ಮುಂಬೈ: ವೀಸಾ ಅರ್ಜಿಯೊಂದಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್ ಅವರ ಪುತ್ರ ಮತ್ತು ಅವರ ಎರಡನೇ ಪತ್ನಿ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಪರಿಶೀಲನೆಯ ಸಮಯದಲ್ಲಿ ಫರಾಜ್ ಮಲಿಕ್ ಮತ್ತು ಅವರ ಪತ್ನಿ ಹ್ಯಾಮ್ಲೀನ್ ಸಲ್ಲಿಸಿದ ದಾಖಲೆಗಳು ನಕಲಿ ಎಂದು ಕಂಡುಬಂದಿದೆ. ನಂತರ ಎಫ್‌ಆರ್‌ಆರ್‌ಒ ಕುರ್ಲಾ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದೆ ಎಂದು ಅವರು ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಫರಾಜ್ ಮಲಿಕ್ ಮತ್ತು ಅವರ ಪತ್ನಿ ವಿರುದ್ಧ 420 (ವಂಚನೆ),ವಿದೇಶಿಯರ ಕಾಯಿದೆಯ ನಿಬಂಧನೆಗಳು ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಮಂಗಳವಾರ ತಡರಾತ್ರಿ ಎಫ್‌ಐಆರ್ ದಾಖಲಿಸಿದ್ದಾರೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದರು.