Advertisement

ಕಲಾಗ್ರಾಮದಲ್ಲಿ ಅಗ್ನಿ ಅವಘಡ

11:24 AM Dec 14, 2018 | |

ಬೆಂಗಳೂರು: ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುತ್ಛಯ ಭನದಲ್ಲಿ ಗುರುವಾರ ಮುಂಜಾನೆ ಶಾರ್ಟ್‌ ಸರ್ಕಿಟ್‌ನಿಂದ ಅಗ್ನಿ ಅವಘಡ ಸಂಭವಿಸಿದ್ದು, ರಾತ್ರಿ ಕಾವಲುಗಾರನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಮುಂಜಾನೆ 4.30ಕ್ಕೆ ಸಾಂಸ್ಕೃತಿಕ ಸಮುತ್ಛಯ ಭನದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಲೈಟಿಂಗ್‌ ಕೋಣೆ ಸಂಪೂರ್ಣ ಸುಟ್ಟು ಕರುಕಲಾಗಿದೆ. ಅಲ್ಲದೆ ವೈರಿಂಗ್‌ ಸೇರಿದಂತೆ 30 ಲಕ್ಷ ರೂ. ಮೌಲ್ಯದ ಹಾನಿ ಉಂಟಾಗಿದೆ. 

Advertisement

ಬೆಂಕಿ ಕಿಡಿ ಕಾಣಿಸಿಕೊಳ್ಳುತ್ತಿದ್ದಂತೆ ಸಾಂಸ್ಕೃತಿಕ ಸಮುತ್ಛಯದ ಆವರಣದಲ್ಲೇ ಮಲಗಿದ್ದ ಭದ್ರತಾ ಸಿಬ್ಬಂದಿ ಎಚ್ಚರಗೊಂಡು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಈ ಸಂಬಂಧ ಮಲ್ಲತ್ತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಪ್ಪಿದ ದುರಂತ: ಕಳೆದ ಕೆಲವು ದಿನಗಳಿಂದ ಕಲಾಗ್ರಾಮದ ಸಾಂಸ್ಕೃತಿಕ ಸಮುತ್ಛಯದಲ್ಲಿ ರಾತ್ರಿ ವೇಳೆ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ. ಹೀಗಾಗಿ ರಂಗ ಕಲಾವಿದರು ವಾಸ್ತವ್ಯ ಹೂಡಿರಲಿಲ್ಲ. ಅಲ್ಲದೆ ರಂಗ ಚಟುವಟಿಕೆಗಳು ನಡೆಯುವಾಗ ಬೆಂಕಿ ಬಿದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಬಸವಲಿಂಗಯ್ಯ ಹೇಳಿದ್ದಾರೆ.

ಈ ಘಟನೆಯಿಂದಾಗಿ ರಂಗಚಟುವಟಿಕೆಗಳು ನಿಂತು ಹೋಗಿದ್ದು, ಸರ್ಕಾರ ಸಮುತ್ಛಯವನ್ನು ಆದಷ್ಟು ಬೇಗ ದುರಸ್ಥಿ ಮಾಡಿಸಬೇಕು ಎಂದು ಮನವಿ ಮಾಡಿದ್ದಾರೆ. ನಗರದ ಒಳಗಿರುವ ರಂಗಮಂದಿರಗಳು ದುಬಾರಿ ಎಂಬ ಕಾರಣಕ್ಕೆ ಕಲಾ ತಂಡಗಳು ಸಾಂಸ್ಕೃತಿಕ ಸಮುತ್ಛಯದ ಮೊರೆ ಹೋಗುತ್ತಿವೆ.

ಆದರೆ, ಕಲಾಗ್ರಾಮ ನಗರದ ಹೊರವಲಯದಲ್ಲಿರುವ ಕಾರಣ ಸಂಸ್ಕೃತಿ ಇಲಾಖೆ ಮೂಲಸೌಕರ್ಯ ಒದಗಿಸಲು ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೆಲ ತಿಂಗಳ ಹಿಂದಷ್ಟೇ ಲೈಟಿಂಗ್‌ ವ್ಯವಸ್ಥೆ ಕೈಕೊಟ್ಟ ಕಾರಣ ಪ್ರೇಕ್ಷಕರು ಮೊಬೈಲ್‌ ಬೆಳಕಿನಲ್ಲಿಯೇ ನಾಟಕ ವೀಕ್ಷಿಸಿದ್ದರು.

Advertisement

ಪರ್ಯಾಯ ವ್ಯವಸ್ಥೆ: ಸಾಂಸ್ಕೃತಿಕ ಸಮುತ್ಛಯದಲ್ಲಿ ಮುಂಗಡವಾಗಿ ಬುಕ್‌ ಆಗಿರುವ ಕಾರ್ಯಕ್ರಮಗಳಿಗೆ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಲಿದೆ. ಇಲೆಕ್ಟ್ರಿಕ್‌ ಇಂಜಿನಿಯರ್‌ಗಳು ಕಾರ್ಯಪ್ರವೃತರಾಗಿದ್ದು, ದುರಸ್ಥಿ ಕಾರ್ಯದಲ್ಲಿ ನಿರತರಾಗಿದ್ದಾರೆ.

ಹೀಗಾಗಿ ಕಲಾಗ್ರಾಮದಲ್ಲಿರುವ ಬಯಲು ರಂಗಮಂದಿರ, ನಯನ ಸಭಾಂಗಣ ಹಾಗೂ ಸಂಸ ಬಯಲು ರಂಗಮಂದಿರದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next