ಶ್ರೀನಿವಾಸಪುರ: ಕೊಲೆ ಆರೋಪಿಯನ್ನು ಹಿಡಿಯಲೆತ್ನಿಸಿದ ವೇಳೆ ಗ್ರಾಮಸ್ಥರು ಆತನನ್ನು ತಮಗೆ ಬಿಟ್ಟುಕೊಡಬೇಕೆಂದು ನೂಕು ನುಗ್ಗಲು ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು, ಗ್ರಾಮ ದಲ್ಲಿರುವ ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ಪೊಲೀಸರು ಎಫ್ ಐಆರ್ ದಾಖಲು ಮಾಡಿದ್ದಾರೆ.
ಪೊಲೀಸರು ದಾಖಲಿಸಿದ ಎಫ್ಐಆರ್‌ನಿಂದ ನಂಬಿಹಳ್ಳಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಬಂಧನದ ಭೀತಿಯಿಂದ ಗ್ರಾಮದ ಜನರು ತಲೆಮರೆಸಿಕೊಂಡಿದ್ದು, ಇಡೀ ಗ್ರಾಮ ಬಿಕೋ ಎನ್ನುವಂತಾಗಿದೆ.
ಭಯದ ವಾತಾವರಣ: ಶ್ರೀನಿವಾಸಪುರ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ನಂಬಿಹಳ್ಳಿ ಗ್ರಾಮದಲ್ಲಿ ಸೆ.12ರಂದು ಪಟ್ಟಣದ ಮಟನ್ ವ್ಯಾಪಾರಿ ನಾಗೇಶ್ ಎಂಬ ವ್ಯಕ್ತಿ ಹಾಡಹಗಲೇ ತನ್ನ ಮೊದಲನೇ ಪತ್ನಿ ರಾಧಾ ಎಂಬುವರನ್ನು ಮಚ್ಚಿನಿಂದ ಕೊಲೆ ಮಾಡಿದ್ದ. ಈ ಸಂದರ್ಭದಲ್ಲಿ ಅಡ್ಡ ಬಂದ ಸಂಬಂಧಿಕರ ಮೇಲೂ ಸಹ ಮಾರಣಾಂತಿಕ ಹಲ್ಲೆ ನಡೆಸಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದನು. ಎಸ್ಪಿ ನಾರಾಯಣ್ ಹಾಗೂ ಪೊಲೀಸರ ಮೇಲೆ ಸಹ ಹಲ್ಲೆ ಮಾಡಿದ್ದು, ಇದರಿಂದ ಪೊಲೀಸರು ಗ್ರಾಮದಲ್ಲಿ ಬೀಡುಬಿಟ್ಟು ಆರೋಪಿಯನ್ನು ಹಿಡಿಯುವ ಪ್ರಯತ್ನ ಮಾಡಿದ್ದರು.
ಪೊಲೀಸ್ ಇಲಾಖೆ ಬಂದೋಬಸ್ತ್: ಎಫ್ಐಆರ್ ದಾಖಲು ಮಾಡಿರುವುದರಿಂದ ಯಾವ ಸಮಯದಲ್ಲಿ ಬಂದ ನಮ್ಮನ್ನು ಬಂಧಿಸುವರೋ ಎಂದು ಜನ ಗ್ರಾಮವನ್ನು ತೊರೆದಿದ್ದಾರೆ. ಇದರಿಂದ ರಸ್ತೆಗಳು ಹಾಗೂ ಮನೆಗಳಲ್ಲಿ ಜನರಿಲ್ಲದೇ ಇಡೀ ಗ್ರಾಮ ಬಿಕೋ ಎನ್ನುವಂತಾಗಿದೆ. ಪ್ರಸ್ತುತ ಗ್ರಾಮದಲ್ಲಿ ಡಿಆರ್ ವ್ಯಾನ್ ಇದ್ದು, ಪೊಲೀಸ್ ಇಲಾಖೆ ಬಂದೋಬಸ್ತ್ ಕಲ್ಪಿಸಿದೆ.
ಆರೋಪಿ ಬಂಧನದ ವೇಳೆ ಜನರಿಂದ ಅಡ್ಡಿ: ಆರೋಪಿಯನ್ನು ಅಟ್ಟಾಡಿಸಿಕೊಂಡು ಹೋಗುತ್ತಿದ್ದ ಗ್ರಾಮಸ್ಥರಿಗೆ ಎಸ್ಪಿ ನಾರಾಯಣ್ ಅವರು ಹಲವು ಬಾರಿ ಮನವಿ ಮಾಡಿ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಆತನಿಗೆ ನಾವು ಶಿಕ್ಷೆ ಕೊಡುತ್ತೇವೆ ಎಂದು ಹೇಳುತ್ತಿದ್ದರೂ, ಗ್ರಾಮಸ್ಥರು-ಪೊಲೀಸರ ಮಧ್ಯೆ ತಳ್ಳಾಟ ನಡೆಸಿದ್ದಾರೆ. ಇದರಿಂದ ಗ್ರಾಮಸ್ಥರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂಬ ಹಿನ್ನೆಲೆ ಒಂದು ಸಾವಿರ ಹೆಚ್ಚು ಜನರ ಮೇಲೆ ಎಫ್ಐಆರ್ ದಾಖಲು ಮಾಡಿರುವ ಕಾರಣ, ಬಹುತೇಕ ಗಂಡಸರು, ಮಹಿಳೆಯರು ಗ್ರಾಮ ತೊರೆದು ತಲೆ ಮರೆಸಿಕೊಂಡಿದ್ದಾರೆ.