ವಾಡಿ: ಮನೆಯೊಂದು ಇದ್ದಕ್ಕಿದ್ದಂತೆ ಧಗಧಗಿಸಿ ಹೊತ್ತಿ ಉರಿದ ಘಟನೆ (ಡಿ. 8) ಗುರುವಾರ ಮದ್ಯಾಹ್ನ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಪುರಸಭೆ ವ್ಯಾಪ್ತಿಯ ಮಾರುಕಟ್ಟೆ ಪ್ರದೇಶದ ನಿವಾಸಿ ಸುನಿತಾ ಎಂಬುವವರ ಮನೆ ಏಕಾಏಕಿ ಹೊತ್ತಿ ಉರಿದಿದೆ. ಘಟನೆ ಪರಿಣಾಮ ಮಾರುಕಟ್ಟೆಯ ಬೀದಿಯಲ್ಲಿ ಕುಳಿತು ತರಕಾರಿ ಮಾರುತ್ತಿರುವ ಮಹಿಳೆ ಹಾಗೂ ಆಕೆಯ ಮಗ ಬೀದಿಗೆ ಬಿದ್ದಿದ್ದಾರೆ.
ಗಂಡ ಮನೆಬಿಟ್ಟು ಹೋದ ಬಳಿಕ ಏಕಾಂಗಿಯಾದ ಸುನಿತಾ, ಹನ್ನೊಂದು ವರ್ಷದ ಮಗನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದು, ತರಕಾರಿ ಮಾರಿ ಬದುಕು ಕಟ್ಟಿಕೊಂಡಿದ್ದರು.
ಗುರುವಾರ ಸಂತೆ ದಿನವಾದ್ದರಿಂದ ಬೆಳಗ್ಗೆ ಮನೆಗೆ ಬೀಗ ಹಾಕಿ ಮಗನೊಂದಿಗೆ ಮಾರುಕಟ್ಟೆಯ ಬೀದಿಯಲ್ಲಿ ತರಕಾರಿ ಮಾರಾಟಕ್ಕೆ ಅಣಿಯಾಗಿದ್ದು, ಈ ವೇಳೆ ಮನೆಯಿಂದ ದಟ್ಟವಾದ ಹೊಗೆ ಬರುತ್ತಿದೆ ಎಂದು ಪಕ್ಕದ ಮನೆಯವರು ಮಾಹಿತಿ ನೀಡಿದ್ದರಿಂದ ಓಡಿ ಹೋಗಿ ನೋಡುವಷ್ಟರಲ್ಲಿ ಶೇ.80 ರಷ್ಟು ಮನೆಯ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ.
Related Articles
ಈ ಅಗ್ನಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದ್ದು, ಬಟ್ಟೆ, ದವಸ ಧಾನ್ಯ, ಟಿವಿ, ಮಿಕ್ಸರ್, ಫ್ಯಾನ್, ಕರ್ಪೂರದ ಬ್ಯಾರಲ್ ಗಳು, ಟೇಬಲ್, ಬ್ಯಾಗಿನಲ್ಲಿಟ್ಟಿದ್ದ ರೂ.50,000 ಸೇರಿದಂತೆ ವಿವಿಧ ಗ್ರಹ ಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ.
ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಒಂದು ಕೋಣೆಯ ಬಾಡಿಗೆ ಮನೆ ಕಪ್ಪಾಗಿದೆ. ಮನೆಯಲ್ಲಿದ್ದ ಗ್ಯಾಸ್ ತುಂಬಿದ ಸಿಲಿಂಡರ್ ಸುರಕ್ಷಿತವಾಗಿದ್ದು, ಅದೃಷ್ಟವಶಾತ್ ಮಹಿಳೆ ತನ್ನ ಮಗನೊಂದಿಗೆ ಮನೆಯಿಂದ ಹೊರಗಿದ್ದರಿಂದ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಬಡಾವಣೆಯ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಮನೆಯಲ್ಲಿದ್ದ ಎಲ್ಲವೂ ಬೆಂಕಿಯಿಂದ ನಾಶವಾಗಿದ್ದರಿಂದ ತರಕಾರಿ ವ್ಯಾಪಾರಿ ಸುನಿತಾಳ ಬದುಕು ಅಕ್ಷರಶಃ ಬೀದಿಗೆ ಬಿದ್ದಿದ್ದು, ದಿಕ್ಕು ತೋಚದೆ ಕಂಗಾಲಾಗಿದ್ದಾಳೆ.