Advertisement
ಪಟ್ಟಣದ ಪುರಸಭೆ ವ್ಯಾಪ್ತಿಯ ಮಾರುಕಟ್ಟೆ ಪ್ರದೇಶದ ನಿವಾಸಿ ಸುನಿತಾ ಎಂಬುವವರ ಮನೆ ಏಕಾಏಕಿ ಹೊತ್ತಿ ಉರಿದಿದೆ. ಘಟನೆ ಪರಿಣಾಮ ಮಾರುಕಟ್ಟೆಯ ಬೀದಿಯಲ್ಲಿ ಕುಳಿತು ತರಕಾರಿ ಮಾರುತ್ತಿರುವ ಮಹಿಳೆ ಹಾಗೂ ಆಕೆಯ ಮಗ ಬೀದಿಗೆ ಬಿದ್ದಿದ್ದಾರೆ.
Related Articles
Advertisement
ಈ ಅಗ್ನಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದ್ದು, ಬಟ್ಟೆ, ದವಸ ಧಾನ್ಯ, ಟಿವಿ, ಮಿಕ್ಸರ್, ಫ್ಯಾನ್, ಕರ್ಪೂರದ ಬ್ಯಾರಲ್ ಗಳು, ಟೇಬಲ್, ಬ್ಯಾಗಿನಲ್ಲಿಟ್ಟಿದ್ದ ರೂ.50,000 ಸೇರಿದಂತೆ ವಿವಿಧ ಗ್ರಹ ಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ.
ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಒಂದು ಕೋಣೆಯ ಬಾಡಿಗೆ ಮನೆ ಕಪ್ಪಾಗಿದೆ. ಮನೆಯಲ್ಲಿದ್ದ ಗ್ಯಾಸ್ ತುಂಬಿದ ಸಿಲಿಂಡರ್ ಸುರಕ್ಷಿತವಾಗಿದ್ದು, ಅದೃಷ್ಟವಶಾತ್ ಮಹಿಳೆ ತನ್ನ ಮಗನೊಂದಿಗೆ ಮನೆಯಿಂದ ಹೊರಗಿದ್ದರಿಂದ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಬಡಾವಣೆಯ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಮನೆಯಲ್ಲಿದ್ದ ಎಲ್ಲವೂ ಬೆಂಕಿಯಿಂದ ನಾಶವಾಗಿದ್ದರಿಂದ ತರಕಾರಿ ವ್ಯಾಪಾರಿ ಸುನಿತಾಳ ಬದುಕು ಅಕ್ಷರಶಃ ಬೀದಿಗೆ ಬಿದ್ದಿದ್ದು, ದಿಕ್ಕು ತೋಚದೆ ಕಂಗಾಲಾಗಿದ್ದಾಳೆ.