Advertisement

7.5 ಕೋಟಿ ರೂ. ಔಷಧ ಸಾಮಗ್ರಿ ಬೆಂಕಿಗಾಹುತಿ

08:47 AM Oct 21, 2017 | Team Udayavani |

ದಾವಣಗೆರೆ: ಔಷಧ ಸಗಟು ವ್ಯಾಪಾರ ಕ್ಷೇತ್ರದ ಪ್ರತಿಷ್ಠಿತ ಫಾರ್ಮದಲ್ಲಿ ಒಂದಾದ ಚೇತನಾ ಫಾರ್ಮದಲ್ಲಿ ಗುರುವಾರ ಮಧ್ಯರಾತ್ರಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 7.5 ಕೋಟಿ ರೂ.ಗೂ ಅಧಿಕ ಮೌಲ್ಯದ ಔಷಧ, ಇತರೆ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ.

Advertisement

ನಗರದ ಹದಡಿ ರಸ್ತೆ ವಿದ್ಯಾರ್ಥಿ ಭವನದ ಬಳಿ ಇರುವ ಚೇತನಾ ಫಾರ್ಮದಲ್ಲಿ ರಾತ್ರಿ 11-30ರ ವೇಳೆಗೆ ಹೊಗೆ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಕೆನ್ನಾಲಿಗೆ ಕಟ್ಟಡದ 2ನೇ ಮಹಡಿ ಆವರಿಸಿಕೊಂಡಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದವರು ಬೆಂಕಿಯ ರೌದ್ರಾವತಾರಕ್ಕೆ ತತ್ತರಿಸಿ ಹೋಗಿದ್ದಾರೆ. 3 ಅಂತಸ್ತಿನ ಕಟ್ಟಡದ ಪಕ್ಕದಲ್ಲಿದಲ್ಲಿದ್ದ ಔಷಧದ ಎರಡು ಗೋದಾಮಿಗೂ ಬೆಂಕಿ ವ್ಯಾಪಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ನೇತೃತ್ವದಲ್ಲಿ 4 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ, ಕಾರ್ಯಾಚರಣೆ ಕೈಗೊಂಡಿದ್ದಾರೆ. 

ಬೆಂಕಿ ನಿಯಂತ್ರಣ ಸಾಧ್ಯವಾಗದ ಹಿನ್ನೆಲೆಯಲ್ಲಿ ಹಾವೇರಿ ಹಾಗೂ ಚಿತ್ರದುರ್ಗದಿಂದ ತಲಾ ಒಂದು ಅಗ್ನಿಶಾಮಕ ವಾಹನದೊಂದಿಗೆ ಆಗಮಿಸಿದ ಸಿಬ್ಬಂದಿ, ಬೆಂಕಿ ನಂದಿಸುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಸತತ ನಾಲ್ಕು ಗಂಟೆ ಕಾರ್ಯಾಚರಣೆ ನಂತರ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಅವಘಡಕ್ಕೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ದೀಪಾವಳಿ ಹಬ್ಬದ ಪೂಜೆ ಮಾಡಿ, ದೀಪ ಹಚ್ಚಲಾಗಿತ್ತಾ ಎಂಬ ಅನುಮಾನವೂ ಕಾಡಿತ್ತು. ಬೆಂಕಿ ಅನಾಹುತ ಸಂಭವಿಸಿದ ಯೂನಿಟ್‌ನಲ್ಲಿ ಹಬ್ಬದ ಪೂಜೆ ಮಾಡಿರಲಿಲ್ಲ. ಗುಂಡಿ ಮಹದೇವಪ್ಪ ಕಲ್ಯಾಣ ಮಂದಿರ ಬಳಿ ಇರುವ ಚಿರಾಗ್‌ ಫಾರ್ಮದಲ್ಲಿ ಗುರುವಾರ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ. ಹಾಗಾಗಿ ಬೆಂಕಿ ಅನಾಹುತಕ್ಕೆ ಶಾರ್ಟ್‌ ಸಕೂಟ್‌ ಕಾರಣವಿರಬಹುದು ಎಂಬ ಅನುಮಾನವಿದೆ.

ಬುಧವಾರ ಸಂಜೆಯವರೆಗೆ 130ಕ್ಕೂ ಹೆಚ್ಚು ಕೆಲಸಗಾರರು ಈ ಫಾರ್ಮದಲ್ಲಿ ಕೆಲಸ ಮಾಡಿ, ಮನೆಗೆ ತೆರಳಿದ್ದರು. ಕೆಲಸ ಮುಗಿದು ಒಂದೂವರೆ ತಾಸಿಗೂ ಹೆಚ್ಚು ಸಮಯದ ನಂತರ ಈ ಅವಘಡ ಸಂಭವಿಸಿದ್ದರಿಂದ ಪ್ರಾಣಾಪಾಯ ತಪ್ಪಿದೆ. ಕೋಲ್ಡ್‌ ಸ್ಟೋರೇಜ್‌ಗೆ ಯಾವುದೇ ಹಾನಿಯಾಗಿಲ್ಲ. ಒಂದೊಮ್ಮೆ ಹಾನಿಯಾಗಿದ್ದರೆ 20 ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗುತ್ತಿತ್ತು ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next