕರಣದಲ್ಲಿ ವಿಚಾರಣೆ ನಡೆಯುತ್ತಿದ್ದು, ಬುಧವಾರ ನಗರಾಭಿವೃದ್ಧಿ ಇಲಾಖೆಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಜರಾಗುವಂತೆ ನ್ಯಾಯಾಧಿಕರಣ ಹಿಂದೆ ಸೂಚಿಸಿತ್ತು.
ಆದರೆ, ಅವರು ತರಬೇತಿಗಾಗಿ ವಿದೇಶ ಪ್ರವಾಸಕ್ಕೆ ತೆರಳಿದ್ದರಿಂದ ಅವರ ಪರವಾಗಿ ಬಿಡಿಎ ಆಯುಕ್ತರು ನ್ಯಾಯಾಧಿಕರಣದ ಮುಂದೆ ಹಾಜರಾಗಿದ್ದರು. ಈ ವೇಳೆ ಇತ್ತೀಚೆಗೆ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ
ವ್ಯಾಪಿಸಿದ ಬಗ್ಗೆ ನ್ಯಾಯಾಧಿಕರಣ ಪ್ರಶ್ನಿಸಿದಾಗ ಆಯುಕ್ತರು ಮೇಲಿನಂತೆ ಉತ್ತರ ನೀಡಿದ್ದಾರೆ.
ಈ ಹಿಂದೆ ನಗರ ಮತ್ತು ಕೈಗಾರಿಕೆಗಳ ತ್ಯಾಜ್ಯ ನೀರು ಕೆರೆಗೆ ಸೇರಿ ರಾಸಾಯನಿಕ ಮತ್ತು ನೊರೆ ಹೆಚ್ಚಾಗಿ ಉತ್ಪತ್ತಿಯಾಗುತ್ತಿತ್ತು. ಇದರಿಂದ ಬೆಂಕಿ ಕಾಣಿಸಿಕೊಳ್ಳುತ್ತಿತ್ತು. ಆದರೆ, ಈಗ ಕೆರೆ ಸ್ವತ್ಛತೆ ಆರಂಭವಾಗಿದೆ ಎಂದು ಆಯುಕ್ತರು ಹೇಳಿದರು. ಆದರೆ, ಇದನ್ನು ಒಪ್ಪದ ನ್ಯಾಯಮೂರ್ತಿಗಳು, ಕೆರೆ ಹೂಳೆತ್ತಿ ಸ್ವತ್ಛಗೊಳಿಸಲು ಮತ್ತು ತ್ಯಾಜ್ಯ ನೀರು ಸೇರದಂತೆ ಯಾವರೀತಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ? ಮುನ್ನೆಚ್ಚರಿಕೆ ಕ್ರಮಗಳೇನು? ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳ ರಚನೆ ಸೇರಿದಂತೆ ಕೆರೆಯ ಸಮಗ್ರ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಸೋಮವಾರದೊಳಗೆ ವರದಿ ಸಲ್ಲಿಸುವಂತೆ ಆಯುಕ್ತರಿಗೆ ನಿರ್ದೇಶನ ನೀಡಿತು.