ಬೆಂಗಳೂರು: ಸಹಪಾಠಿಗಳ ರ್ಯಾಗಿಂಗ್‌ನಿಂದ ಬೇಸತ್ತ ಕೆ.ಎಸ್.ಲೇಔಟ್‌ನ ದಯಾನಂದ ಸಾಗರ ಕಾಲೇಜಿನ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೇಘನಾ ಆತ್ಮಹತ್ಯೆ ಪ್ರಕರಣ ಸಂಬಂಧ ಕಾಲೇಜಿನ ಎಚ್‌ಒಡಿ ರಾಜಕುಮಾರ್, ನಾಲ್ವರು ವಿದ್ಯಾರ್ಥಿಗಳು ಹಾಗೂ ಇತರರ ವಿರುದ್ಧ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಾಗಿದೆ.
ಕಾಲೇಜು ಆವರಣದಲ್ಲಿ ಸಹಪಾಠಿಗಳ ಜತೆ ರ್ಯಾಗಿಂಗ್ ಮಾಡಿದ, ಕಾಲೇಜು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಸೌಧಾಮಿನಿ, ವಿದ್ಯಾರ್ಥಿ ಸಂದೀಪ್, ಎಚ್‌ಒಡಿ ರಾಜಕುಮಾರ್, ವಿದ್ಯಾರ್ಥಿ ನಿಖೀಲ್, ಸಂಧ್ಯಾ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಅಷ್ಟೇ ಅಲ್ಲದೇ, ವಿದ್ಯಾರ್ಥಿನಿ ಮೇಘನಾರನ್ನು ರ್ಯಾಗಿಂಗ್ ಮಾಡಿದ್ದ ವಿಡಿಯೋ ಬಹಿರಂಗ ಪಡಿಸಿದವರನ್ನು ಪತ್ತೆ ಮಾಡಿ ನೋಟಿಸ್ ಜಾರಿ ಮಾಡಲಾಗುವುದು. ಚಿತ್ರೀಕರಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್ಐಆರ್‌ನಲ್ಲೇನಿದೆ?: ಮೇಘನಾ ಪ್ರಥಮ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ದಯಾನಂದ ಸಾಗರ ಕಾಲೇಜಿನಲ್ಲಿ ಕ್ಲಾಸ್ ರೆಪ್ರಸೆಂಟ್‌ಗೆ ಸ್ಪರ್ಧಿಸಿ, ಚುನಾವಣೆಯಲ್ಲಿ ಅದೇ ಕಾಲೇಜು ವಿದ್ಯಾರ್ಥಿನಿ ಸೌಧಾಮಿನಿ ಎದುರು ಸೋತಿದ್ದಳು. ತನ್ನ ವಿರುದ್ಧ ಸ್ಪರ್ಧಿಸಿದ ಕಾರಣಕ್ಕೆ ಮೇಘನಾಗೆ ಸೌಧಾಮಿನಿ ಹಾಗೂ ಆಕೆಯ ಸ್ನೇಹಿತರಾದ ನಿಖೀಲ್, ಸಂದೀಪ್, ಸಂಧ್ಯಾ ಮತ್ತಿತರರು ಕಾಲೇಜು ಆವರಣದಲ್ಲಿ ಅಶ್ಲೀಲ ಪದಗಳಿಂದ ನಿಂದಿಸಿದ್ದಲ್ಲದೇ,
ಕಾಲೇಜಿನ ಇತರೆ ವಿದ್ಯಾರ್ಥಿಗಳ ಜತೆ ಸೇರಬಾರದು ಎಂದು ತಾಕೀತು ಮಾಡಿದ್ದಳು ಎಂದು ಮೇಘನಾಳ ತಾಯಿ ಲತಾ ಚಂದ್ರಶೇಖರ್ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಒಂದು ತಿಂಗಳಿಂದ ಕಾಲೇಜಿನ ಎಚ್‌ಒಡಿ ರಾಜಕುಮಾರ್ ನಮ್ಮ ಮನೆಗೆ ಸಂದೀಪ್, ನಿಖೀಲ್ ಮತ್ತು ಇತರರನ್ನು ಕಳುಹಿಸಿ ಗಲಾಟೆ ಮಾಡಿಸಿ ಕಿರುಕುಳ ನೀಡಿದ್ದರು ಎಂದು ತಾಯಿ ಲತಾ ಚಂದ್ರಶೇಖರ್ ಪ್ರಕರಣ ದಾಖಲಿಸಿದ್ದಾರೆ.
ವಿಡಿಯೋಗಳಲ್ಲಿ ಏನಿದೆ?: ರ್ಯಾಗಿಂಗ್ ಮಾಡಿದ ವಿದ್ಯಾರ್ಥಿಗಳೇ ಚಿತ್ರೀಕರಿಸಿರುವ 2.03 ನಿಮಿಷ ಹಾಗೂ 0.13 ಸೆಕೆಂಡ್ ವಿಡಿಯೋ ಬಹಿರಂಗವಾಗಿದೆ. 2.03 ನಿಮಿಷ ವಿಡಿಯೋದಲ್ಲಿ ಮೃತ ಮೇಘನಾರನ್ನು ಮಧ್ಯದಲ್ಲಿ ನಿಲ್ಲಿಸಿಕೊಂಡು, ಸೌಧಾಮಿನಿ ಹಾಗೂ ಇತರೆ ವಿದ್ಯಾರ್ಥಿಗಳು ಅಶ್ಲೀಲ ಪದಗಳಿಂದ ನಿಂದಿಸುತ್ತಾರೆ.
ಅಲ್ಲದೇ, ಸೌಧಾಮಿನಿ ಹಲ್ಲೆಗೆ ಮುಂದಾಗಿದ್ದಾರೆ. ಮೇಘನಾ ಮೊಬೈಲ್ ಕಸಿದು ಸಂದೇಶಗಳು, ಕರೆಗಳನ್ನು ಪರಿಶೀಲಿಸಿದ್ದಾರೆ. ಅಷ್ಟೇ ಅಲ್ಲದೇ, ವಾಟ್ಸ್‌ಆ್ಯಪ್ ಗ್ರೂಪ್‌ನಿಂದ ಹೊರಹಾಕಿದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಆಕೆ ಅತ್ತರೂ ವಿದ್ಯಾರ್ಥಿಗಳು ರ್ಯಾಗಿಂಗ್ ಮುಂದುವರಿಸಿದ್ದಾರೆ.