Advertisement

ಕಲಬುರಗಿಯಲ್ಲಿ ಭಾರೀ ದುರಂತ: ವೋಲ್ವೋ ಬಸ್ಸಿಗೆ ಬೆಂಕಿ, ಹಲವರ ಸಜೀವ ದಹನ

09:02 PM Jun 03, 2022 | Team Udayavani |

ಕಲಬುರಗಿ: ಖಾಸಗಿ ಬಸ್‌ ಹಾಗೂ ಟೆಂಪೋ (ಗೂಡ್ಸ್‌) ನಡುವೆ ಮುಖಾಮುಖಿ ಡಿಕ್ಕಿಯಾಗಿ ಬಸ್‌ನಲ್ಲಿದ್ದ ಏಳು ಜನರು ಸಜೀವ ದಹನಗೊಂಡಿದ್ದಾರೆ.

Advertisement

ಈ ಘಟನೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರು ಗಾಯಗೊಂಡ ದುರ್ಘ‌ಟನೆ ಶುಕ್ರವಾರ ಕಲಬುರಗಿ-ಬೀದರ್‌ ನಡುವಿನ ರಾಷ್ಟ್ರೀಯ ಹೆದ್ದಾರಿ ಕಮಲಾಪುರ ಪಟ್ಟಣದ ಬಳಿ ಸಂಭವಿಸಿದೆ.

ಇದನ್ನೂ ಓದಿ:ಪಂಜಾಬಿ ಗಾಯಕ ಸಿಧು ಮೂಸೆವಾಲಾ ದೇಹ ಹೊಕ್ಕಿತ್ತು ಬರೋಬ್ಬರಿ 19 ಗುಂಡುಗಳು!

ಡಿಕ್ಕಿ ಹೊಡೆದ ರಭಸಕ್ಕೆ ಖಾಸಗಿ ಬಸ್‌ 100 ಮೀಟರ್‌ವರೆಗೆ ಸಾಗಿ ಆಳವಾದ ಕಂದಕಕ್ಕೆ ಬಿದ್ದಿದೆ ಮತ್ತು ಕೆಲವೇ ಕ್ಷಣಗಳಲ್ಲಿ ಬಸ್‌ನ ಡೀಸೆಲ್‌ ಟ್ಯಾಂಕ್‌ ಡ್ಯಾಮೇಜ್‌ ಆಗಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಬಸ್‌ ಹೊತ್ತಿ ಉರಿದಿದೆ. ಬಸ್‌ನಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ 16 ಜನರು ಬಸ್‌ ಅಡಿಪಾಯದಿಂದ ಹರಸಾಹಸ ಪಟ್ಟು ಜೀವ ಉಳಿಸಿಕೊಂಡಿದ್ದಾರೆ. ಆದರೆ ಏಳು ಜನರು ಮೃತಪಟ್ಟಿದ್ದಾರೆ.

Advertisement

ಹೈದರಾಬಾದ್‌ನ ಅರ್ಜುನಕುಮಾರ ಗುಡೂರ (37), ಅವರ ಪತ್ನಿ ಸರಳಾದೇವಿ (32), ಪುತ್ರ ಬಿವಾನ್‌ (4), ದೀಕ್ಷಿತ (09), ಅನಿತಾರಾಜು (40), ಶಿವಕುಮಾರ (35), ಅವರ ಪತ್ನಿ ರವಾಲಿ ಸಜೀವ ದಹನವಾಗಿದ್ದಾರೆ. ಅರ್ಜುನಕುಮಾರ ಹಿಂದೂಸ್ತಾನ್‌ ಲಿವರ್‌ ಕಂಪನಿಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. ಪುತ್ರನ ಜನ್ಮದಿನವನ್ನು ಗೋವಾದಲ್ಲಿ ಆಚರಿಸಿಕೊಂಡು ಬರಲು ಬಸ್‌ ವ್ಯವಸ್ಥೆ ಮಾಡಿದ್ದರು. ಕಣ್ಣೆದುರೇ ಬಂಧುಗಳು-ಮಿತ್ರರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನೋಡಿ ಗಾಯಗೊಂಡವರ ದುಃಖ ಮುಗಿಲು ಮುಟ್ಟಿತ್ತು.

ಬರ್ತ್‌ಡೇ ಮಗು ಸಾವು!:
30 ಜನರು ಖಾಸಗಿ ಬಸ್‌ನಲ್ಲಿ ಗೋವಾದಲ್ಲಿ ಅರ್ಜುನಕುಮಾರ ಗುಡೂರ ಪುತ್ರನ ಜನ್ಮ ದಿನಾಚರಣೆ ಮುಗಿಸಿಕೊಂಡು ಹೈದರಾಬಾದ್‌ಗೆ ತೆರಳುತ್ತಿದ್ದರು. ಬಸ್‌ನಲ್ಲಿ ಎರಡು ಕುಟುಂಬದ ಏಳು ಜನರು ಸುಟ್ಟು ಕರಕಲಾದರೆ, ಬಸ್‌ನಲ್ಲಿದ್ದ ಇತರರೆಲ್ಲರೂ ಗಾಯಗೊಂಡಿದ್ದಾರೆ. ಜನ್ಮ ದಿನ ಆಚರಿಸಿಕೊಂಡ ಮಗು ಸಹ ದುರ್ಘ‌ಟನೆಯಲ್ಲಿ ಮೃತಪಟ್ಟಿದೆ. ಗಾಯಾಳುಗಳನ್ನು ಜೀಮ್ಸ್‌ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಟೆಂಪೋ ಚಾಲಕ ಸಹ ಗಾಯಗೊಂಡಿದ್ದಾನೆ.ಮೂರು ತಾಸು ಕಳೆದರೆ ಜನ್ಮ ದಿನದ ಸಂಭ್ರಮದ ಉತ್ಸಾಹ ನಡುವೆ ಮನೆ ಸೇರುತ್ತಿದ್ದರು. ಹೊತ್ತಿ ಉರಿಯುತ್ತಿದ್ದ ಬಸ್‌ನಿಂದ ಮೂವರನ್ನು ಸ್ಥಳೀಯ ಯುವಕನೊಬ್ಬ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಎರಡು ದಿನಗಳ ಹಿಂದೆ ತಾಲೂಕಿನ ಕಡಣಿ ಕ್ರಾಸ್‌ ಬಳಿ ಖಾಸಗಿ ಬಸ್‌ ಉರುಳಿ ಇಬ್ಬರು ಮೃತಪಟ್ಟು, 30ಕ್ಕೂ ಅಧಿಕ ಜನ ಗಾಯಗೊಂಡಿದ್ದರು. ಅಪಘಾತ ಸ್ಥಳ ಹಾಗೂ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರನ್ನು ಕೇಂದ್ರ ಸಚಿವ ಭಗವಂತ ಖೂಬಾ ಭೇಟಿ ನೀಡಿ ಪರಿಶೀಲಿಸಿದ್ದು, ಗಾಯಾಳುಗಳಿಗೆ ಸಾಂತ್ವನ ಹೇಳಿದ್ದಾರೆ.

ಮೃತದೇಹಗಳನ್ನು ಹೈದ್ರಾಬಾದ್‌ಗೆ ತೆಗೆದುಕೊಂಡು ಹೋಗಲು ವ್ಯವಸ್ಥೆ ಕಲ್ಪಿಸಿದ್ದಾರೆ. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next