Advertisement

ಉಡುಪಿ ಜಿಲ್ಲೆ: ಅಗ್ನಿ ಅವಘಡ ಪ್ರಮಾಣ ಇಳಿಮುಖ

10:17 AM Feb 06, 2023 | Team Udayavani |

ಕುಂದಾಪುರ : ಉಡುಪಿ ಜಿಲ್ಲೆಯಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಳೆದ ವರ್ಷ ಕಾಡ್ಗಿಚ್ಚು , ಕೃಷಿ ಪ್ರದೇಶಕ್ಕೆ ಬೆಂಕಿಯಂತಹ ಅಗ್ನಿ ಅವಘಡ ಪ್ರಕರಣಗಳ ಸಂಖ್ಯೆ ಇಳಿಮುಖಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೆ ಈ ವರ್ಷದ ಆರಂಭದಲ್ಲಿ ಮಾತ್ರ ಅಗ್ನಿ ಅವಘಡ ಪ್ರಕರಣಗಳು ಗರಿಷ್ಠ ಪ್ರಮಾಣದಲ್ಲಿ ಸಂಭವಿಸಿದೆ.

Advertisement

ಆದರೂ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ, ಇಂತಹ ಅವಘಡಗಳನ್ನು ತಡೆಗಟ್ಟಬಹುದು. ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟಾರೆ 351 ಅಗ್ನಿ ಅವಘಡ ಪ್ರಕರಣಗಳು ಸಂಭವಿಸಿದ್ದರೆ, ಈ ವರ್ಷದ ಜನವರಿ ತಿಂಗಳೊಂದರಲ್ಲಿಯೇ ಬರೋಬ್ಬರಿ 93 ಪ್ರಕರಣಗಳು ವರದಿಯಾಗಿವೆ. ಇದಕ್ಕೂ ಹಿಂದಿನ ವರ್ಷಗಳಲ್ಲಿ ಅಂದರೆ ಕೊರೊನಾಗಿಂತಲೂ ಮುನ್ನ ವರ್ಷಕ್ಕೆ ಸುಮಾರು 800ರಷ್ಟು ಅಗ್ನಿ ಅವಘಡದಂತಹ ಪ್ರಕರಣಗಳು ಸಂಭವಿಸುತ್ತಿದ್ದವು. ಈಗ ಈ ಪ್ರಮಾಣ ಒಂದಷ್ಟರ ಮಟ್ಟಿಗೆ ಕಡಿಮೆಯಾಗಿರುವುದು ಒಳ್ಳೆಯ ಬೆಳವಣಿಗೆ.

ಕಾಡ್ಗಿಚ್ಚು ಪ್ರಕರಣವೇ ಜಾಸ್ತಿ ಪ್ರತಿ ವರ್ಷ ಕಾಡಿಗೆ ಬೆಂಕಿ, ಗೇರು ಬೀಜ ಪ್ಲಾಂಟೇಶನ್‌ನಲ್ಲಿ ಅಗ್ನಿ ಅನಾಹುತ, ಕೃಷಿ ಪ್ರದೇಶಗಳಿಗೆ ಬೆಂಕಿ ತಗುಲಿ ಹಾನಿಯಾಗುತ್ತಿರುವ ಪ್ರಕರಣಗಳೇ ಕಳೆದ ವರ್ಷವೂ ಜಾಸ್ತಿ ಇದೆ. ಅದರಲ್ಲೂ ಜನವರಿಯಿಂದ ಎಪ್ರಿಲ್‌ – ಮೇ ವರೆಗೆ ಬೇಸಗೆಯಲ್ಲಿ ದಿನಕ್ಕೆ 4-5
ಪ್ರಕರಣಗಳು ಸಂಭವಿಸುತ್ತಿದೆ. ಉಳಿದಂತೆ ಕೈಗಾರಿಕಾ ಕಟ್ಟಡಗಳು, ವಾಣಿಜ್ಯ ಕಟ್ಟಡ, ಗ್ಯಾಸ್‌ ಸೋರಿಕೆ, ಮಳಿಗೆಗಳಿಗೆ ಬೆಂಕಿಪ್ರಕರಣಗಳು ಸೇರಿವೆ.

ರಕ್ಷಣಾ ಕರೆ-115 ಪ್ರಕರಣ

ನೀರಿಗೆ ಬಿದ್ದು ಮುಳುಗಿರುವುದು, ನೀರಲ್ಲಿ ಕೊಚ್ಚಿಕೊಂಡು ಹೋಗಿರುವುದು, ಕೆರೆಗೆ ಬಿದ್ದಿರುವ ಘಟನೆಗಳು ಸೇರಿದಂತೆ ಒಟ್ಟಾರೆ ಕಳೆದ ವರ್ಷ ಜಿಲ್ಲೆಯಲ್ಲಿ 4 ಅಗ್ನಿ ಶಾಮಕ ಠಾಣೆಗಳಿಗೆ ರಕ್ಷಣೆಗಾಗಿ 115 ಕರೆಗಳು ಬಂದಿವೆ. ಉಡುಪಿ ಅಗ್ನಿ ಶಾಮಕ ಠಾಣೆಗೆ 49, ಕಾರ್ಕಳ ಠಾಣೆಗೆ 17, ಕುಂದಾಪುರಕ್ಕೆ 19, ಬೈಂದೂರಿಗೆ 24 ಹಾಗೂ ಮಲ್ಪೆ ಠಾಣೆಗೆ 6 ಕರೆಗಳು ಬಂದಿವೆ.

Advertisement

ಅಗ್ನಿಶಾಮಕ ಠಾಣಾವಾರು ಅಗ್ನಿಅವಘಡ ಪ್ರಕರಣ ಠಾಣೆ

                                   2022          2023 (ಜನವರಿ)
ಉಡುಪಿ                         149               28
ಕಾರ್ಕಳ                         103               20
ಕುಂದಾಪುರ                   50                20
ಬೈಂದೂರು                   19                 15
ಮಲ್ಪೆ                             30                10
ಒಟ್ಟು                             351               93

“ಜಾಗೃತಿ ಅವಶ್ಯ”
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇತ್ತೀಚಿಗೆ‌ ಅಂದರೆ ಕೊರೊನಾದ ಅನಂತರದಿಂದ ಅಗ್ನಿ ಅವಘಡ ಪ್ರಕರಣಗಳ ಸಂಖ್ಯೆ ಒಂದಷ್ಟು ಕಡಿಮೆಯಾಗಿದೆ. ಕಾಡ್ಗಿಚ್ಚು ಪ್ರಕರಣ ಸಹ ಇಳಿಮುಖವಾಗಿದೆ. ಬೇಸಗೆಯಲ್ಲಿ ಆಗಾಗ್ಗೆ ಅಲ್ಲಲ್ಲಿ ಸಂಭವಿಸುತ್ತಿರುತ್ತದೆ. ಕೆಲವೊಂದು ಕಡೆಗಳಲ್ಲಿ ಮುನ್ನೆಚ್ಚರಿಕೆಯ ಜಾಗೃತಿ ವಹಿಸಿದರೆ ಖಂಡಿತ ನಿಯಂತ್ರಣ ಸಾಧ್ಯ.– ಎಚ್‌.ಎಂ. ವಸಂತ ಕುಮಾರ್‌, ಉಡುಪಿ ಜಿಲ್ಲಾ ಅಗ್ನಿ ದಳದ ಅಧಿಕಾರಿ

ಯಾವುದೇ ಅವಘಡ ಸಂಭವಿಸಿದಾಗ ತುರ್ತು ಕರೆಗಾಗಿ 112 ಅಥವಾ 101ಕ್ಕೆ ಕರೆ ಮಾಡಬಹುದು
ಉಡುಪಿ ಅಗ್ನಿ ಶಾಮಕ ಠಾಣೆ –
0820-2520333
ಮಲ್ಪೆ ಅಗ್ನಿ ಶಾಮಕ ಠಾಣೆ –
0820-2537222
ಕುಂದಾಪುರ ಅಗ್ನಿ ಶಾಮಕ ಠಾಣೆ –
08254-200724, 08254-230724
ಬೈಂದೂರು ಅಗ್ನಿ ಶಾಮಕ ಠಾಣೆ-
08254-251101, 08254-251102
ಕಾರ್ಕಳ ಅಗ್ನಿ ಶಾಮಕ ಠಾಣೆ –
08258-232223

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next