ಬೆಂಗಳೂರು:ಬಂಡೀಪುರದ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಸಂಭವಿಸಿದ ಭಾರೀ ಕಾಡ್ಗಿಚ್ಚಿಗೆ ಸಾವಿರಾರು ಹೆಕ್ಟೇರ್ ಅರಣ್ಯ ನಾಶವಾಗಿದ್ದು, ನೂರಾರು ಕಾಡು ಪ್ರಾಣಿಗಳು ಸುಟ್ಟುಕರಲಾಗಿದ್ದವು. ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದು, ಏತನ್ಮಧ್ಯೆ ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ಬಂಡೀಪುರ ಅರಣ್ಯ ಬೆಂಕಿ ನಂದಿಸಲು ವಾಯುಪಡೆಯ ಅಧಿಕಾರಿಗಳ ಜೊತೆ ಕುಮಾರಸ್ವಾಮಿ ಮಾತುಕತೆ ನಡೆಸಿದ್ದು, ಈ ನಿಟ್ಟಿನಲ್ಲಿ ಹೆಲಿಕಾಪ್ಟರ್ ಬಳಸುವಂತೆ ಬಂಡೀಪುರ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಎಚ್ ಡಿ ಕೋಟೆಯ ಬೀರವಾಳಿಯ ನುಗು ಜಲಾಶಯದಿಂದ ನೀರು ಬಳಸಲು ಸೂಚನೆ ನೀಡಿದ್ದಾರೆ.
ದೇಶದ ಪ್ರಸಿದ್ಧ ಹುಲಿ ಸಂರಕ್ಷಿತ ಅರಣ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬಂಡೀಪುರ ಅರಣ್ಯದಲ್ಲಿ ಹಬ್ಬಿದ ಕಾಡ್ಗಿಚ್ಚಿನಿಂದಾಗಿ ಬರೋಬ್ಬರಿ 8000ಕ್ಕೂ ಅಧಿಕ ಹೆಕ್ಟೇರ್ ಅರಣ್ಯ ಸುಟ್ಟು ಭಸ್ಮವಾಗಿದೆ. ಮೈಸೂರು, ಮಂಡ್ಯ, ರಾಮನಗರ, ಕೊಡಗುಗಳಿಂದ ಸಿಬ್ಬಂದಿ ರವಾನಿಸುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದು, ಆದಷ್ಟು ಶೀಘ್ರ ಬೆಂಕಿ ನಂದಿಸಲು ಶ್ರಮಿಸಬೇಕೆಂದು ತಿಳಿಸಿದ್ದಾರೆ.
ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಹಿಮವದ್ ಗೋಪಾಲಕೃಷ್ಣ ಬೆಟ್ಟ ವಲಯ ವ್ಯಾಪ್ತಿಯಲ್ಲಿ ಮೂರು ಸಾವಿರ ಎಕರೆಯಷ್ಟು ಸೇರಿದೆ. ತಮಿಳುನಾಡು, ಕೇರಳ ಗಡಿಭಾಗದತ್ತಲೂ ಬೆಂಕಿ ಹಬ್ಬುತ್ತಿದ್ದು, ಬೆಂಕಿ ನಂದಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.