ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ಹೋಟೆಲ್ ಒಂದರಲ್ಲಿ ಅಡುಗೆ ಅನಿಲ ಸ್ಪೋಟಗೊಂಡ ಪರಿಣಾಮ ಹೋಟೆಲ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಗುರುವಾರ ರಾತ್ರಿ ಜರುಗಿದ್ದು, ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಹಂಪಿಯ ಜನತಾ ಪ್ಲಾಟ್‌ನಲ್ಲಿರುವ ಮ್ಯಾಂಗೋ ಟ್ರೀ ಹೋಟೆಲ್‌ನಲ್ಲಿ ಸಿಲಿಂಡರ್ ಸ್ಪೋಟಗೊಂಡು ಈ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ದೌಡಾಯಿಸಿ ಬಂದ ಅಗ್ನಿಶಾಮಕ ಸಿಬ್ಬಂದಿಗಳು, ಹೋಟೆಲ್‌ನಲ್ಲಿದ್ದ ಕೆಲ ಸಿಲೆಂಡರ್‌ಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರಿಸಿ, ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. ಆ ಸಮಯಕ್ಕಾಗಲೇ ಅಡುಗೆ, ಸಾಮಾನು, ಇತರೆ ಪರಿಕರಗಳು ಸೇರಿದಂತೆ ಹೋಟೆಲ್ ಸಂಪೂರ್ಣ ಸುಟ್ಟು ಭಸ್ಮವಾಗಿ ಅವಶೇಷಗಳು ಮಾತ್ರ ಉಳಿದಿದ್ದವು.
ಮೊದಲು ಹೋಟೆಲ್ ಪಕ್ಕದಲ್ಲಿರುವ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಮ್ಯಾಂಗೋ ಟ್ರೀ ಹೋಟೆಲ್, ಅನ್ನಪೂರ್ಣೇಶ್ವರಿ ಛತ್ರಕ್ಕೆ ಬೆಂಕಿ ತಗುಲಿದೆ. ಹೋಟೆಲ್‌ನಲ್ಲಿ ಸಿಲಿಂಡರ್ ಸ್ಪೋಟಗೊಳ್ಳುತ್ತಿಂದತೆ ಜನತಾ ಪ್ಲಾಟ್‌ನ ಹೋಟೆಲ್‌ಗಳಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ಪ್ರವಾಸಿಗರು ಆತಂಕದಲ್ಲಿ ದಿಕ್ಕೆಟ್ಟು ಓಡಿ ಹೋಗಿ, ತುಂಗ ಭದ್ರಾ ನದಿ ತೀರದಲ್ಲಿ ಆಶ್ರಯ ಪಡೆದಿದ್ದಾರೆ.
ಅಕ್ಕಪ್ಪಕದ ಮನೆಯವರು, ತಮ್ಮ ಮನೆಗಳಿಗೆ ಬೆಂಕಿ ತಗುಲದಿರಲಿ ಎಂದು ಮನೆಯ ಮೇಲಿನ ವಾಟರ್ ಟ್ಯಾಂಕ್‌ಗಳ ನೀರನ್ನು ಮನೆಗಳಿಗೆ ಎರಚಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಅಕ್ಕಪಕ್ಕ ಮನೆ ಹಾಗೂ ಹೋಟೆಲ್‌ಗಳಿಗೆ ಬೆಂಕಿ ವ್ಯಾಪಿಸಿಕೊಳ್ಳುವುದು ನಿಂತಿದೆ. ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಹಂಪಿಯ ಹೋಟೆಲ್ ಒಂದರಲ್ಲಿ ಸಿಲಿಂಡರ್ ಸಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಹಾಗೂ ಸ್ಮಾರಕ ಧಕ್ಕೆಯಾಗಿಲ್ಲ. ತನಿಖೆ ಆರಂಭವಾಗಿದೆ. ಅಕ್ರಮವಾಗಿ ಹೋಟೆಲ್ ನಡೆಯುತ್ತಿದ್ದರೆ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. –ಪಿ.ಅನಿರುದ್ಧ್ ಶ್ರವಣ್, ಜಿಲ್ಲಾಧಿಕಾರಿಗಳು, ಹೊಸಪೇಟೆ, ವಿಜಯನಗರ
ಹಂಪಿಯಲ್ಲಿ ಅಡುಗೆ ಅನಿಲ ಸ್ಪೋಟಗೊಂಡಿದ್ದು, ಮ್ಯಾಂಗೋ ಟ್ರೀ ಹೋಟೆಲ್, ಬಟ್ಟೆ ಅಂಗಡಿ ಹಾಗೂ ಅನ್ನಪೂರ್ಣೇಶ್ವರಿ ಛತ್ರಕ್ಕೆ ಬೆಂಕಿ ತಗುಲಿದೆ. ಹೋಟೆಲ್ ಸಂಪೂರ್ಣ ಭಸ್ಮವಾಗಿದ್ದು, ಘಟನೆ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. –ಡಾ.ಕೆ.ಅರುಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೊಸಪೇಟೆ, ವಿಜಯನಗರ.