ಬೆಂಗಳೂರು: ಜಾಲಹಳ್ಳಿಯಲ್ಲಿ ಸಾವಿರಾರು ವೋಟರ್ ಐಡಿ ಗಳು ಪತ್ತೆ ಯಾದ ಪ್ರಕರಣದಲ್ಲಿ ತನ್ನ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ಗುರುವಾರ ಆರ್.ಆರ್.ನಗರ ಕಾಂಗ್ರೆಸ್ ಶಾಸಕ, ಅಭ್ಯರ್ಥಿ ಮುನಿರತ್ನ ಅವರು ಸುದ್ದಿಗೋಷ್ಠಿ ನೀಡಿ ಸ್ಪಷ್ಟನೆ ನೀಡಿದ್ದಾರೆ.
ವೋಟರ್ ಐಡಿ ಗಳು ಪತ್ತೆಯಾದಲ್ಲಿ ಪಾಂಪ್ಲೆಟ್, ವಾಟರ್‌ಕ್ಯಾನ್ ಪತ್ತೆಯಾಗಿದೆ ಎಂಬ ಕಾರಣಕ್ಕೆ ನನ್ನ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ. ನಾನು ಕ್ಷೇತ್ರದಲ್ಲಿ ಬೇಕು ಎಂದವರಿಗೆ ನನಗೆ ಸಾಧ್ಯವಾದಷ್ಟು ವಾಟರ್ ಕ್ಯಾನ್‌ಗಳನ್ನು ನೀಡಿದ್ದೇನೆ .ನಾನು ಅಭ್ಯರ್ಥಿಯಾಗಿ 40,000 ಪಾಂಪ್ಲೆಟ್‌ಗಳನ್ನು ಮುದ್ರಿಸಿದ್ದೇನೆ. ನಾನೆ ಮನೆ ಮನೆಗೆ ತೆರಳಿ ಹಂಚಿ ಮತ ಕೇಳಿದ್ದೇನೆ. ಯಾರ ಮನೆಗೂ ತೆರಳಿದರೂ ನನ್ನ ಪಾಂಪ್ಲೆಟ್‌ಗಳು ಸಿಗುತ್ತವೆ ಎಂದರು.
‘ಅಲ್ಲಿ ಪತ್ತೆಯಾದ ವೋಟರ್ ಐಡಿಗಳು ಸ್ಲಂ ವಾಸಿಗಳದ್ದು, ಎಲ್ಲವೂ ಅಸಲಿ, ನಕಲಿ ಅಲ್ಲ. ಕಾಂಗ್ರೆಸ್‌ನ ಭದ್ರ ಕೋಟೆಯ ಮತದಾರರದ್ದು’ ಎಂದರು.
‘ಇದು ಬಿಜೆಪಿಯವರ ಷಡ್ಯಂತ್ರ.ನನ್ನನ್ನು ಮಾನಸಿಕ ವಾಗಿ ಕುಗ್ಗಿಸಲು , ಚುನಾವಣೆ ಮುಂದೂಡಲು ಈ ರೀತಿ ಮಾಡಲಾಗಿದೆ. ನನ್ನ ತೇಜೋವಧೆ ಮಾಡಲು ಯತ್ನಿಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನನಗೂ ಆ ವೋಟರ್ ಐಡಿಗಳಿಗೂ ಯಾವುದೇ ಸಂಬಂಧ ಇಲ್ಲ’ ಎಂದು ತೀವ್ರ ವಾಗ್ಧಾಳಿ ನಡೆಸಿದ್ದಾರೆ.
‘ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ನೀವೆಂದುಕೊಂಡಷ್ಟು ಒಳ್ಳೆಯವರಲ್ಲ. 2 ಬಾರಿ ಸೋಲು ಅನುಭವಿಸಿದ್ದು, ಈ ಬಾರಿ ಗೆಲ್ಲಲೇಬೇಕೆಂದು ಈ ರೀತಿ ಮಾಡಿದ್ದಾರೆ’ ಎಂದು ಕಿಡಿ ಕಾರಿದರು.
‘ಕ್ಷೇತ್ರದಲ್ಲಿ 4 ಭಾಷೆ ಮಾತನಾಡುವ 300 ಜನರಿದ್ದಾರೆ. ಜನರಿಗೆ ಕರೆ ಮಾಡಿ ಯಾಮಾರಿಸುತ್ತಿದ್ದಾರೆ. ಇವತ್ತು ಒಬ್ಬನನ್ನು ಹಿಡಿದು ನಾವೇ ಪೊಲೀಸರಿಗೆ ನೀಡಿದ್ದೇವೆ’ ಎಂದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದರು.