ಲಕ್ನೋ : ಬಿಜೆಪಿ ಅಭ್ಯರ್ಥಿ, ಮಾಜಿ ಚಿತ್ರ ನಟಿ, ಜಯಪ್ರದಾ ವಿರುದ್ಧ ಅತ್ಯಂತ ಕೀಳುಮಟ್ಟದ ಲೈಂಗಿಕ ಅವಹೇಳನದ ಮಾತುಗಳನ್ನು ಆಡಿರುವ ಕಾರಣಕ್ಕೆ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
‘ಮಹಿಳೆಯರ ಬಗ್ಗೆ, ವಿಶೇಷವಾಗಿ ತನ್ನ ಬಗೆ, ಅತ್ಯಂತ ಕೀಳು ಮಟ್ಟದ ಟೀಕೆ ಮಾಡುವ ಆತನನ್ನು (ಆಜಂ ಖಾನ್) ಚುನಾವಣೆಗೆ ನಿಲ್ಲಲು ಬಿಡಬಾರದು; ಆತ ಒಂದೊಮ್ಮೆ ಗೆದ್ದು ಬಂದರೆ ಮಹಿಳೆಯರು ಮತ್ತು ದೇಶದ ಪ್ರಜಾಸತ್ತೆಯ ಗತಿ ಏನು ? ಆತನಿರುವ ಸಮಾಜದಲ್ಲಿ ಮಹಿಳೆಯರಿಗೆ ಸ್ಥಾನವೇ ಇರಲಾರದು. ಹಾಗಿರುವಾಗ ನಾವೆಲ್ಲಿಗೆ ಹೋಗಬೇಕು ? ನಾನು ಸಾಯಬೇಕೇ ? ಸತ್ತರೆ ನಿಮಗೆ (ಆಜಂ ಖಾನ್ ಗೆ) ತೃಪ್ತಿಯೇ ? ನಿಮ್ಮ ಕೀಳು ಮಟ್ಟದ ಮಾತಿಗೆ ಬೆದರಿ ನಾನು ರಾಮಪುರ ವನ್ನು ಬಿಡುವೆನೆಂದು ಭಾವಿಸುವಿರಾ ? ಇಲ್ಲ, ನಾನಂತೂ ಇಲ್ಲಿಂದ ಹೋಗುವುದಿಲ್ಲ’ ಎಂದು ಜಯಪ್ರದಾ ಹೇಳಿದ್ದಾರೆ.
‘ಆಜಂ ಖಾನ್ ಮಾತನಾಡುವ ರೀತಿ ನನಗೇನೂ ಹೊಸದಲ್ಲ; 2009ರಲ್ಲಿ ಅವರದ್ದೇ ಪಕ್ಷದ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ್ದಾಗ ಅಗಲೂ ಅವರು ನನ್ನ ಬಗ್ಗೆ ತುಂಬಾ ಕೀಳಾಗಿ ಮಾತನಾಡಿದ್ದರು; ಆಗ ಪಕ್ಷದಲ್ಲಿ ಯಾರೂ ನನ್ನ ಬೆಂಬಲಕ್ಕೆ ಬರಲಿಲ್ಲ; ನಾನೋರ್ವ ಮಹಿಳೆ; ಆತನ ಕೀಳು ಮಾತನ್ನು ಪುನರುಚ್ಚರಿಸಲು ಕೂಡ ನನ್ನಿಂದ ಅಸಾಧ್ಯ. ನಾನು ಆತನಿಗೆ ಏನು ಮಾಡಿದ್ದೇನೆ ಎಂಬುದನ್ನು ನಾನು ಅರಿಯೆ; ಆದರೂ ಆತ ನನ್ನ ಬಗ್ಗೆ ಕೀಳಾಗಿ ಮಾತನಾಡುವುದನ್ನು ನಿಲ್ಲಿಸಿಲ್ಲ’ ಎಂದು ಜಯಪ್ರದಾ ಹೇಳಿದ್ದಾರೆ.