ಪುತ್ತೂರು: ಇಲ್ಲಿನ ಬೊಳುವಾರಿನಲ್ಲಿ ಅಂಗಡಿ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಗುರುವಾರ ನಸುಕಿನ ವೇಳೆ ನಡೆದಿದೆ. ಹೈವೇ ಪಟ್ರೋಲ್ ಪೊಲೀಸರ ಸಕಾಲಿಕ ಮಾಹಿತಿಯಿಂದ ಭಾರಿ ಅನಾಹುತ ತಪ್ಪಿದೆ.
ಬೊಳುವಾರಿನಲ್ಲಿರುವ ಹ್ಯಾರಿಂಗ್ ಸ್ಟುಡಿಯೊ ಸೆಲೂನ್, ಡಿ.ಕೆ.ಮೊಬೈಲ್ ಮತ್ತು ತರಕಾರಿ ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಗಸ್ತು ನಿರತ ಹೈವೇ ಪಟ್ರೋಲ್ ಸಿಬ್ಬಂದಿಗಳ ಸಕಾಲಿಕ ಮಾಹಿತಿಯ ಮೂಲಕ ತಕ್ಷಣ ಅಗ್ನಿಶಾಮಕದಳದವರು ಆಗಮಿಸಿ ಸತತ ಮೂರುವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಶಮನಗೊಳಿಸಿದ್ದಾರೆ.
ಘಟನೆ ವಿವರ:
ಪುತ್ತೂರು- ಉಪ್ಪಿನಂಗಡಿ ರಸ್ತೆಯ ಬೊಳುವಾರು ಏಕಮುಖ ರಸ್ತೆಯ ಬಳಿಯಲ್ಲಿರುವ ಉಸ್ಮಾನ್ ಮಾಲಕತ್ವದ ಹ್ಯಾರಿಂಗ್ ಸ್ಟುಡಿಯೋ ಹೆಸರಿನಲ್ಲಿರುವ ಸೆಲೂನ್‌ವೊಂದರಿಂದ ಹೊಗೆ ಬರುವುದನ್ನು ಗಮನಿಸಿದ ಗಸ್ತು ನಿರತ ಹೈವೇ ಪಟ್ರೋಲ್ ಸಿಬ್ಬಂದಿಗಳು ತಕ್ಷಣ ಅಗ್ನಿಶಾಮಕದಳಕ್ಕೆ ಪೋನ್ ಮಾಡಿದ್ದರು. ಈ ನಡುವೆ ಸ್ಥಳೀಯರ ಮೂಲಕ ಸೆಲೂನ್ ಮಾಲಕರನ್ನು ಸ್ಥಳಕ್ಕೆ ಕೆರೆಸಿ ಸಂಸ್ಥೆಯ ಬಾಗಿಲನ್ನು ತೆರೆಯುವ ವೇಳೆ ಒಳಗೆ ಬೆಂಕಿ ಜ್ವಾಲೆ ಹತ್ತಿಕೊಳ್ಳುತ್ತಿತ್ತಲ್ಲದೆ ಪಕ್ಕದಲ್ಲಿರುವ ನಿಶಾದ್ ಎಂಬವರ ಮಾಲಕತ್ವದ ಡಿ.ಕೆ.ಮೊಬೈಲ್ಸ್ ಅಂಗಡಿಗೂ ಪಸರಿಸಿತ್ತು.
ಅಗ್ನಿಶಾಮಕದಳದವರು ಬಂದು ಬೆಂಕಿ ನಂದಿಸುವಲ್ಲಿ ಯತ್ನಿಸುತ್ತಿದ್ದ ವೇಳೆ ಬೆಂಕಿ ಜ್ವಾಲೆ ಅಂಗಡಿಯ ಮೇಲ್ಛಾವಣಿಯ ಮೂಲಕ ಪಕ್ಕದ ತರಕಾರಿ ಅಂಗಡಿ ಮತ್ತು ಅಕ್ಕಪಕ್ಕದಲ್ಲಿರುವ ಎರಡು ಹೊಟೇಲ್‌ಗಳಿಗೂ ಪಸರಿಸಿತ್ತು.
ಅಗ್ನಿಶಾಮಕದಳದವರು ನಿರಂತರ ಮೂರುವರೆ ಗಂಟೆ ಕಾರ್ಯಾಚರಣೆ ಮತ್ತು ಸ್ಥಳೀಯರ ಸಹಕಾರದೊಂದಿಗೆ ಬೆಂಕಿಯನ್ನು ಶಮನಗೊಳಿಸಲಾಗಿದ್ದು ಭಾರೀ ಅನಾಹುತವನ್ನು ತಪ್ಪಿಸಲಾಗಿದೆ