ಬೆಂಗಳೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಲ್ಕು ವರ್ಷದ ಮಗು ಸುಟ್ಟು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಆರ್.ಟಿ.ನಗರದ ಅಪಾರ್ಟ್ ಮೆಂಟ್‌ವೊಂದರಲ್ಲಿ ನಡೆದಿದೆ.
ನೇಪಾಳದ ಮೂಲದ ಪೂರನ್ ಖಂಡಕ್ ಮತ್ತು ಲಕ್ಷ್ಮೀ ದಂಪತಿ ಪುತ್ರ ಅನೂಪ್(4) ಮೃತ ಮಗು. ಆರ್.ಟಿ. ನಗರದ ಸುಲ್ತಾನ್‌ಪಾಳ್ಯದ ಅಪಾರ್ಟ್‌ಮೆಂಟ್‌ವೊಂದರ 4ನೇ ಮಹಡಿಯ ಕೊಠಡಿಯಲ್ಲಿ ಭಾನುವಾರ ಸಂಜೆ ದುರ್ಘಟನೆ ನಡೆದಿದೆ.
ನೇಪಾಳ ಮೂಲದ ಪೂರನ್ ಖಂಡಕ್ ದಂಪತಿ ಕೆಲ ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದು, ಮೂರೂವರೆ ವರ್ಷಗಳಿಂದ ಆರ್.ಟಿ.ನಗರದ ಅಪಾರ್ಟ್‌ಮೆಂಟ್‌ನಲ್ಲಿ ಪೂರನ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದರೆ, ಪತ್ನಿ ಲಕ್ಷ್ಮೀ ಮನೆ ಕೆಲಸ ಮಾಡಿಕೊಂಡಿದ್ದಾರೆ. ದಂಪತಿಗೆ 4 ವರ್ಷದ ಅನೂಪ್ ಎಂಬ ಗಂಡು ಮಗುವಿತ್ತು. ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿ ಮೇಲೆ ಶೀಟ್ ಹಾಕಿ ಒಂದು ಕೊಠಡಿ ನಿರ್ಮಿಸಿದ್ದು, ಅದನ್ನು ಪೂರನ್ ದಂಪತಿಗೆ ಉಳಿದುಕೊಳ್ಳಲು ನೀಡಲಾಗಿತ್ತು. ಭಾನುವಾರ ಎಂದಿನಂತೆ ಪೂರನ್ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಹೋಗಿದ್ದಾನೆ. ಪತ್ನಿ ಲಕ್ಷ್ಮೀ ಮಗುವನ್ನು ಕೊಠಡಿಯಲ್ಲಿ ಮಲಗಿಸಿ, ಬಾಗಿಲು ಹಾಕಿಕೊಂಡು ಮನೆಗೆಲಸಕ್ಕೆ ತೆರಳಿದ್ದರು. ಸಂಜೆ 5.30ರ ಸುಮಾರಿಗೆ ಕೊಠಡಿ ಯಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂ ಡಿದೆ. ಅದನ್ನು ಗಮನಿಸಿದ ಪೂರನ್ ಓಡಿಹೋಗಿ ನೋಡಿದಾಗ ಕೊಠಡಿ ಒಳಗೆ ಬೆಂಕಿ ಹೊತ್ತಿ ಉರಿಯುತ್ತಿರು ವುದು ಕಂಡು ಬಂದಿದೆ. ತಕ್ಷಣ ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಮಗು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಮೃತಪಟ್ಟಿತ್ತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದ್ದು, ನಿದ್ದೆ ಮಾಡುತ್ತಿದ್ದ ಮಗು ಬೆಂಕಿಗೆ ಸುಟ್ಟು ಮೃತಪಟ್ಟಿದೆ. ಆರ್.ಟಿ.ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.